ಸಿದ್ದಗಂಗಾ ಶ್ರೀಗಳು ಆಸ್ಪತ್ರೆಯಿಂದ ಮಠಕ್ಕೆ ವಾಪಸ್, ಚಿಕಿತ್ಸೆ ಮುಂದುವರಿಕೆ

ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ...
ಸಿದ್ದಗಂಗಾ ಶ್ರೀಗಳು
ಸಿದ್ದಗಂಗಾ ಶ್ರೀಗಳು

ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದ ಹಿನ್ನಲೆಯಲ್ಲಿ ಅವರನ್ನು ಬುಧವಾರ ಬೆಳಗ್ಗೆ ಮಠಕ್ಕೆ ವಾಪಸ್ ಕರೆತರಲಾಗಿದೆ.

ಶ್ವಾಸಕೋಶದ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಗಂಗಾ ಶ್ರೀಗಳು ಮಠಕ್ಕೆ ಹೋಗಬೇಕೆಂದು ನಿನ್ನೆಯಿಂದ ಹಠ ಹಿಡಿದಿದ್ದರಿಂದ ಇಂದು ಮುಂಜಾನೆ ವೇಳೆಗೆ  ಕರೆದುಕೊಂಡು ಬರಲಾಗಿದೆ. ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದ ಚಿಕಿತ್ಸೆಯನ್ನು ಮಠದಲ್ಲಿ ಮುಂದುವರಿಸಲಾಗುವುದು ಎಂದು ಕಿರಿಯ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

ಸ್ವಾಮೀಜಿಗಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಏರುಪೇರು ಬಂದಿಲ್ಲ. ರಾತ್ರಿಯಿಂದ ಮಠಕ್ಕೆ ಹೋಗುವಂತೆ ಸ್ವಾಮೀಜಿಗಳು ಸೂಚನೆ ನೀಡುತ್ತಿದ್ದರು. ಇಂದು ಅಥವಾ ನಾಳೆ ಶಿಫ್ಟ್ ಮಾಡಬೇಕಂತ ಮಠದ ಹಿರಿಯರು ಹಾಗೂ ಎಸ್‍ಪಿ ಸೇರಿ ಸಭೆ ನಡೆಸಿ ನಿರ್ಧಾರ ಮಾಡಿದ್ದೇವು. ಆದರೆ ರಾತ್ರಿಯಿಂದ ಸ್ವಾಮೀಜಿಗಳು ಮಠಕ್ಕೆ ಹೋಗಬೇಕೆಂದು ಚಡಪಡಿಸುತ್ತಿದ್ದರು. ಆದ್ದರಿಂದ ಬೆಳಗಿನ ಜಾವ ಈ ರೀತಿ ನಿರ್ಧಾರ ತೆಗೆದುಕೊಂಡು ಶಿಫ್ಟ್ ಮಾಡಲಾಗಿದೆ ಎಂದು ಕಿರಿಯ ಶ್ರೀಗಳು ತಿಳಿಸಿದ್ದಾರೆ.

ಶ್ರೀಗಳಿಗೆ ನಿಶ್ಯಕ್ತಿ ಮತ್ತು ಉಸಿರಾಟದ ತೊಂದರೆ ಹೊರತುಪಡಿಸಿದರೆ ಬೇರೆ ಎಲ್ಲಾ ಪ್ಯಾರಾಮೀಟರ್ಸ್ ಸರಿಯಾಗಿದೆ. ಶ್ವಾಸಕೋಶದ ಸೋಂಕು ಕಡಿಮೆಯಾಗಿದೆ. ಶಸ್ತ್ರಚಿಕಿತ್ಸೆ ಮಾಡಿದ ಗಾಯ ವಾಸಿಯಾಗಿದೆ. ಭಕ್ತಾದಿಗಳು ಆತಂಕಪಡುವ ಅವಶ್ಯ ಇಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ತಿಳಿಸಿದ್ದಾರೆ.

ಇಂದು ಮುಂಜಾನೆ ಮೈಸೂರಿನ ಯದುವೀರ್ ಒಡೆಯರ್ ಸ್ವಾಮೀಜಿಯವರನ್ನು ಭೇಟಿ ಮಾಡಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿ ಶ್ರೀಗಳು ವಿಶ್ರಾಂತಿಯಲ್ಲಿ ಇದ್ದರು. ಹಾಗಾಗಿ ಮಾತನಾಡಲು ಸಾಧ್ಯವಾಗಿಲ್ಲ. ಆಶೀರ್ವಾದ ಪಡೆದುಕೊಂಡು ಬಂದೆ ಎಂದರು.

ಸ್ವಾಮೀಜಿಗಳನ್ನು ಮಠಕ್ಕೆ ಕರೆತಂದ ಹಿನ್ನಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶ್ರೀಗಳ ಭಕ್ತಾದಿಗಳು ಮಠದ ಬಳಿ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com