ಚುನಾವಣೆ ಪ್ರಕ್ರಿಯೆ ಸುಗಮಗೊಳಿಸಲು 27 ಕೆಎಎಸ್‌ ಅಧಿಕಾರಿಗಳ ವರ್ಗಾವಣೆ

ಚುನಾವಣೆ ಪ್ರಕ್ರಿಯೆ ಸುಗಮವಾಗಿ ನಡೆಸುವ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯದ 27 ಕೆಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚುನಾವಣೆ ಪ್ರಕ್ರಿಯೆ ಸುಗಮವಾಗಿ ನಡೆಸುವ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯದ 27 ಕೆಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಲಬುರಗಿ ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಜಹಿರಾ ನಸೀಮ್‌ ಅವರನ್ನು ಹಾವೇರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ, ರಾಯಚೂರಿನ ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರನ್ನು ಕಲಬುರಗಿ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

ಅದೇ ರೀತಿ ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಕುಮಾರ್ ಅವರನ್ನು ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿಯಾಗಿ,  ಜನವರಿ 29ರಂದು ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದ ಟಿ.ಯೋಗೇಶ್‌ ಅವರ ವರ್ಗಾವಣೆ ಆದೇಶ ಮಾರ್ಪಡಿಸಿ, ಕೊಡಗು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹುದ್ದೆಗೆ ವರ್ಗ ಮಾಡಲಾಗಿದೆ.

ಬೆಂಗಳೂರು ಬಿಡಬ್ಲ್ಯುಎಸ್ಎಸ್‌ಬಿಯ ಮುಖ್ಯ ಆಡಳಿತಾಧಿಕಾರಿ ಮತ್ತು ಕಾರ್ಯದರ್ಶಿ ಕೃಷ್ಣ ಗೌಡ ತಾಯಣ್ಣನವರ್‌ ಅವರನ್ನು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಯಾಗಿ, ರಾಮನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ.ಪ್ರಶಾಂತ್‌ ಆರ್‌ ಅವರನ್ನು ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ (ಭೂ ಸ್ವಾಧೀನ)ಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ಕೆಐಎಡಿಬಿಯ ವಿಶೇಷ ಜಿಲ್ಲಾಧಿಕಾರಿ ಎಸ್‌.ಎನ್‌.ಬಾಲಚಂದ್ರ (ಭೂ ಸ್ವಾಧೀನ) ಅವರನ್ನು ಬಿಡಬ್ಲ್ಯುಎಸ್‌ಎಸ್‌ಬಿಯ ಮುಖ್ಯ ಆಡಳಿತಾಧಿಕಾರಿ ಮತ್ತು ಕಾರ್ಯದರ್ಶಿಯಾಗಿ, ಹುದ್ದೆಯ ನಿರೀಕ್ಷೆಯಲ್ಲಿದ್ದ ಜಗದೀಶ್‌ ನಾಯಕ್‌ ಅವರನ್ನು ರಾಯಚೂರು ಅಪರ ಜಿಲ್ಲಾಧಿಕಾರಿಯಾಗಿ, ಕೃಷಿ ಇಲಾಖೆಯ ಬೆಂಗಳೂರು ಜಂಟಿ ನಿರ್ದೇಶಕ ನಾಗರಾಜ್‌ ಆರ್‌.ಸಿಂಗ್ರೇರ್‌ ಅವರನ್ನು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ವರ್ಗ ಮಾಡಲಾಗಿದೆ.

ಧಾರವಾಡ ರಾಷ್ಟ್ರೀಯ ಹೆದ್ದಾರಿಗಳ ವಿಶೇಷ ಭೂ ಸ್ವಾಧೀನಾಧಿಕಾರಿ ಡಾ.ಎಸ್.ಎಸ್‌. ಮಧುಕೇಶ್ವರ್ ಅವರನ್ನು ಕುಂದಾಪುರ ಉಪ ವಿಭಾಗಾಧಿಕಾರಿಯಾಗಿ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಪೂಜಾರ ವೀರಮಲ್ಲಪ್ಪ ಅವರನ್ನು ಸೇಡಂ ಉಪವಿಭಾಗಾಧಿಕಾರಿಯಾಗಿ, ಮಂಜುನಾಥ್‌ ಡೋಂಬರ ಅವರ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ ಧಾರವಾಡ ರಾಷ್ಟ್ರೀಯ ಹೆದ್ದಾರಿಗಳ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರಿನ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಸಿ.ಎನ್‌. ಮಂಜುನಾಥ್‌ ಅವರನ್ನು ಕರ್ನಾಟಕ ಗೃಹ ಮಂಡಳಿಯ ಬೆಂಗಳೂರು ಉಪ ಪ್ರಧಾನ ವ್ಯವಸ್ಥಾಪಕರಾಗಿ, ರಾಯಚೂರು ವೈದ್ಯಕೀಯ ವಿಜ್ಞಾನಗಳ ಮುಖ್ಯ ಆಡಳಿತಾಧಿಕಾರಿ ರಾಯಪ್ಪ ಹುಣಸಗಿ ಅವರನ್ನು ಬಾಗಲಕೋಟೆಯ ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

