ಚಿತ್ರದುರ್ಗ: ಡಾಬಾ ನಡೆಸುವ ಮೂಲಕ ಬದುಕು ಕಟ್ಟಿಕೊಂಡ ತೃತೀಯ ಲಿಂಗಿಗಳ ಸ್ಫೂರ್ತಿಯ ಕಥೆ!

ನಗರದ ಹೊರವಲಯದ ತಿಪ್ಪಾರೆಡ್ಡಿ ನಗರದಲ್ಲಿ ಏಳು ವರ್ಷಗಳ ಹಿಂದೆ ತೃತೀಯ ಲಿಂಗಿಗಳ...
ಸತಾರಾ ಡಾಬಾ
ಸತಾರಾ ಡಾಬಾ
ಚಿತ್ರದುರ್ಗ: ನಗರದ ಹೊರವಲಯದ ತಿಪ್ಪಾರೆಡ್ಡಿ ನಗರದಲ್ಲಿ  ಏಳು ವರ್ಷಗಳ ಹಿಂದೆ ತೃತೀಯ ಲಿಂಗಿಗಳ ಗುಂಪೊಂದು ಸಣ್ಣ ಭೂಮಿಯನ್ನು ಖರೀದಿಸಿತ್ತು. ಆಗ ಅದಕ್ಕೆ ನೀಡಿದ್ದ ಬೆಲೆ ಇಪ್ಪತ್ತೆರಡೂವರೆ ಲಕ್ಷ ರೂಪಾಯಿ. 
ಸರ್ಕಾರದ ಅಥವಾ ಬ್ಯಾಂಕಿನಲ್ಲಿ ಸಾಲದ ಮೊರೆ ಹೋಗದೆ ಸ್ನೇಹಿತರು ಕೊಡ್ಡ ಹಣದಲ್ಲಿ ತೃತೀಯ ಲಿಂಗಿಗಳು ಭೂಮಿ ಖರೀದಿಸಿದ್ದರು.
ದಿನಬೆಳಗಾದರೆ ಭಿಕ್ಷೆ ಬೇಡುವುದು, ಇಲ್ಲವೇ ಲೈಂಗಿಕ ಕಾರ್ಯಕರ್ತರಾಗಿ ಕೆಲಸ ಮಾಡುವುದರಿಂದ ಬೇಸತ್ತು ಭವಾನಮ್ಮ ನೇತೃತ್ವದ 8 ಮಂದಿ ತೃತೀಯ ಲಿಂಗಿಗಳ ತಂಡ ಖರೀದಿಸಿದ್ದ ಭೂಮಿಯಲ್ಲಿ 4 ಲಕ್ಷ ರೂಪಾಯಿ ಸಾಲ ಮಾಡಿ ಕಟ್ಟಡ ನಿರ್ಮಿಸಿ ರಸ್ತೆಬದಿಯಲ್ಲಿ ಡಾಬಾ ಆರಂಭಿಸಿ ಗೌರವಯುತವಾಗಿ ಜೀವನ ನಡೆಸುವ ತೀರ್ಮಾನ ಮಾಡಿದರು.
ಇಂದು ಆ ಪ್ರದೇಶದಲ್ಲಿ ಸುಂದರವಾದ ಸತಾರಾ ಡಾಬಾ ತಲೆಯೆತ್ತಿದ್ದು ಉತ್ತಮ ವ್ಯಾಪಾರ ನಡೆಸುತ್ತಿದೆ. ದಾರಿಯಲ್ಲಿ ಹೋಗುವ ಪ್ರಯಾಣಿಕರಿಗೆ ಮತ್ತು ಇತರ ಜನರಿಗೆ ಉತ್ತಮ ರುಚಿಕರ ಊಟ ತಿಂಡಿಗಳನ್ನು ಒದಗಿಸುವುದಲ್ಲದೆ ಅವರ ರೀತಿಯ 20 ತೃತೀಯ ಲಿಂಗಿಗಳಿಗೆ ಕೆಲಸ ಕೊಟ್ಟು ಆಶ್ರಯ ಕಲ್ಪಿಸಿದ್ದಾರೆ. ಸಾಲ ಮುಗಿದ ತಕ್ಷಣ ಬಂದ ಸಂಪಾದನೆಯಲ್ಲಿ ನಮಗೆ ಬೇಕಾದಂತೆ ಜೀವನ ನಡೆಸುತ್ತೇವೆ. ಬೀದಿಯಲ್ಲಿ ಭಿಕ್ಷೆ ಬೇಡುವುದು, ಸೆಕ್ಸ್ ವರ್ಕರ್ ಆಗಿ ಕೆಲಸ ಮಾಡುವ ಜೀವನ ಯಾರಿಗೆ ಬೇಕು ಎಂದು ಈ ತೃತೀಯ ಲಿಂಗಿಗಳು ಬಹಳ ಆತ್ಮವಿಶ್ವಾಸದಿಂದ ಹೇಳುತ್ತಾರೆ.
