ಕನ್ನಡ ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣವಾಗಲಿ: ಚಂದ್ರಶೇಖರ್ ಕಂಬಾರ ಕರೆ

1 ರಿಂದ 7ನೇ ತರಗತಿವರೆಗಿನ ಕನ್ನಡ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು ಎಂದು 84ನೇ ಅಖಿಲ ಭಾರತ ಕನ್ನಡ...
ಚಂದ್ರಶೇಖರ್ ಕಂಬಾರ
ಚಂದ್ರಶೇಖರ್ ಕಂಬಾರ
ಧಾರವಾಡ: 1 ರಿಂದ 7ನೇ ತರಗತಿವರೆಗಿನ ಕನ್ನಡ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು ಎಂದು 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರ ಅವರು ಶುಕ್ರವಾರ ಹೇಳಿದ್ದಾರೆ.
ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ನುಡಿಜಾತ್ರೆಯ ಅಧ್ಯಕ್ಷ ಭಾಷಣ ಮಾಡಿದ ಕಂಬಾರ ಅವರು, ನನಗೆ ಕಲಿಸಿದ ಗುರುಗಳೊಬ್ಬರು ಈಗ ನನ್ನೆದುರಿಗಿಲ್ಲ ನಿಜ. ಸಾಲದಕ್ಕೆ ನನ್ನಿಬ್ಬರು ಸ್ನೇಹಿತರಾದ ಎಂಎಂ ಕಲಬುರ್ಗಿ ಮತ್ತು ಗಿರಡ್ಡಿ ಗೋವಿಂದರಾಜ್ ಅವರನ್ನೂ ಕಳೆದುಕೊಂಡು ಹತಾಶ ಭಾವದಿಂದ ನಿಂತ ನನ್ನನ್ನು ಅವರೆಲ್ಲರ ಚೇತನಗಳು ಆಶೀರ್ವದಿಸುತ್ತಿವೆ ಎಂಬ ನಂಬಿಕೆಯಿಂದ ಒಂದೆರಡು ಮಾತುಗಳನ್ನಾಡುತ್ತೇನೆ ಎಂದರು.
ಕರ್ನಾಟಕ ಇಬ್ಭಾಗವಾಗಬೇಕು ಎಂಬ ಕೂಗಿಗೆ ಕಡಿವಾಣ ಹಾಕಿ ವಿಜ್ಞಾನ ಪಠ್ಯಕ್ರಮವನ್ನು ಕನ್ನಡದಲ್ಲಿ ಕಲಿಸುವ ಸಂಕಲ್ಪಕ್ಕೆ ಶಿಕ್ಷಕರು ಬದ್ಧತೆಯನ್ನು ಪ್ರದರ್ಶಿಸಿ, ತಾಯಿನುಡಿಯಲ್ಲಿ ಶಿಕ್ಷಣ ನೀಡಬೇಕೆಂಬ ಸಿದ್ಧಾಂತಕ್ಕೆ ಪ್ರತಿಯೊಬ್ಬರೂ ಬದ್ಧರಾಗಿರಬೇಕು ಎಂದರು.
ನಮ್ಮ ಬದುಕಿಗೆ ಕನ್ನಡ ಭಾಷೆಯೊಂದೇ ಜೀವ, ಜೀವನ, ಪರಂಪರೆ ಮತ್ತು ಸಂಸ್ಕೃತಿ. ಆದ್ದರಿಂದ 1 ರಿಂದ 7ನೇ ತರಗತಿವರೆಗಿನ ಕನ್ನಡ ಪ್ರಾಥಮಿಕ ಶಿಕ್ಷಣವನ್ನು (ಪ್ರಾಥಮಿಕ ಪೂರ್ವ ತರಗತಿಯೊಂದಿಗೆ) ರಾಷ್ಟ್ರೀಕರಣ ಮಾಡಬೇಕು. ತುರ್ತಾಗಿ, ತೀವ್ರವಾಗಿ ಸರ್ಕಾರಿ ಶಾಲೆಗಳ ಸುಧಾರೀಕರಣ ನಡೆಯಬೇಕು. ಅನಂತರದ 8ನೇ ತರಗತಿಯಿಂದ ಶಿಕ್ಷಣವನ್ನು ಖಾಸಗಿಯವರಿಗೆ ಕೊಡಬಹುದು. ಇದಾಗದಿದ್ದಲ್ಲಿ ರಾಜ್ಯ ಭಾಷೆಗಳಿಗೆ ಭವಿಷ್ಯವಿಲ್ಲ ಕಂಬಾರ ಹೇಳಿದ್ದಾರೆ.
ನಮ್ಮ ನಡುವೆಯೇ ಪ್ರತ್ಯೇಕ ರಾಜ್ಯ ಬೇಕು ಎನ್ನುವ ಮಹಾನುಭಾವರಿದ್ದಾರೆ. ಒಂದೇ ಜಿಲ್ಲೆಯನ್ನು ಎರಡಾಗಿ ಒಡೆಯಬೇಕೆಂಬುವವರೂ ಇದ್ದಾರೆ. ಅನೇಕ ಕರ್ನಾಟಕಗಳು ಒಂದಾಗುವುದಕ್ಕೇ ಏನಾಯಿತೆಂದು ಕೊಂಚ ನೆನಪು ಮಾಡಿಕೊಳ್ಳೋಣ. ಒಂದಿರುವ ಜಿಲ್ಲೆಯನ್ನು ಎರಡು ಮಾಡಿ ಇಡೀ ಜಿಲ್ಲೆಯನ್ನು ಕಳೆದುಕೊಳ್ಳದಿರೋಣ ಎಂದು ಕಂಬಾರ ಕರೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com