ಬರ ನಿರ್ವಹಣೆಗೆ ಮತ್ತೆ ಮೋಡ ಬಿತ್ತನೆಗೆ ಮುಂದಾದ ರಾಜ್ಯ ಸರ್ಕಾರ

ರಾಜ್ಯದಲ್ಲಿ ತೀವ್ರ ತಾಪಮಾನ ಮತ್ತು ಮಳೆಯ ಕೊರತೆ ಉಂಟಾಗಿರುವ ಪ್ರಸ್ತುತ ಸನ್ನಿವೇಶವನ್ನು ನಿಭಾಯಿಸಲು ರಾಜ್ಯ ಸರ್ಕಾರ ಮತ್ತೆ ಮೋಡ ಬಿತ್ತನೆಯ ಮೊರೆ ಹೋಗಿದೆ.
ಬರ ನಿರ್ವಹಣೆಗೆ ಮತ್ತೆ ಮೋಡ ಬಿತ್ತನೆಗೆ ಮುಂದಾದ ರಾಜ್ಯ ಸರ್ಕಾರ
ಬರ ನಿರ್ವಹಣೆಗೆ ಮತ್ತೆ ಮೋಡ ಬಿತ್ತನೆಗೆ ಮುಂದಾದ ರಾಜ್ಯ ಸರ್ಕಾರ
Updated on
ಬೆಂಗಳೂರು: ರಾಜ್ಯದಲ್ಲಿ ತೀವ್ರ ತಾಪಮಾನ ಮತ್ತು ಮಳೆಯ ಕೊರತೆ ಉಂಟಾಗಿರುವ ಪ್ರಸ್ತುತ ಸನ್ನಿವೇಶವನ್ನು ನಿಭಾಯಿಸಲು ರಾಜ್ಯ ಸರ್ಕಾರ ಮತ್ತೆ ಮೋಡ ಬಿತ್ತನೆಯ ಮೊರೆ ಹೋಗಿದೆ. 
ಮೋಡ ಬಿತ್ತನೆ ಸಮರ್ಥ ನಿರ್ವಹಣೆ ಮೂಲಕ ಸ್ವಲ್ಪ ಮಟ್ಟಿಗೆ ಪರಿಸ್ಥಿತಿಯನ್ನು ಎದುರಿಸಬಹುದಾಗಿದ್ದು, 2017 ರ ಮೋಡಬಿತ್ತನೆ ಯಶಸ್ಸಿನ ಹಿನ್ನೆಲೆಯಲ್ಲಿ ಈ ಬಾರಿಯೂ ಮಳೆ ಕೊರತೆ ನೀಗಿಸಲು ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ.
ತಜ್ಞರ ಸಮಿತಿಯ ಶಿಫಾರಸಿನ ಹಿನ್ನೆಲೆಯಲ್ಲಿ 2017 ರಲ್ಲಿ ಮೋಡ ಬಿತ್ತನೆ ಕಾರ್ಯಾಚರಣೆ ಕೈಗೊಂಡು ಯಶಸ್ಸು ಪಡೆಯಲಾಗಿತ್ತು. ಮೋಡ ಬಿತ್ತನೆ ಮೂಲಕ 2.51 ಟಿಎಂಸಿ ಯಿಂದ 5 ಟಿಎಂಸಿ ನೀರಿನ ಹೆಚ್ಚಳ ಕಂಡುಬಂದಿತ್ತು. ಶೇ. 27 ರಷ್ಟು ಮಳೆಯನ್ನು ಮೋಡ ಬಿತ್ತನೆ ಮೂಲಕ ಪಡೆಯಲಾಗಿತ್ತು . ಅದರಂತೆ ಈ ಬಾರಿ ಮೋಡ ಬಿತ್ತನೆಗೆ ಅಗತ್ಯ ಕ್ರಮ ಕೈಗೊಳಲಾಗಿದ್ದು, 3 ರೆಡಾರ್, 2 ವಿಮಾನಗಳ ಮೂಲಕ ಬೆಂಗಳೂರು ಮತ್ತು ಹುಬ್ಬಳ್ಳಿಗಳಲ್ಲಿ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೋಡ ಬಿತ್ತನೆ ಯಶಸ್ವಿಗೆ ಮಾನಿಟರಿಂಗ್ ಮತ್ತು ಅಡ್ವೈಸರಿ ಕಮಿಟಿ, ಟೆಕ್ನಿಕಲ್‍ ಎಕ್ಸಪರ್ಟ್ಸ್ ಕಮಿಟಿ, ಇಂಪ್ಲಿಮೆಂಟೇಷನ್ ಟೀಂ ಹಾಗೂ ಇವ್ಯಾಲ್ಯುಯೇಷನ್ ಕಮಿಟಿಗಳನ್ನು ರಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ನಗರದ ಖಾಸಗಿ ಹೊಟೇಲ್‍ನಲ್ಲಿ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಇಂಡಿಯನ್‍ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ಐಎಂಡಿ ಮತ್ತು ಭೂಗರ್ಭ ವಿಜ್ಞಾನ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಮೊದಲ ''ಅಂತರಾಷ್ಟ್ರೀಯ ಸಮ್ಮೇಳನ''ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 19 ವರ್ಷಗಳಲ್ಲಿ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯ ಪರಿಣಾಮ ಕುಡಿಯುವ ನೀರಿನ ಜೊತೆಗೆ ಬೆಳೆ ಮತ್ತು ಸಾಮಾನ್ಯ ಜನ ಜೀವನಕ್ಕೆ ಸಾಕಷ್ಟು ಹಾನಿ ಉಂಟಾಬಿದೆ. ರಾಜ್ಯದ ಬೇರೆಬೇರೆ ಭಾಗಗಳಲ್ಲಿ ಬೇರೆಬೇರೆ ವಾತಾವರಣ ಇರುವುದರಿಂದ ಮಳೆಯ ಲಭ್ಯತೆ ಕೂಡ ಭಿನ್ನವಾಗಿದೆ. ಮಳೆಯ ಲಭ್ಯತೆಯ ಪರಿಣಾಮ ಶೇ. 65 ಕ್ಕೆ ಇಳಿದಿದ್ದು, ರಾಜ್ಯದ ಭೌಗೋಳಿಕ ವೈವಿಧ್ಯತೆಯಿಂದ ವಾತಾವರಣದಲ್ಲಿಯೂ ಬದಲಾವಣೆ ಕಂಡುಬಂದಿದೆ ಎಂದರು.
