ಮೈಸೂರು: ‘ರೈಲು ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ’ ಈ ಒಂದು ದೂರವಾಣಿ ಕರೆ ರೈಲು ಪ್ರಯಾಣಿಕರ ಆತಂಕ, ರೈಲ್ವೆ ಪೊಲೀಸರು ಹಾಗೂ ಅಧಿಕಾರಿಗಳ ಬಿರುಸಿನ ತಪಾಸಣೆಗೆ ಕಾರಣವಾಗಿತ್ತು. ಆದರೆ ಹುಸಿ ಬಾಂಬ್ ಕರೆ ಎಂದು ತಿಳಿದುಬಂದಾಗ ಎಲ್ಲರೂ ನಿಟ್ಟುಸಿರಿಟ್ಟಿದ್ದಾರೆ.
ಶುಕ್ರವಾರ ಮುಂಜಾನೆ ರೈಲ್ವೆ ಅಧಿಕಾರಿಗಳಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ರೈಲು ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ. ಆದರೆ ಯಾವ ನಿಲ್ದಾಣ ಎಂದು ಸೂಚಿಸಿರಲಿಲ್ಲ. ಹೀಗಾಗಿ ಮೈಸೂರು ನಗರ ರೈಲ್ವೆ ಸೇರಿದಂತೆ ಎಲ್ಲ ನಿಲ್ದಾಣಗಳಲ್ಲೂ ತಪಾಸಣೆ ಆರಂಭಿಸಲಾಯಿತು.
ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಪ್ರಯಾಣಿಕರಿದ್ದ ರೈಲುಗಳನ್ನು ನಿಲ್ಲಿಸಿ ತಪಾಸಣೆಗೆ ಮುಂದಾದರು. ಎಲ್ಲಿಯೂ ಬಾಂಬ್ ಪತ್ತೆಯಾಗದ ಕಾರಣ ‘ಹುಸಿ ಬಾಂಬ್ ಕರೆ’ ಪ್ರಕರಣ ದಾಖಲಿಸಿಕೊಳ್ಳಲಾಯಿತು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತ ಚಾಮರಾಜನಗರ, ಬಾಗಲಕೋಟೆ ನಿಲ್ದಾಣಗಳಲ್ಲಿ ಸಹ "ಬಾ<ಬ್" ಇದೆ ಎನ್ನುವ ಹುಸಿ ಕರೆಗಳು ಬಂದಿದ್ದು ಅಲ್ಲಿ ಸಹ ತಪಾಸಣೆ ನಡೆದ ವರದಿಯಾಗಿದೆ.