ಬೆಂಗಳೂರು: ಮಗನನ್ನು ಬೈದದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ ತಂದೆ, ಬಂಧನ

ತನ್ನ ಮನೆಯ ಟೆರೇಸ್ ನಲ್ಲಿ ಆಟವಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ 21 ವರ್ಷದ ಯುವಕನ ಮೇಲೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ತನ್ನ ಮನೆಯ ಟೆರೇಸ್ ನಲ್ಲಿ ಆಟವಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ 21 ವರ್ಷದ ಯುವಕನ ಮೇಲೆ ಭೀಕರವಾಗಿ ಹಲ್ಲೆ ಮಾಡಿದ ಘಟನೆ ನಗರದಲ್ಲಿ ಕಳೆದ ಭಾನುವಾರ ನಡೆದಿದೆ.
ನಡೆದ ಘಟನೆಯೇನು?: ನಾಗವಾರದ ಕುಪ್ಪಸ್ವಾಮಿ ಲೇ ಔಟ್ ನ ನಿವಾಸಿ ಅಜಂ ಪಾಷಾ ತನಗೆ ಬೈದನೆಂದು 8 ವರ್ಷದ ಬಾಲಕ ಅಳುತ್ತಾ ಹೋಗಿ ತನ್ನ ಪೋಷಕರಿಗೆ ಹೇಳಿದನು. ಇದರಿಂದ ಸಿಟ್ಟುಗೊಂಡ ಬಾಲಕನ ತಂದೆ ಪಾಶಾ ಮೇಲೆ ಚಾಕು ಮತ್ತು ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದಾನೆ.
ಶೋರೂಮೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಅಜಂ ಪಾಶಾ ತಲೆಗೆ ಏಟು ಬಿದ್ದಿರುವುದರಿಂದ ನಿಮ್ಹಾನ್ಸ್ ಗೆ ಚಿಕಿತ್ಸೆಗೆ ದಾಖಲಾಗಿದ್ದಾನೆ. ಅಪಾಯದಿಂದ ಪಾರಾಗಿದ್ದು ತೀವ್ರ ನಿಗಾ ಘಟಕದಲ್ಲಿದ್ದಾನೆ. ಬಾಲಕನ ತಂದೆ ಅಬ್ದುಲ್ ನನ್ನು ಬಂಧಿಸಲಾಗಿದೆ.
ಕಳೆದ ಭಾನುವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಈ ಘಟನೆ ನಡೆದಿದೆ. ಪಾಶಾ ತನ್ನ ಮನೆಯಲ್ಲಿ ನಿದ್ದೆ ಮಾಡುತ್ತಿದ್ದ. ತನ್ನ ಮನೆಯ ಅಡುಗೆ ಮನೆ ಮೇಲೆ ಸಿಮೆಂಟ್ ಛಾವಣಿಯಿಂದ ಜೋರಾಗಿ ಸದ್ದು ಬಂದಿದ್ದು ನೋಡಿ ಮೇಲೆ ಹೋಗಿ ನೋಡಿದಾಗ ಮಕ್ಕಳು ಗಲಾಟೆ ಮಾಡುತ್ತಿದ್ದರು. ಅಲ್ಲದೆ ಕಲ್ಲು ಮಣ್ಣುಗಳನ್ನು ಛಾವಣಿ ಮೇಲೆ ತಂದು ಹಾಕುತ್ತಿದ್ದರು. 
ಇದರಿಂದ ಪಾಶಾ ಸಿಟ್ಟುಗೊಂಡು ಆಟವಾಡುವುದನ್ನು ನಿಲ್ಲಿಸುವಂತೆ ಮಕ್ಕಳಿಗೆ ಬೈದಿದ್ದಾನೆ. ಬಾಲಕ ಹೋಗಿ ತನ್ನ ತಂದೆಗೆ ಹೇಳಿದ. ಅಬ್ದುಲ್ ಮತ್ತು ಆತನ ಮನೆಯವರು ಪಾಶಾ ಮನೆಗೆ ಬಂದು ಬೈಯಲು ಆರಂಭಿಸಿದರು. ಒಮ್ಮೆ ಸ್ಥಳೀಯರು, ಮತ್ತೊಮ್ಮೆ ಪೊಲೀಸರು ಬಂದು ಜಗಳ ನಿಲ್ಲಿಸಿದರೂ ಕೂಡ ಜಗಳ ನಿಂತಿರಲಿಲ್ಲ.
ಕೊನೆಗೆ ಅಪರಾಹ್ನ 3.45ರ ಸುಮಾರಿಗೆ ಅಬ್ದುಲ್ ನ ಮಗಳು ಬಂದು ನನ್ನನ್ನು ಹೊಡೆಯಲು ಆರಂಭಿಸಿದಳು. ಮಗ ಪಾಶಾ ನನ್ನನ್ನು ಬಚಾವ್ ಮಾಡಲು ಬಂದನು. ಅಷ್ಟು ಹೊತ್ತಿಗೆ ಅಬ್ದುಲ್ ಚಾಕು ಹಿಡಿದುಕೊಂಡು ಬಂದು ನನ್ನ ಮಗನ ಮೇಲೆ ದಾಳಿ ನಡೆಸಲು ಆರಂಭಿಸಿದ. ಪಾಶಾನ ತಲೆ, ಕೈ, ಹೆಗಲಿಗೆ ಚಾಕು ಇರಿತದಿಂದ ಗಾಯಗಳಾಗಿತ್ತು. ಕಲ್ಲಿನಿಂದ ಅಬ್ದುಲ್ ತಲೆ ಮತ್ತು ಎದೆಗೆ ಹೊಡೆಯಲಾರಂಭಿಸಿದ. ಆಗ ನೆರೆಹೊರೆಯವರು ಬಂದು ಕಾಪಾಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು ಎನ್ನುತ್ತಾರೆ ಪಾಶಾನ ತಾಯಿ ಫಾತಿಮಾ.
ಘಟನೆ ಹಿನ್ನಲೆಯಲ್ಲಿ ಅಬ್ದುಲ್ ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com