ಸುಳ್ವಾಡಿ ಆಯ್ತು, ಈಗ ಮುದನೂರ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ ಬೆರೆಸಿದ ದುಷ್ಕರ್ಮಿಗಳು, ಮಹಿಳೆ ಸಾವು!

ಚಾಮರಾಜನಗರ ಸುಳ್ವಾಡಿ ಮಾರಮ್ಮ ದೇವಿ ದೇಗುಲದ ಪ್ರಸಾದಕ್ಕೆ ವಿಷ ಬೆರೆಸಿ 17 ಮಂದಿ ಸಾವನ್ನಪ್ಪಿದ ದುರಂತ ಇನ್ನೂ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಘಟನೆ ಯಾದಗಿರಿಯಲ್ಲಿ ಬೆಳಕಿಗೆ ಬಂದಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಯಾದಗಿರಿ: ಚಾಮರಾಜನಗರ ಸುಳ್ವಾಡಿ ಮಾರಮ್ಮ ದೇವಿ ದೇಗುಲದ ಪ್ರಸಾದಕ್ಕೆ ವಿಷ ಬೆರೆಸಿ 17 ಮಂದಿ ಸಾವನ್ನಪ್ಪಿದ ದುರಂತ ಇನ್ನೂ ಹಸಿರಾಗಿರುವಾಗಲೇ ಅಂತಹುದೇ ಮತ್ತೊಂದು ಘಟನೆ ಯಾದಗಿರಿಯಲ್ಲಿ ಬೆಳಕಿಗೆ ಬಂದಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರ ಕೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಗ್ರಾಮದ ಕುಡಿಯುವ ನೀರಿನ ಟ್ಯಾಂಕಿಗೆ ಕೀಟನಾಶಕ ಬೆರೆಸಿರುವ ವಿಚಾರ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ ಸುತ್ತಮುತ್ತಲ ಹತ್ತಾರು ಗ್ರಾಮಗಳಿಗೆ ನೀರು ಪೂರೈಸಲು ನಿರ್ಮಾಣ ಮಾಡಿದ್ದ ನೀರಿನ ಟ್ಯಾಂಕಿಗೆ ದುಷ್ಕರ್ಮಿಗಳು ಸುಮಾರು ಅರ್ಧ ಲೀಟರ್ ಎಂಡೋಸಲ್ಫಾನ್ ಕ್ರಿಮಿನಾಶಕ ಬೆರೆಸಿದ್ದು, ಇದೇ ನೀರನ್ನೇ ಶಾಖಾಪುರ, ತೆಗ್ಗಳ್ಳಿ ಗ್ರಾಮಕ್ಕೆ ಮಧ್ಯಾಹ್ನ 3 ಗಂಟೆಗೆ ನೀರು ಪೂರೈಕೆ ಮಾಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಗ್ರಾಮದ ಜನರಿಗೆ ನೀರು ಪೂರೈಕೆ ಮಾಡುವ ವೇಳೆ ಮೌನೇಶ್ ಎಂಬವವರು ನೀರಿನ ವಾಸನೆ ಕಂಡು ಅನುಮಾನಗೊಂಡಿದ್ದಾರೆ. ಈ ವೇಳೆ ನೀರನ್ನು ಪರೀಕ್ಷೆ ಮಾಡಲು ಮೌನೇಶ್ ಹಾಗೂ ಅವರ ತಾಯಿ ನಾಗಮ್ಮ ಸೇವನೆ ಮಾಡಿದ್ದು, ಆ ಬಳಿಕ ಕೆಲ ಸಮಯದಲ್ಲೇ ಇಬ್ಬರೂ ಅಸ್ವಸ್ಥರಾಗಿದ್ದಾರೆ. ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈ ಪೈಕಿ ಮೌನೇಶ್ ಅವರಿಗೆ ಆಪಾಯ ಇಲ್ಲ ಎನ್ನುವ ಮಾಹಿತಿ ಲಭಿಸಿದೆ. ಈ ಕುರಿತು ಮಾಹಿತಿ ಪಡೆದು ಸ್ಥಳೀಯ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಗ್ರಾಮಗಳಿಗೆ ನೀರು ಪೂರೈಕೆಯನ್ನು ತಡೆದಿದ್ದಾರೆ. ಅಲ್ಲದೇ ಪೂರೈಕೆ ಮಾಡಲಾಗಿದ್ದ ನೀರನ್ನು ಸೇವನೆ ಮಾಡದಂತೆ ಗ್ರಾಮಗಳಲ್ಲಿ ಡಂಗೂರ ಸಾರಿ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳ ಮುನ್ನೆಚ್ಚರಿಕೆಯಿಂದ ನಡೆಯಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
ಪ್ರತಿ ವರ್ಷ ಟ್ಯಾಂಕ್ ಹತ್ತಿರ ಪೈಪ್ ಹಾಗೂ ವೈರ್ ಕತ್ತರಿಸುತ್ತಿದ್ದ ಕಿಡಿಗೇಡಿಗಳು ಈ ಬಾರಿ ನೀರಿಗೆ ವಿಷ ಬೆರೆಸಿರುವ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ದೂರು ದಾಖಲಾಗಿದೆ.
ನೀರಿನ ಪರೀಕ್ಷೆ ಮಾಡಲು ಹೋಗಿ ಪ್ರಾಣ ಬಿಟ್ಟ ಮಹಿಳೆ, ಜೀವ ಕೊಟ್ಟು ನೂರಾರು ಮಂದಿಯ ರಕ್ಷಿಸಿದಳು
ಇನ್ನು ನೀರಿನ ವಾಸನೆಯಿಂದ ಅನುಮಾನಗೊಂಡ ಮೌನೇಶ್ ತಮ್ಮ ತಾಯಿಯನ್ನು ಕರೆದು ನೀರಿನ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಇಬ್ಹರೂ ಪರೀಕ್ಷೆಗಾಗಿ ಸ್ವಲ್ಪ ನೀರು ಸೇವನೆ ಮಾಡಿದ್ದಾರೆ. ನೀರು ಸೇವನೆ ಮಾಡಿದ ಕೆಲವೇ ಕ್ಷಣಗಳಲ್ಲಿ ಇಬ್ಬರೂ ಅಸ್ವಸ್ಥಗೊಂಡಿದ್ದು ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ಪೈಕಿ ಮೌನೇಶ್ ಅಪಾಯದಿಂದ ಪಾರಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಆದರೆ ಅವರ ತಾಯಿ ಇಂದು ಬೆಳಗ್ಗೆ ಆಸ್ಪತ್ರೆಗೆ ರವಾನೆ ಮಾಡುವಾಗ ಸಾವನ್ನಪ್ಪಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com