ಹುದ್ದೆಯ ನಿರೀಕ್ಷೆಯಲ್ಲಿದ್ದ ಎನ್‌. ರಾಚಪ್ಪ ಅವರನ್ನು ಜಮಖಂಡಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಜಿಲ್ಲಾಧಿಕಾರಿಯಾಗಿ, ಬೆಂಗಳೂರು ಭೂಮಿ ಉಸ್ತುವಾರಿ ಕೋಶದ ಸಹಾಯಕ ಆಯುಕ್ತ ಎಚ್‌.ಅಮರೇಶ್‌ ಅವರನ್ನು ಬಿಬಿಎಂಪಿ ಉಪ ಆಯುಕ್ತ (ಭೂ ಸ್ವಾಧೀನ)ರಾಗಿ, ಬಿಬಿಎಂಪಿಯ ಪರೀಕ್ಷಾರ್ಥ ಸಹಾಯಕ  ಆಯುಕ್ತ ರಘುನಂದನ್‌ ಅವರನ್ನು ಮೈಸೂರು ಇನ್ಪ್ರಾಸ್ಟ್ರಕ್ಷರ್‌ ಕಾರಿಡಾರ್ ಯೋಜನೆಯ ಭೂ ಸ್ವಾಧೀನಾಧಿಕಾರಿ-2 ಹುದ್ದೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಜಮಖಂಡಿ ತಾಲೂಕು ಪಂಚಾಯತ್‌ ಪರೀಕ್ಷಾರ್ಥ ಕಾರ್ಯನಿರ್ವಹಣಾಧಿಕಾರಿ ಅಶೋಕ ತೇಲಿ ಅವರನ್ನು ಜಮಖಂಡಿ ಕೃಷ್ಣ ಮೇಲ್ದಂಡೆ ಯೋಜನೆಯ ಪುನರ್ವಸತಿ ಅಧಿಕಾರಿಯಾಗಿ, ಬೆಳಗಾವಿ ಮಹಾನಗರ ಪಾಲಿಕೆಯ ಪರೀಕ್ಷಾರ್ಥ ಉಪ ಆಯುಕ್ತ ಎಸ್‌.ಬಿ.ದೊಡ್ಡಗೌಡರ ಅವರನ್ನು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ, ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಸಂತೋಷ್‌ ಕಾಮಗೌಡ ಅವರನ್ನು ಶಹಪೂರ ತಾಲೂಕು ಭೀಮರಾಯನಗುಡಿ ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

ದಾವಣಗೆರೆ ಸ್ಮಾರ್ಟ್‌ ಸಿಟಿ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಪ್ರಸನ್ನ ಕುಮಾರ್ ಅವರನ್ನು ತುಮಕೂರು-ದಾವಣಗೆರೆ, ತುಮಕೂರು –ರಾಯದುರ್ಗ ಬ್ರಾಡ್‌ಗೇಜ್‌ ರೈಲ್ವೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ, ಬೆಳಗಾವಿ ಜಿಲ್ಲಾ ಪಂಚಾಯತ್‌ ಸಹಾಯಕ ಕಾರ್ಯದರ್ಶಿ ಗೀತಾ ಹುಡೆದ ಅವರನ್ನು ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ -6ರ ವಲಯ ಆಯುಕ್ತರಾಗಿ, ಹುದ್ದೆಯ ನಿರೀಕ್ಷೆಯಲ್ಲಿದ್ದ ಡಾ.ಬಿ.ಎಸ್‌. ಮಂಜುನಾಥ ಸ್ವಾಮಿ ಅವರನ್ನು ಬೆಂಗಳೂರು ಭೂಮಿ ಉಸ್ತುವಾರಿ ಕೋಶದ ವಿಶೇಷ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ವರ್ಗಾವಣೆಗೊಂಡಿರುವ ಎಸ್.ಪಿ.ಮಾರುತಿ ಅವರ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ ಅವರನ್ನು ಬಾಗಲಕೋಟೆಯ ಕೃಷ್ಣ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ವಿಭಾಗದ ವಿಶೇಷ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಮಂಡ್ಯ ಉಪ ವಿಭಾಗಾಧಿಕಾರಿ ಹುದ್ದೆಯಿಂದ ವರ್ಗಾವಣೆಗೊಂಡಿರುವ ಎಸ್‌.ಕುಸುಮ ಕುಮಾರಿ ಅವರ ವರ್ಗಾವಣೆ ಆದೇಶ ರದ್ದುಗೊಳಿಸಿ ಮೈಸೂರು ಕಬಿನಿ ಜಲಾಶಯ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಯಲ್ಲಿ ಮುಂದುವರಿಸಲಾಗಿದೆ.

ರಾಮನಗರ ಜಿಲ್ಲೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಜಯಮಾಧವ ಅವರನ್ನು ರಾಮನಗರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗೆ ಹಾಗೂ ರಾಮನಗರ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಯತೀಶ್‌ ಉಳ್ಳಾಲ್‌ ಅವರನ್ನು ರಾಮನಗರ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಈ ಅಧಿಕಾರಿಗಳನ್ನು ಅವರು ಹೊಂದಿರುವ ಹುದ್ದೆಯಿಂದ ತಕ್ಷಣ ನಿಯಂತ್ರಾಧಿಕಾರಿಗಳು ಬಿಡುಗಡೆ ಮಾಡಬೇಕು. ವರ್ಗಾವಣೆಗೊಂಡ ಅಧಿಕಾರಿಗಳು ಸೇರಿಕೆ ಕಾಲವನ್ನು ಉಪಯೋಗಿಸಿಕೊಳ್ಳದೆ ತಕ್ಷಣವೇ ವರ್ಗಾವಣೆ ಹೊಂದಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಈ ಬಗ್ಗೆ ಅನುಸರಣಾ ವರದಿಯನ್ನು ಮರು ಟಪಾಲಿನಲ್ಲಿಯೇ ಫ್ಯಾಕ್ಸ್‌ ಹಾಗೂ ಇಮೇಲ್‌ ಮೂಲಕ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಸರ್ಕಾರದ ಜಂಟಿ ಕಾರ್ಯದರ್ಶಿ (ಸೇವೆಗಳು) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com