5 ಪಿಂಕ್ ಬೇಬಿಗಳಿಗೆ ಪಾಲಿಕೆಯಿಂದ ತಲಾ 5 ಲಕ್ಷ ಬಹುಮಾನ: ಮಾರ್ಚ್ 31ರವರೆಗೆ ಸ್ಕೀಮ್ ಅವಧಿ ವಿಸ್ತರಣೆ

ಹೊಸ ವರ್ಷದ ಮೊದಲ ದಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 24 ಆಸ್ಪತ್ರೆಗಳಲ್ಲಿ ಐದು ಹೆಣ್ಣು ಮಕ್ಕಳು ಜನಿಸಿದ್ದು, ...
ಮಂಗಳವಾರ ಜನಿಸಿದ ನವಜಾತ ಶಿಶು
ಮಂಗಳವಾರ ಜನಿಸಿದ ನವಜಾತ ಶಿಶು
ಬೆಂಗಳೂರು: ಹೊಸ ವರ್ಷದ ಮೊದಲ ದಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 24 ಆಸ್ಪತ್ರೆಗಳಲ್ಲಿ ಐದು ಹೆಣ್ಣು ಮಕ್ಕಳು ಜನಿಸಿದ್ದು, ‘ಪಿಂಕ್ ಬೇಬಿ’ ಯೋಜನೆಯಡಿ ಪಾಲಿಕೆ ತಲಾ 5 ಲಕ್ಷ ರು. ಠೇವಣಿ ಇಡಲಿದೆ.
ಕಳೆದ ವರ್ಷದಿಂದ ಪಾಲಿಕೆ ಆಸ್ಪತ್ರೆಯಲ್ಲಿ ಹುಟ್ಟುವ ಮೊದಲ ಹೆಣ್ಣುಮಗುವಿನ ವಿದ್ಯಾಭ್ಯಾಸಕ್ಕಾಗಿ ಮಗುವಿನ ತಾಯಿಯ ಹೆಸರಿನಲ್ಲಿ 5 ಲಕ್ಷ ರು. ಠೇವಣಿ ಇಡುವುದಾಗಿ ಮಾಜಿ ಮೇಯರ್ ಆರ್.ಸಂಪತ್‌ರಾಜ್ ಘೋಷಿಸಿದ್ದರು. ಅದರಂತೆ, ಜನವರಿ ರಾತ್ರಿ ಹುಟ್ಟಿದ್ದ ಮೊದಲ ಹೆಣ್ಣು ಮಗುವಿನ ಪೋಷಕರಿಗೆ 5 ಲಕ್ಷ ರು. ಚೆಕ್ ಕೂಡಾ ವಿತರಣೆ ಮಾಡಿದ್ದರು.
ಅದನ್ನು ಬಿಬಿಎಂಪಿ ಈ ಬಾರಿಯೂ ಮುಂದುವರಿಸಿದ್ದು, ಅದಕ್ಕಾಗಿ ಪಾಲಿಕೆ ವ್ಯಾಪ್ತಿಯಲ್ಲಿರುವ 24 ಆಸ್ಪತ್ರೆಗಳಲ್ಲಿ ಮೊದಲು ಜನಿಸುವ ಹೆಣ್ಣುಮಗುವಿನ ವಿದ್ಯಾಭ್ಯಾಸಕ್ಕೆ ತಲಾ 5 ಲಕ್ಷ ರು. ಠೇವಣಿ ಇಡಲು ಕಳೆದ ಬಜೆಟ್‌ನಲ್ಲಿ 1.20 ಕೋಟಿ ರು.ಗಳನ್ನು ಮೀಸಲಿಟ್ಟಿದೆ.
ತಾವರೆಕೆರೆ, ಗಂಗಾನಗರ, ರಾಜಾಜಿನಗರ, ನಂದಿನಿ ಲೇಔಟ್, ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆಗಳಲ್ಲಿ ಮಂಗಳವಾರ ಒಟ್ಟು ಐದು ಹೆಣ್ಣುಮಕ್ಕಳು ಜನಿಸಿವೆ. ಬಿಬಿಎಂಪಿ ಆರೋಗ್ಯ ವೈದ್ಯಾಧಿಕಾರಿಗಳ ತಂಡ ಈ ಆಸ್ಪತ್ರೆಗಳಿಗೆ ಭೇಟಿ ನೀಡಿ ಹೆಣ್ಣುಶಿಶುಗಳು ಸಹಜವಾಗಿ ಹುಟ್ಟಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಪಿಂಕ್ ಬೇಬಿ ಯೋಜನೆಗೆ ಅರ್ಹ ಶಿಶುಗಳು ಎಂದು ನಿಗಧಿಪಡಿಸಿದ್ದಾರೆ.
ಅದರಂತೆ ತಾವರೆಕೆರೆ ಹೆರಿಗೆ ಆಸ್ಪತ್ರೆಯಲ್ಲಿ 12.50ಕ್ಕೆ ಲಕ್ಷ್ಮೀ ಬುದ್ಧ ಮತ್ತು ಆಕಾಶ್ ಬುದ್ಧದಂಪತಿಗೆ ಹುಟ್ಟಿದ ಹೆಣ್ಣುಮಗು ಪಿಂಕ್ ಬೇಬಿ ಯೋಜನೆಗೆ ಅರ್ಹವಾದ ಮೊದಲ ಹೆಣ್ಣುಶಿಶುವಾಗಿದೆ. 
ಬಳಿಕ ಗಂಗಾನಗರ ಹೆರಿಗೆ ಆಸ್ಪತ್ರೆಯಲ್ಲಿ ಉದಯಕುಮಾರ್ ಮತ್ತು ಆಶಾ ದಂಪತಿಗೆ 1.12 ನಿಮಿಷಕ್ಕೆ, ರಾಜಾಜಿನಗರ ಹೆರಿಗೆ ಆಸ್ಪತ್ರೆಯಲ್ಲಿ ಶಶಿಕಲಾ ಮತ್ತು ಶಿವ ದಂಪತಿಗೆ 4.08ಕ್ಕೆ, ನಂದಿನಿ ಲೇಔಟ್ ಹೆರಿಗೆ ಆಸ್ಪತ್ರೆಯಲ್ಲಿ ಮುಜಾಕೀರ ಬಾನು ಮತ್ತು ಸೈಯದ್ ಸೈಮನ್ ದಂಪತಿಗೆ 5.36 ನಿಮಿಷಕ್ಕೆೆ ಹಾಗೂ ತಿಮ್ಮಯ್ಯ ರಸ್ತೆಯ ಹೆರಿಗೆ ಆಸ್ಪತ್ರೆಯಲ್ಲಿ ನೂರ್ ಪಾತಿಮಾ ಮತ್ತು ಸೈಯದ್ ವಸೀಮ್ ದಂಪತಿಗೆ ಬೆಳಗ್ಗೆ 8.22ಕ್ಕೆ ಹೆಣ್ಣು ಮಗು ಜನನವಾಗಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com