ವಾತಾವರಣದ ಬದಲಾವಣೆಯನ್ನು ವೈಜ್ಞಾನಿಕವಾಗಿ ಪರಿಣಾಮಕಾರಿ ವಿಧಾನಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಬೇರೆ ಯಾವುದೇ ರಾಜ್ಯಗಳಿಗಿಂತ ಹೆಚ್ಚು ವೈಜ್ಞಾನಿಕ ಮತ್ತು ಶಿಸ್ತುಬದ್ಧ ವಿಧಾನದ ಮೂಲಕ ಮಳೆ ಮಾಪನವನ್ನು ಕಂಡುಕೊಳ್ಳಬಹುದಾಗಿದ್ದು, 6000 ಕ್ಕೂ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿರುವ ಮಳೆ ಮಾಪನ ಕೇಂದ್ರಗಳ ಮೂಲಕ ಮಳೆ ಪ್ರಮಾಣವನ್ನು ನಿಖರವಾಗಿ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ಸಚಿವರು ವಿವರಿಸಿದರು.
ಪ್ರಸ್ತುತ ರಾಜ್ಯದ ವಿವಿಧ ಪ್ರದೇಶದ ಮಳೆಯ ಪ್ರಮಾಣ 408 ಮಿ.ಮೀ ನಿಂದ 5051 ರಷ್ಟಿದೆ. ಬಹುತೇಕ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕೇವಲ ಶೇ 23 ರಷ್ಟಿದ್ದು, ಆತಂಕದ ಪರಿಸ್ಥಿತಿ ಇದೆ. ರಾಜ್ಯದ 10.5 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ 7.01 ಮಿಲಿಯನ್ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವಾಗಿದ್ದು, ಮಳೆ ಕೈಕೊಟ್ಟಲ್ಲಿ ತೀವ್ರ ಬರದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕೃಷ್ಣ ಬೈರೇಗೌಡ ಆತಂಕ ವ್ಯಕ್ತಪಡಿಸಿದರು.
ಮೋಡ ಬಿತ್ತನೆಯೊಂದೇ ಬರ ಪರಿಹಾರಕ್ಕೆ ಮಾರ್ಗವಲ್ಲ. ಧೀರ್ಘ ಕಾಲಿನ ಯೋಜನೆಗಳ ಮೂಲಕ ಬರದ ಸಮರ್ಥ ನಿರ್ವಹಣೆಗೆ ಇಲಾಖೆ ಹಾಗೂ ಸರ್ಕಾರ ಪ್ರಯತ್ನಿಸುತ್ತಿದ್ದು, ಆ ನಿಟ್ಟಿನಲ್ಲಿ 'ಜಲಾಮೃತ' ಯೋಜನೆ ಮೂಲಕ ಶಾಶ್ವತ ನೀರಾವರಿ ಪರಿಹಾರ ಕ್ರಮಗಳನ್ನು ಸಹ ಕೈಗೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಸಚಿವ ಎನ್‍.ಹೆಚ್.ಶಿವಶಂಕರ ರೆಡ್ಡಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಾ.ವಂದಿತಾ ಶರ್ಮ, ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್, ಡಾ. ಅಲಿ ಎಂ.ಅಬ್‍ಷೇವ್, ಡಾ.ಜೆ.ಆರ್.ಕುಲಕರ್ಣಿ, ಮುಖ್ಯ ಅಭಿಯಂತರ ಪ್ರಕಾಶ್ ಸೇರಿಂತೆ ಹಿರಿಯ ಅಧಿಕಾರಿಗಳು, ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com