ಶ್ರೀಮಠದತ್ತ ಭಕ್ತ ಸಾಗರ; ಅಂತಿಮ ದರ್ಶನಕ್ಕೆ ಪ್ರಧಾನಿ ಮೋದಿ ಗೈರು

ನಿನ್ನೆ ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮಿಜಿಗಳ ಅಂತಿಮ ದರ್ಶನಕ್ಕಾಗಿ ತುಮಕೂರಿನ ಶ್ರೀಮಠದತ್ತ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಅಂತಿಮ ದರ್ಶನಕ್ಕೆ ಭದ್ರತಾ ಕಾರಣಗಳಿಂದಾಗಿ ಪ್ರಧಾನಿ ಮೋದಿ ಗೈರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತುಮಕೂರು: ನಿನ್ನೆ ಲಿಂಗೈಕ್ಯರಾದ ಶ್ರೀ ಶಿವಕುಮಾರ ಸ್ವಾಮಿಜಿಗಳ ಅಂತಿಮ ದರ್ಶನಕ್ಕಾಗಿ ತುಮಕೂರಿನ ಶ್ರೀಮಠದತ್ತ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಅಂತಿಮ ದರ್ಶನಕ್ಕೆ ಭದ್ರತಾ ಕಾರಣಗಳಿಂದಾಗಿ ಪ್ರಧಾನಿ ಮೋದಿ ಗೈರಾಗಿದ್ದಾರೆ.
ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯಲು ಕಳೆದ ರಾತ್ರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಈ ವೇಳೆ ಜನ ಸಾಗರದಿಂದ ಮಹಿಳೆಯರು ವೃದ್ಧರು ಅವಕಾಶ ಸಿಗದೇ ಇಂದು ಬೆಳಗ್ಗೆ ಶ್ರೀಗಳ ದರ್ಶನಕ್ಕೆ ಮುಂದಾಗಿದ್ದಾರೆ. ರಾತ್ರಿ ವೇಳೆ ಬಂದಿರುವ ಭಕ್ತರು ಸಿದ್ದಗಂಗಾ ಮಠದ ಆವರಣದಲ್ಲಿಯೇ ಕೆಲಕಾಲ ವಿಶ್ರಾಂತಿಯನ್ನ ಪಡೆದರು. ಇಂದು ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಭಕ್ತರ ದಾಸೋಹಕ್ಕೆ ಯಾವುದೇ ಸಮಸ್ಯೆಯಾಗದೇ ಇರಲು ಮಠದ ಸುತ್ತಲೂ ಹತ್ತು ಕಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. 
ಸಿದ್ದಗಂಗಾ ಮಠದಲ್ಲಿ ಮಾತ್ರವಲ್ಲದೇ ಮಠದ ಭಕ್ತರಿಂದ ತುಮಕೂರು ಸುತ್ತಮುತ್ತಲಿನ ಹಲೆವೆಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ದೂರದ ಊರಿನಿಂದ ಸಿದ್ದಗಂಗಾ ಮಠಕ್ಕೆ ಹೋಗುವ ಜನರಿಗಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ರಾತ್ರಿ ವೇಳೆಯೇ 1 ಲಕ್ಷಕ್ಕೂ ಹೆಚ್ಚು ಭಕ್ತರು ಅಂತಿಮ ದರ್ಶನ ಪಡೆದಿದ್ದಾರೆ. ಸರತಿ ಸಾಲಿನಲ್ಲಿ ಬಂದು ಭಕ್ತರು ಶ್ರೀಗಳ ದರ್ಶನ ಪಡೆಯುತ್ತಿದ್ದಾರೆ.
ಅಂತಿಮ ದರ್ಶನ ಪಡೆದ ಸ್ಯಾಂಡಲ್ ವುಡ್ ಗಣ್ಯರು
ಇನ್ನು ನಟಿ ಸುಮಲತ, ಮಗ ಅಭಿಷೇಕ್ ಗೌಡ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ, ದೊಡ್ಡಣ್ಣ ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಸಾಗರೋಪಾದಿಯಲ್ಲಿ ಬರುತ್ತಿರುವ ಭಕ್ತಾದಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಪ್ರಧಾನಿ ಮೋದಿ ಗೈರು
ಇನ್ನು ಇಂದು ತುಮಕೂರಿಗೆ ಪ್ರಧಾನಿ ಮೋದಿ ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಭದ್ರತಾ ದೃಷ್ಟಿಯಿಂದಾಗಿ ಅವರ ಭೇಟಿ ರದ್ದಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೂ ಕೂಡ ಮಾಹಿತಿ ನೀಡಿದ್ದು, ಭದ್ರತಾ ಕಾರಣಗಳಿಂದಾಗಿ ಪ್ರಧಾನಿ ಮೋದಿ ಆಗಮಿಸುತ್ತಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com