ಭೂಮಿ ಖರೀದಿಸಿ, ಕಟ್ಟಡ ನಿರ್ಮಿಸಿ, ಡಾಬಾ ನಡೆಸುತ್ತಿರುವ ಈ ತೃತೀಯ ಲಿಂಗಿಗಳ ಜೀವನ ಅಷ್ಟೇನು ಸುಲಭವಾಗಿಲ್ಲ, ಆರಂಭದಲ್ಲಿ ಗ್ರಾಹಕರು ಈ ಡಾಬಾಕ್ಕೆ ಕಾಲಿಡಲು ನಿರಾಕರಿಸುತ್ತಿದ್ದರಂತೆ. ಇಂದು ನಿಧಾನವಾಗಿ ಗ್ರಾಹಕರ ಯೋಚನೆಗಳು ಬದಲಾಗುತ್ತಿದ್ದು ದಿನಕ್ಕೆ ಸರಿಸುಮಾರು 5ರಿಂದ 10 ಸಾವಿರದಷ್ಟು ದುಡಿಯುತ್ತಿದ್ದೇವೆ ಎನ್ನುತ್ತಾರೆ ಈ ಗುಂಪಿನ ನಾಯಕಿ ಭಾವನ.
ಆರಂಭದಲ್ಲಿ ನಾವು ತಯಾರಿಸಿದ ಊಟ-ತಿಂಡಿಗಳಿಗೆ ಗ್ರಾಹಕರು ಬಾರದೆ ಭಿಕ್ಷುಕರಿಗೆ ನೀಡಬೇಕಾಗಿತ್ತು, ನಂತರ ದಾರಿಬದಿಯಲ್ಲಿ ನಿಂತು ಗ್ರಾಹಕರ ಮನವೊಲಿಸಿ ಡಾಬಾಕ್ಕೆ ಬರುವಂತೆ ಮನವೊಲಿಸಿದೆವು. ಇಂದು ನಮಗೆಲ್ಲ ಆತ್ಮತೃಪ್ತಿಯಿದೆ ಎನ್ನುತ್ತಾರೆ.
ಡಾಬಾದಲ್ಲಿ ಗ್ರಾಹಕರಿಗೆ ರೊಟ್ಟಿ, ಸಬ್ಜಿ, ಅನ್ನದಿಂದ ವಿವಿಧ ರೀತಿಯ ತಿನಿಸು ತಯಾರಿಸುತ್ತಾರೆ. ದಾರಿಯಲ್ಲಿ ಹೋಗುವ ಟ್ರಕ್ಕರ್ ಗಳು ಮತ್ತು ಇತರ ಪ್ರಯಾಣಿಕರು ಡಾಬಾಕ್ಕೆ ಬರುತ್ತಾರೆ. 
ಆದರೆ ಆರಂಭದಲ್ಲಿ ತಾವು ಸಾಲ ಕೇಳಲು ಹೋದಾಗ ನಮ್ಮನ್ನು ಬೇರೆ ರೀತಿಯಿಂದ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಇತರೆಡೆ ಜನ ನೋಡುವುದು ಬೇಸರ ತರಿಸಿತ್ತು. ಯಾರೂ ಕೂಡ ಸಾಲ ನೀಡಲು ಆರಂಭದಲ್ಲಿ ಒಪ್ಪಲಿಲ್ಲ. ನಮಗೂ ಸರ್ಕಾರದಿಂದ ನೆರವು, ಸಾಲ ಮತ್ತು ಸಬ್ಸಿಡಿಗಳ ಸೌಲಭ್ಯ ಸಿಗಬೇಕು ಎನ್ನುತ್ತಾರೆ ಅವರು.
ಜಿಲ್ಲಾಡಳಿತ ಇಂದು ಲೈಂಗಿಕ ಅಲ್ಪಸಂಖ್ಯಾತರಿಗೆ ರೇಷನ್ ಕಾರ್ಡು, ಚುನಾವಣಾ ಗುರುತು ಚೀಟಿ, ಆಧಾರ್ ಕಾರ್ಡು ಗಳನ್ನು ನೀಡುತ್ತಿರುವುದು ನಮಗೆ ಸಹಾಯವಾಗಿದೆ. ನಮಗೆ ಕೂಡ ಬೇರೆ ಮಕ್ಕಳಂತೆಯೇ ಶಿಕ್ಷಣ ಸಿಗುವಂತಾಗಬೇಕು ಎಂದು ಒತ್ತಾಯಿಸುತ್ತಾರೆ ಈ ಲೈಂಗಿಕ ಅಲ್ಪಸಂಖ್ಯಾತರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com