ಏರೋ ಇಂಡಿಯಾ ವೈಮಾನಿಕ ಪ್ರದರ್ಶನ : ಅಗ್ನಿ ಆಕಸ್ಮಿಕದಲ್ಲಿ 300 ಕಾರುಗಳ ಆಹುತಿ; ನೆರವಿಗೆ ಸಹಾಯವಾಣಿ

ಬೆಂಕಿ ಅನಾಹುತದಲ್ಲಿ ಸುಟ್ಟು ಭಸ್ಮವಾಗಿರುವ ಕಾರುಗಳ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಸಹಾಯವಾಣಿ ಆರಂಭಿಸುವುದಾಗಿ ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನದ ವಾಹನ ನಿಲುಗಡೆ ಪ್ರದೇಶದಲ್ಲಿ ಇಂದು ಮಧ್ಯಾಹ್ನ 12ರ ಸುಮಾರಿಗೆ ಹಠಾತ್ ಬೆಂಕಿ ಕಾಣಿಸಿಕೊಂಡ ಪರಿಣಾಮ 300ಕ್ಕೂ ಹೆಚ್ಚು ಕಾರುಗಳು ಆಹುತಿಯಾಗಿದ್ದು, ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದೆ.

ಹೊಗೆ ಕಾಣಿಸಿಕೊಂಡ ಸ್ವಲ್ಪ ಹೊತ್ತಿನ ನಂತರ ಏರೋ ಇಂಡಿಯಾದಲ್ಲಿ ನಿಯೋಜನೆಗೊಂಡಿದ್ದ ಅಗ್ನಿಶಾಮಕ ಸಿಬ್ಬಂದಿ, ಕ್ಷಿಪ್ರ ಕಾರ್ಯಪಡೆ ಹಾಗೂ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದವು. ವಾಯುಪಡೆಯ ಹೆಲಿಕಾಪ್ಟರ್ ಒಂದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವೈಮಾನಿಕ ಪರಿಶೀಲನೆ ನಡೆಸಿತು.

 ರಕ್ಷಣಾ ಇಲಾಖೆಯ ಸಿಬ್ಬಂದಿ ಘಟನೆಯ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದರಿಂದ ಜನರು ಮತ್ತಷ್ಟು ಕಂಗಾಲಾಗಿದ್ದರು. ದಟ್ಟ ಹೊಗೆಯಿಂದ ಆಗಸವನ್ನೆಲ್ಲ ವ್ಯಾಪಿಸಿ ವಾತಾವರಣದಲ್ಲಿ ಕೂಡ ಬದಲಾವಣೆ ಕಂಡುಬಂದಿದ್ದರಿಂದ ಕೆಲ ಕಾಲ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಯಿತು.

ಅಗ್ನಿ ಆಕಸ್ಮಿಕಕ್ಕೆ ಒಣಹುಲ್ಲಿನ ಬೆಂಕಿ ಕಾಣಿಸಿಕೊಂಡಿದ್ದೆ ಕಾರಣ ಎಂದು ಅಗ್ನಿ ಶಾಮಕ ಹಾಗೂ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಒಣಹುಲ್ಲಿನ ಮೇಲೆ ಯಾರೋ ಸಿಗರೇಟ್ ಸೇದಿ ಎಸೆದಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಊಹಾಪೋಹಗಳು ಕೇಳಿ ಬರುತ್ತಿದೆ. ಇದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಸಂಭವಿಸಿದ ವೇಳೆ ಸ್ಥಳದಲ್ಲಿದ್ದ ಕೆಲ ಯುವಕರು ಬೆಂಕಿ ನಂದಿಸಲು ಹಾಗೂ ಕಾರಿನಲ್ಲಿದ್ದ ಕೆಲ ಚಾಲಕರನ್ನು ಎಚ್ಚರಿಸಿ ಹೊರ ತರಲು ನೆರವಾಗಿದ್ದಾರೆ.

ಸಹಾಯವಾಣಿ ಆರಂಭ
 ಮಧ್ಯಾಹ್ನ ಅಗ್ನಿ ಅನಾಹುತ ಸಂಭವಿಸಿದ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್  ಮತ್ತಿತರರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಕಾರು ಕಳೆದುಕೊಂಡ ಕೆಲವರು  ಅವರಿಗೆ ಸ್ಥಳದಲ್ಲೇ ದೂರು ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಕಿ ಅನಾಹುತದಲ್ಲಿ ಸುಟ್ಟು ಭಸ್ಮವಾಗಿರುವ ಕಾರುಗಳ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಸಹಾಯವಾಣಿ ಆರಂಭಿಸುವುದಾಗಿ ತಿಳಿಸಿದರು.
ಕಾರು ಕಳೆದುಕೊಂಡವರಿಗೆ ವಿಮಾ ಪರಿಹಾರ ದೊರಕಿಸಿಕೊಡಲು ವ್ಯವಸ್ಥೆ ಮಾಡಲಾಗುವುದು. ವಿಮಾ ಅಧಿಕಾರಿಗಳಿಗೆ ಈಗಾಗಲೇ ಸೂಕ್ತ ನಿರ್ದೇಶನ ನೀಡಲಾಗಿದ್ದು, ವಾಹನಗಳ ವಿವರ ಪಡೆಯಲು ಕಾರು ಮಾಲೀಕರಿಗೆ ಪೊಲೀಸ್ ಇಲಾಖೆ ಆರಂಭಿಸಿರುವ ಸಹಾಯವಾಣಿ ನೆರವಾಗಲಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com