ಟಿವಿ ಚಾನಲ್ ವೀಕ್ಷಣೆಗೆ ಹೊಸ ದರ ವ್ಯವಸ್ಥೆ: ಗ್ರಾಹಕರಿಂದ ಮಿಶ್ರ ಪ್ರತಿಕ್ರಿಯೆ
ಬೆಂಗಳೂರು: ಟಿವಿ ಚಾನಲ್ ಗಳ ವೀಕ್ಷಣೆಗೆ ಫೆಬ್ರವರಿ 1 ರಿಂದ ಭಾರತೀಯ ದೂರ ಸಂಪರ್ಕ ನಿಯಂತ್ರಣಾ ಪ್ರಾಧಿಕಾರ ಜಾರಿಗೆ ತಂದಿರುವ ಹೊಸ ದರ ವ್ಯವಸ್ಥೆಗೆ ಗ್ರಾಹಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಾವು ವೀಕ್ಷಿಸುವ ಚಾನಲ್ ಗಳ ಗುಚ್ಚಕ್ಕೆ ಹಣ ಪಾವತಿಸುವ ಗ್ರಾಹಕರು ಬಿಲ್ ಹೆಚ್ಚಾಗಬಹುದೆಂದು ಹೇಳಿದರೆ, ಡಿಟಿಹೆಚ್ ಪೂರೈಸುವ ಪ್ರೀಮಿಯಂ ಪ್ಯಾಕೇಜ್ ಆಯ್ಕೆ ಮಾಡಿಕೊಂಡ ಗ್ರಾಹಕರು ತಿಂಗಳ ವೆಚ್ಚ ಕಡಿಮೆಯಾಗಲಿದೆ ಎನ್ನುತ್ತಾರೆ.
ನೂತನ ವ್ಯವಸ್ಥೆಯಿಂದಾಗಿ ಸ್ಥಳೀಯ ಕೇಬಲ್ ಅಪರೇಟರುಗಳಿಗೆ ಅನಾನುಕೂಲವಾಗಿದೆ. ಈ ವ್ಯವಸ್ಥೆಯಲ್ಲಿ ಗ್ರಾಹಕರು ತಮ್ಮಗೆ ಇಷ್ಟಬಂದ ಚಾನೆಲ್ ವೀಕ್ಷಿಸಲು ಹಚ್ಚಿನ ಹಣ ನೀಡಬೇಕಾಗಿರುವುದರಿಂದ ಇದರಿಂದ ಗ್ರಾಹಕರಿಗೆ ಯಾವುದೇ ಅನುಕೂಲವಾಗುವುದಿಲ್ಲ ಎಂದು ಕೇಬಲ್ ಅಪರೇಟರುಗಳು ಆರೋಪಿಸಿದ್ದಾರೆ.
ಈ ಹಿಂದೆ 450 ಚಾನಲ್ ವೀಕ್ಷಿಸಲು 300 ರೂ. ಪಾವತಿಸಲಾಗುತಿತ್ತು. ಆದರೆ, ಈಗ ಬೇಸ್ ಪ್ಯಾಕ್ 130 ಪ್ಲಸ್ ಶೇ,18 ರಷ್ಟು ಜಿಎಸ್ ಟಿ ಇದೆ. ಈ ಬೇಸ್ ಪ್ಯಾಕ್ ನಲ್ಲಿ ಭಕ್ತಿ ಪ್ರಧಾನ ಚಾನಲ್ ಗಳು ಇವೆ. ಇವುಗಳನ್ನು ನೋಡುವುದಿಲ್ಲ, ನಮ್ಮ ಬಿಲ್ 400 ರೂಪಾಯಿಗೆ ಹೆಚ್ಚಾಗಿದೆ ಎಂದು ಕೇಬಲ್ ಟಿವಿ ಬಳಕೆದಾರರಾದ ಚೈತ್ರಾ ಸತ್ಯನಾರಾಯಣ್ ಹೇಳುತ್ತಾರೆ.
ಪ್ರಾದೇಶಿಕ ಪ್ಯಾಕ್ ಗಾಗಿ ಪ್ರತ್ಯೇಕ ದರ ಪಾವತಿಸುತ್ತಿದ್ದು,180 ಹೆಚ್ಚಾಗಿದೆ ಎಂದು ಸುನೈನಾ ಮಾಲಿ ಹೇಳುತ್ತಾರೆ. ಆದರೂ, ಪ್ರೀಮಿಯಂ ಪ್ಯಾಕೇಜ್ ಚಂದಾದಾರರು ಹೊಸ ವ್ಯವಸ್ಥೆಯಿಂದ ಕಡಿಮೆ ಬಿಲ್ ಬರುವುದಾಗಿ ಹೇಳುತ್ತಾರೆ.
ಡಿಟಿಹೆಚ್ ಬಳಕೆದಾರರಾದ ರಾಘವ್ ಚಂದ್ರಶೇಖರ್ ಮಾತನಾಡಿ, ಈ ಹಿಂದೆ ನಾನು ತಿಂಗಳಿಗೆ 1,250 ರೂ.ಪಾವತಿಸುತ್ತಿದೆ. ಮೂಲ ಪ್ಯಾಕ್ `565 ಜೊತೆಗೆ ತೆರಿಗೆಗಳು, ಹೆಚ್ಚುವರಿ ಶುಲ್ಕಗಳು ಕ್ರೀಡಾ ಪ್ಯಾಕ್ ಮತ್ತು ಇಂಗ್ಲೀಷ್ ಮೂವಿ ಪ್ಯಾಕ್ ಶುಲ್ಕಗಳನ್ನು ಒಳಗೊಂಡಿತ್ತು. ಆದರೆ, ಈಗ ಬ್ರಾಡ್ ಕಾಸ್ಟರ್ ಪ್ಯಾಕ್ ನಲ್ಲಿ ಚಾನೆಲ್ ಆಯ್ಕೆ ಮಾಡಿಕೊಳ್ಳುವುದರಿಂದ ಹೊರೆ ಕಡಿಮೆಯಾಗಿದೆ. ಪ್ರತಿ ತಿಂಗಳ ದರ 813ಕ್ಕೆ ಇಳಿಕೆಯಾಗಿದೆ ಎಂದಿದ್ದಾರೆ.
ನೂತನ ದರ ವ್ಯವಸ್ಥೆಯಿಂದ ದರ ಹೆಚ್ಚಿಸಿ ಜನರಿಂದ ಹಣ ಮಾಡುವ ಹಗರಣವಾಗಿದೆ ಎಂದು ಕೇಬಲ್ ಟಿವಿ ಅಪರೇಟರುಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