ಬೆಂಗಳೂರು: ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್ ಪಿನ್ ನನ್ನು ಕೊಚ್ಚಿಯ ವಿಮಾನ ನಿಲ್ದಾಣದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಬಂಧನದ ಮೂಲಕ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿದಂತಾಗಿದೆ. ಕೆಲ ತಾಸುಗಳಲ್ಲಿ ಮಧ್ಯವರ್ತಿಗಳನ್ನು ಸಹ ಬಂಧಿಸಲಾಗುವುದು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರು ತನ್ನ ಹಿಂದೆ ಬಿದ್ದಿರುವುದನ್ನು ಅರಿತು ದುಬೈಗೆ ಪರಾರಿಯಾಗಲು ಯತ್ನಿಸುತ್ತಿದ್ದ ಅನಿಲ್ ಫ್ರಾನ್ಸಿಸ್ (31) ಎಂಬಾತನನನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಫ್ರಾನ್ಸಿಸ್ ಮಣಿಪಾಲ್ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದು, ಪ್ರೆಸ್ ನಲ್ಲಿಯೇ ಪ್ರಶ್ನೆ ಪತ್ರಿಕೆ ಇಟ್ಟುಕೊಂಡಿದ್ದ. ಪೊಲೀಸ್ ಕಾನ್ಸ್ ಟೇಬಲ್ ಪ್ರಶ್ನೆ ಪತ್ರಿಕೆ ಮಾತ್ರವಲ್ಲದೇ, ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರ ಹುದ್ದೆಗಳ ಪ್ರಶ್ನೆ ಪತ್ರಿಕೆಯನ್ನು ಈತ ಸೋರಿಕೆ ಮಾಡಿದ್ದ.
ಈ ಗ್ಯಾಂಗ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೂ ಪ್ರಯತ್ನಿಸಿತ್ತು. ಆದರೆ, ಅದರಲ್ಲಿ ವಿಫಲವಾಗಿತ್ತು. ಅಮೀರ್ ಅಹಮ್ಮದ್. ಸಿ. ಟಿ . ಬಸವರಾಜು, ಶಿವಕುಮಾರ್ ಇತರ ಆರೋಪಿಗಳಾಗಿದ್ದಾರೆ.
ಫ್ರಾನ್ಸಿಸ್ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವ, ಅಮೀರ್ ಕಾಮೇಡ್ ಕೆ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ತೊಡಗಿಸಿಕೊಂಡಿದ್ದ. ಮಣಿಪಾಲ್ ಪ್ರಿಟಿಂಗ್ ಪ್ರೆಸ್ ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಪ್ರವೀಣ್ ಕುಮಾರ್ ಮೂಲಕ ಪ್ರಶ್ನೆ ಪತ್ರಿಕೆ ಪಡೆಯಲಾಗಿತ್ತು. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದ ನಂತರ ಪ್ರವೀಣ್ ನನ್ನು ಕೆಲಸದಿಂದ ತೆಗೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ಆರೋಪಿಗಳು ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯ ಪ್ರಶ್ನೆ ಪತ್ರಿಕೆಯನ್ನು 6 ರಿಂದ 8 ಲಕ್ಷಕ್ಕೆ ಮಾರಾಟ ಮಾಡಿದ್ದರು. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಯ ಪ್ರಶ್ನೆ ಪತ್ರಿಕೆಗಾಗಿ 60 ಲಕ್ಷ ರೂ. ಸಂಗ್ರಹಿಸಿದ್ದರು.
ಈ ಎಲ್ಲಾ ಆರೋಪಿಗಳು ಪ್ರಶ್ನೆ ಪತ್ರಿಕೆಗಳ ಮಾರಾಟದಿಂದ 1.19 ಕೋಟಿ ರೂ. ಹಣ ಬಾಚಿಕೊಂಡಿದ್ದರು. ಫ್ರಾನ್ಸಿಸ್ ಬಂಧನದೊಂದಿಗೆ ಪೊಲೀಸರು ಎಲ್ಲಾ 150 ಮಂದಿಯನ್ನು ಬಂಧಿಸಿದ್ದು, 67. 7 ಲಕ್ಷ ಹಣ, 17 ವಾಹನಗಳು ಹಾಗೂ 36 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.