ಅಲ್ಪಸಂಖ್ಯಾತ ಆಯೋಗಕ್ಕೆ ಮುಸ್ಲಿಂ ಅಧ್ಯಕ್ಷ ವಿವಾದ: ಸುತ್ತೋಲೆ ಹಿಂಪಡೆದ ರಾಜ್ಯ ಸರ್ಕಾರ
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ಮುಸ್ಲಿಂ ಸಮುದಾಯದವರನ್ನು ಮಾತ್ರ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಂಬಂಧ 2017ರ ಜು.14 ರಂದು ಅಂಗೀಕರಿಸಲಾಗಿದ್ದ ನಿರ್ಣಯವನ್ನು ಹಿಂಪಡೆದಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್'ಗೆ ಬುಧವಾರ ತಿಳಿಸಿದೆ...
ಬೆಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ಮುಸ್ಲಿಂ ಸಮುದಾಯದವರನ್ನು ಮಾತ್ರ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಂಬಂಧ 2017ರ ಜು.14 ರಂದು ಅಂಗೀಕರಿಸಲಾಗಿದ್ದ ನಿರ್ಣಯವನ್ನು ಹಿಂಪಡೆದಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್'ಗೆ ಬುಧವಾರ ತಿಳಿಸಿದೆ.
ರಾಜ್ಯ ಸರ್ಕಾರದ ನಿರ್ಣಯ ಪ್ರಶ್ನಿಸಿ ಶಿವಮೊಗ್ಗದ ವಕೀಲ ಬಿ.ವಿನೋದ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಬುಧವಾರ ಈ ಅರ್ಜಿ ನ್ಯಾಯಮೂರ್ತಿಗಳಾದ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಂಪ್ರಸಾದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ವಿವಾದಿತ ನಿರ್ಣಯ ವಾಪಸ್ ಪಡೆದುಕೊಂಡಿರುವ ಸಂಬಂಧ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಅಕ್ರಂ ಬಾಷಾ 2019ರ ಜ.28ರಂದು ಹೊರಡಿಸಿರುವ ಆದೇಶದ ಪ್ರತಿಯನ್ನು ಪ್ರಮಾಣಪತ್ರದ ಜೊತೆಗೆ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು.
ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಕೇವಲ ಮುಸ್ಲಿಮರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿದೆ. ಸರತಿ ಆಧಾರದಲ್ಲಿ ಇತರೆ ಅಲ್ಪಸಂಖ್ಯಾತ ಸಮುದಾಯಗಳಿಗೂ ಅವಕಾಶ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.