ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಆವರಣದಲ್ಲಿ ಇನ್ನು ಜೈವಿಕ ಗೊಬ್ಬರ ತಯಾರಿಕೆ

ಸದಾ ಒಂದಿಲ್ಲೊಂದು ಹೊಸತನಕ್ಕೆ ಹೆಸರಾಗಿರುವ ತುಳಸಿಗೇರಿಯ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಜಿಲ್ಲೆಯಲ್ಲಿ ಮತ್ತೊಂದು ಹೊಸತನಕ್ಕೆ ನಾಂದಿ ಹಾಡಿದೆ. 
ಜೈವಿಕ ಘಟಕಕ್ಕೆ ಸಿಇಓ ಚಾಲನೆ
ಜೈವಿಕ ಘಟಕಕ್ಕೆ ಸಿಇಓ ಚಾಲನೆ

ಬಾಗಲಕೋಟೆ: ಸದಾ ಒಂದಿಲ್ಲೊಂದು ಹೊಸತನಕ್ಕೆ ಹೆಸರಾಗಿರುವ ತುಳಸಿಗೇರಿಯ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಜಿಲ್ಲೆಯಲ್ಲಿ ಮತ್ತೊಂದು ಹೊಸತನಕ್ಕೆ ನಾಂದಿ ಹಾಡಿದೆ. 

ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಸಿದ್ದ ಪಡಿಸಲಾಗುವ ಆಹಾರ ಮತ್ತು ಮಕ್ಕಳು ಉಂಡು ಉಳಿದ ಆಹಾರವನ್ನು ಹಾಗೆ ಎಲ್ಲೋ ಎಸೆಯುವ ಬದಲು ಅದನ್ನು ಜೈವಿಕ ಗೊಬ್ಬರವನ್ನಾಗಿಸಿ ತಯಾರಿಸುವುದು ಹೇಗೆ ಎನ್ನುವುದಕ್ಕೆ ಪ್ರಯೋಗ ಶಾಲೆಯಾಗಿ ಹೊರ ಹೊಮ್ಮಿದೆ.

ಶಾಲಾವಣರದಲ್ಲಿ ಜೈವಿಕ ಗೊಬ್ಬರ ತಯಾರಿಕೆಗೆ ತಗ್ಗು ಅಗೆದು, ಅದಕ್ಕೆ ಪೈಪ್ ಅಳವಡಿಸಲಾಗಿದೆ. ಆ ಪೈಪ್‌ಗೆ ಮಕ್ಕಳು ಬಿಸಿ ಊಟದ ನಂತರ ಉಳಿದ ಆಹಾರ ಪದಾರ್ಥವನ್ನು ಈ ಪೈಪ್ ಕಾಂಪೋಸ್ಟನಲ್ಲಿ ತಪ್ಪದೇ ಹಾಕಬೇಕು. ಅದು ತುಂಬಿದ ತಕ್ಷಣ ಮೂರು ತಿಂಗಳು ಬಿಟ್ಟಾಗ ಜೈವಿಕ ಗೊಬ್ಬರ ತಯಾರಾಗುತ್ತದೆ.

ಇದನ್ನು ಶಾಲಾ ಆವರಣದಲ್ಲಿ ಬೆಳೆಸಲಾದ ಗಿಡ, ಸಸಿಗಳಿಗೆ ಹಾಕಲು ಬಳಸಬೇಕು. ಬಿಸಿ ಊಟದ ನಂತರ ಉಳಿದ ಯಾವುದೇ ಪದಾರ್ಥವನ್ನು ವೇಸ್ಟ್ ಮಾಡದೇ ಜೈವಿಕ ಗೊಬ್ಬರ ತಯಾರಿಕೆಗೆ ಬಳಸುವಂತೆ ತಿಳಿವಳಿಕೆ ನೀಡುವ ಮೂಲಕ ಮಕ್ಕಳಲ್ಲಿ ಜೈವಿಕ ಗೊಬ್ಬರ ತಯಾರಿಕೆ ಬಗ್ಗೆ ಮಾಹಿತಿ ನೀಡುವ ಹೊಸ ಪ್ರಯೋಗಕ್ಕೆ ಜಿಪಂ. ಸಿಇಒ ಗಂಗೂಬಾಯಿ ಮಾನಕರ ಚಾಲನೆ ನೀಡಿದ್ದಾರೆ.

