ಭಾರತ್ ಬಂದ್: ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ, ನಾಳೆ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಎರಡು ದಿನಗಳ ಭಾರತ್ ಬಂದ್ ಗೆ ಮೊದಲ ದಿನ ಕರ್ನಾಟಕದಲ್ಲಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಎರಡು ದಿನಗಳ ಭಾರತ್ ಬಂದ್ ಗೆ ಮೊದಲ ದಿನ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಾಳೆ ಬಹುತೇಕ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಘೋಷಿಸಲಾಗಿದೆ.
ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿದರೇ, ಬಹುತೇಕ ಕಡೆಗಳಲ್ಲಿ ಕೇವಲ ಪ್ರತಿಭಟನೆಗೆ ಮಾತ್ರ ಭಾರತ್ ಬಂದ್ ಸೀಮಿತವಾಗಿತ್ತು. ಆದರೆ, ಈಗಾಗಲೇ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಭಾರತ್​​ ಬಂದ್​​ಗೆ ಕರೆ ನೀಡಿದ್ದು, ನಾಳೆಯೂ ಬಂದ್​ ಮುಂದುವರೆಯಲಿದೆಯಾ? ಎಂಬ ಪ್ರಶ್ನೆ ಬಹುತೇಕರಲ್ಲಿ ಹುಟ್ಟಿಕೊಂಡಿದೆ. 
ನಾಳೆಯೂ ಬಂದ್​ ಆಚರಣೆ ಮುಂದುವರೆಸುವುದಾಗಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಘೋಷಿಸಿದೆ. ಆದರೆ, ಬಂದ್​ಗೆ ಇಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ ಎಂದು ಘೋಷಿಸಲಾಗಿದೆ. ಜೊತೆಗೆ ಬಹುತೇಕ ಎಲ್ಲ ಸೇವೆಗಳು ಲಭ್ಯವಿರಲಿವೆ ಎಂದು ಖುದ್ದು ಜಿಲ್ಲಾಡಳಿತವೇ ಮಾಹಿತಿ ನೀಡಿದೆ.
ರಾಯಚೂರಿನಲ್ಲಿ ಕಾರ್ಮಿಕ ಹೋರಾಟ ಭಾರೀ ತೀವ್ರಗೊಂಡಿದ್ದು, ಬುಧವಾರವೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ವಿಜಯ್​ ಶಂಕರ್ ಮಾಹಿತಿ ನೀಡಿದ್ದಾರೆ. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಜೊತೆಗೆ ನಾಳೆ ಬೆಂಗಳೂರಿನಲ್ಲಿ ಟ್ಯಾಕ್ಸಿ, ಓಲಾ, ಉಬರ್‌ ಸೇವೆ ಲಭ್ಯವಿರಲಿದೆ ಎಂದು ಮಾಲೀಕರ ಸಂಘ ತಿಳಿಸಿದೆ.
ಇನ್ನು ಮೈಸೂರಿನಲ್ಲೂ ಬುಧವಾರ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com