ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ನಿಧನ

ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್ ಅವರು ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಧನಂಜಯ್ ಕುಮಾರ್
ಧನಂಜಯ್ ಕುಮಾರ್
ಮಂಗಳೂರು: ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್ ಅವರು ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಧನಂಜಯ್ ಕುಮಾರ್ ಅವರನ್ನು ಕೆಲ ತಿಂಗಳುಗಳಿಂದ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿದ್ದ ಧನಂಜಯ್ ಕುಮಾರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 1.30ಕ್ಕೆ ನಿಧನರಾದರು.
ನಾಳೆ ಬೆಳಗ್ಗೆ ‌7 ಗಂಟೆಯಿಂದ ‌10 ಗಂಟೆಯವರೆಗೆ ನಗರದ ಕದ್ರಿ‌ ಕಂಬಳದಲ್ಲಿರುವ ಅವರ ನಿವಾಸದಲ್ಲಿ ‌ಸಾರ್ವಜನಿಕರಿಗೆ‌ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅವರ ಕುಟುಂಬ ಮೂಲಗಳ ಪ್ರಕಾರ, ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಡಿ ತಾಲ್ಲೂಕಿನ ವೆನೂರಿನಲ್ಲಿ ನಾಳೆ ಜರುಗಲಿದೆ.
68 ವರ್ಷದ ಧನಂಜಯ್ ಕುಮಾರ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.   
  
ಬಿಜೆಪಿ ಯುವ ಪಕ್ಷದ ನಾಯಕರಾಗಿ ರಾಜಕೀಯ ಪ್ರವೇಶಿಸಿದ್ದ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು, 1996 ರಲ್ಲಿ ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ, 1999-2000 ಸಾಲಿನಲ್ಲಿ ಹಣಕಾಸು ಖಾತೆಯ ಸಹಾಯಕ ಸಚಿವರಾಗಿ ನಂತರ ಜವಳಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಮೂರು ಬಾರಿ ಕೇಂದ್ರ ಸಚಿವರಾಗಿದ್ದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದರು. 
  
1983 ರಲ್ಲಿ ಮೊದಲ ಬಾರಿಗೆ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರ 1991 ರಲ್ಲಿ ಲೋಕಸಭೆಗೆ ಆಯ್ಕೆಯಾಗಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ಅವರನ್ನು ಸೋಲಿಸಿದ್ದರು. 
  
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ರಾಜಕಿಯವಾಗಿ ಬಹಳ ಹತ್ತಿರವಾಗಿದ್ದರು   ಬಿಜೆಪಿ ತೊರೆದ ನಂತರ ಯಡಿಯೂರಪ್ಪ ಜೊತೆ ಕೆಜೆಪಿ ಸೇರಿದ್ದರು. ಆದರೆ ಮತ್ತೆ ಯಡಿಯೂರಪ್ಪ ಅವರು ಕೆಜೆಪಿ ಬಿಟ್ಟು ಬಿಜೆಪಿಗೆ ಮರಳಿದ  ನಂತರ ಧನಂಜಯ  ಕುಮಾರ್ ಮಾತ್ರ ಏಕಾಂಗಿಯಾಗಿದ್ದರು. ಅತ್ತ ಬಿಜೆಪಿಯೂ ಇಲ್ಲ ಇತ್ತ ಕೆಜೆಪಿಯೂ ಇಲ್ಲ ಎಂಬ ಸ್ಥಿತಿಯಲ್ಲಿ ಅವರು  ಕಾಂಗ್ರೆಸ್ ಸೇರಿದ್ದರು. ಇದಕ್ಕೂ ಮುನ್ನ 2014 ರಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರಿದ್ದರು. ಒಟ್ಟಾರೆ ರಾಜ್ಯದ ಮೂರು ರಾಜಕೀಯ ಪಕ್ಷಗಳಲ್ಲಿ ಸಕ್ರಿಯವಾಗಿದ್ದರು.
  
ಬಿಜೆಪಿ ಹಿರಿಯ ನಾಯಕ ಅಡ್ವಾಣಿ  ಜೊತೆ ವಿರಸ ಕಟ್ಟಿಕೊಂಡ ನಂತರ ಅವರು ಬಿಜೆಪಿಯಲ್ಲಿ ಒಂದು ರೀತಿಯಲ್ಲಿ  ಮೂಲೆಗುಂಪಾಗಿದ್ದರು. 
  
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆಯ ಪ್ರತಿಪಕ್ಷ ನಾಯಕ, ಯಡಿಯೂರಪ್ಪ ಹಾಗೂ ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸೇರಿದಂತೆ ಅನೇಕ ಸಚಿವರು, ಶಾಸಕರು, ನಾಯಕರು ಧನಂಜಯ್ ಕುಮಾರ್ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com