
ವಿಜಯಪುರ: 3 ತಿಂಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ತೆಲಂಗಾಣ ಮೂಲದ 25 ವರ್ಷದ ಯುವಕನನ್ನು ವಿಜಯಪುರದ ಸಾಮಾಜಿಕ ಕಾರ್ಯಕರ್ತರ ಗುಂಪು ಒಟ್ಟುಗೂಡಿಸಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಮನೆಯವರ ಜೊತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದ ಮೆಹಬೂಬ್ ನಗರದ ಖಾಜಾ ಪಾಷಾ ಇಷ್ಟು ದಿನಗಳ ಕಾಲ ರಸ್ತೆ ಬದಿಯೇ ಜೀವನ ನಡೆಸುತ್ತಿದ್ದ. ಎರಡು ವಾರಗಳ ಹಿಂದೆ ಇವನನ್ನು ಕಂಡ ವಿಜಯಪುರದ ಕ್ರಾಂತಿ ಎಂಬ ಸಾಮಾಜಿಕ ಕಾರ್ಯಕರ್ತರ ಗುಂಪು ಆತನಿಗೆ ಆಹಾರ ನೀಡುತ್ತಿದ್ದರು. ಒಂದು ದಿನ ರಾತ್ರಿ ಪಾಶಾ ಪ್ರಜ್ಞೆತಪ್ಪಿ ರಸ್ತೆ ಬದಿ ಬಿದ್ದಿದ್ದು ಕಂಡರು, ಆತನ ಕಾಲಿಗೆ ಪೆಟ್ಟಾಗಿತ್ತು. ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು.
ಆಗ ಯುವಕ ತನ್ನ ಮನೆಯ ವಿಳಾಸ ಮತ್ತು ವಿವರಗಳನ್ನು ತಿಳಿಸಿದನು. ಕ್ರಾಂತಿ ತಂಡದ ಕಾರ್ಯಕರ್ತರು ಪಾಶಾನ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದರು. ಕೂಡಲೇ ವಿಜಯಪುರಕ್ಕೆ ಆಗಮಿಸಿದ ಪೋಷಕರು ಅವನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಎಲ್ಲಿ ಕುಟುಂಬದ ಮರ್ಯಾದೆ ಹಾಳಾಗುತ್ತದೋ ಎಂಬ ಭಯದಿಂದ ಮಗ ನಾಪತ್ತೆಯಾಗಿದ್ದಾನೆ ಎಂದು ನಾವು ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಪಾಶಾ ತಂದೆ ಮೊಹಮ್ಮದ್ ಸುಕರ್ ತಿಳಿಸಿದ್ದಾರೆ. ಮಾನಸಿಕವಾಗಿ ಪಾಶಾ ನೊಂದಿದ್ದು ಈಗ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಇತ್ತ ಪಾಶಾ ಮನೆ ಬಿಟ್ಟು ಹೋಗಿದ್ದರಿಂದ ಅಸೌಖ್ಯಕ್ಕೀಡಾಗಿದ್ದ ಆತನ ತಾಯಿ ಮತ್ತು ಸಹೋದರಿ ಗುಣಮುಖರಾಗುತ್ತಿದ್ದಾರೆ.
Advertisement