ತುಳಸಿಗೇರಿಯ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಜಿಲ್ಲೆಯಲ್ಲಿ ಜೈವಿಕ ಗೊಬ್ಬರ ತಯಾರಿಸುವ ವಿಧಾನಕ್ಕೆ ಚಾಲನೆ ನೀಡಿರುವ ಸಿಇಒ ಅವರು ಇದನ್ನು ಇಡೀ ಜಿಲ್ಲೆಯ ಎಲ್ಲ ಶಾಲೆಗಳಿಗೆ ವಿಸ್ತರಿಸಲು ಮುಂದಾಗಿದ್ದಾರೆ.

ಜೈವಿಕ ಗೊಬ್ಬರ ಘಟಕವನ್ನು ಗ್ರಾಮ ಪಂಚಾಯಿತಿ ವತಿಯಿಂದ ಸ್ಥಾಪನೆಗೆ ಮುಂದಾಗಿರುವ ಅವರು ಘಟಕ ಸ್ಥಾಪನೆಗೆ ಒಂದು ಗುಂಡಿಯನ್ನು ತೋಡಿ ಅದರೊಳಗೆ ಒಂದು ಪೈಪ್ ಇಟ್ಟು ಬೆಲ್ಲದ ನೀರು, ಸಗಣೆ ನೀರು ಹಾಗೂ ಸ್ವಲ್ಪ ಮಣ್ಣು ಹಾಕಬೇಕು. ನಂತರ ಮನೆಯಲ್ಲಿ ಉಳಿದ ವೇಸ್ಟ ಹಸಿ ಪದಾರ್ಥಗಳನ್ನು ಹಾಕಿದರೆ ಸಾಕು ಜೈವಿಕ ಗೊಬ್ಬರ ತಯಾರಿಸಬಹುದು ಎನ್ನುವುದನ್ನು ವಿದ್ಯಾರ್ಥಿಗಳಿಗೆ  ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ರೈತರು ಕೂಡ ತಮ್ಮ ಜಮೀನುಗಳಲ್ಲಿ ಜೈವಿಕ ಗೊಬ್ಬರ ತಯಾರಿಸುವ ಘಟಕವನ್ನು ಸ್ಥಾಪಿಸಿ ಬಂದಂತಹ ಗೊಬ್ಬರವನ್ನು ಜಮೀನುಗಳಿಗೆ ಬಳಸುವ ಮೂಲಕ ಹಾಗೂ ಪ್ಯಾಕ್ ಮಾಡಿ ಬೇರೆಯವರಿಗೆ ಮಾರಬಹುದಾಗಿದೆ. ಆ ಮೂಲಕ ಆರ್ಥಿಕ ಸ್ಥಿತಿ ಬಲವರ್ಧನೆಗೆ ಸಹಕಾರಿ ಆಗಲಿದೆ ಎನ್ನುವುದನ್ನು ಮನದಟ್ಟು ಮಾಡುವ ಪ್ರಯತ್ನಕ್ಕೆ ಜಿಪಂ ಸಿಇಒ ಕೈ ಹಾಕಿದ್ದಾರೆ. ಈಗಾಗಲೇ ಅವರು ಜಿಲ್ಲೆಯಲ್ಲಿರುವ ಎಲ್ಲ ಶಾಲಾ ಕಾಲೇಜುಗಳಲ್ಲಿ ಜೈವಿಕ ಘಟಕ ಸ್ಥಾಪನೆಗೆ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಗೆ ಸೂಚನೆ ಕೂಡ ನೀಡಿದ್ದಾರೆ.

ಜಿಲ್ಲೆಯ ಎಲ್ಲ ಶಾಲೆಗಳ ಆವರಣದಲ್ಲಿ ಜೈವಿಕ ಘಟಕ ಸ್ಥಾಪನೆ ಬಳಿಕ ಅಲ್ಲಿ ಉತ್ಪಾದನೆ ಆಗುವ ಜೈವಿಕ ಗೊಬ್ಬರವನ್ನು ಶಾಲಾವರಣದಲ್ಲಿನ ಉದ್ಯಾನಕ್ಕೆ, ತರಕಾರಿ ಬೆಳೆಯಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಆ ಮೂಲಕ ಮಧ್ಯಾಹ್ನ ಬಿಸಿಯೂಟಕ್ಕೆ ಶಾಲಾವರಣದಲ್ಲಿ ಬೆಳೆಯುವ ಸಾವಯವ ತರಕಾರಿ ಬಳಕೆ ಮಾಡಿಕೊಳ್ಳಲು ಸಹಕಾರಿ ಆಗಲಿದೆ.

ನೂತನ ವ್ಯವಸ್ಥೆ ಅನುಷ್ಠಾನದಿಂದ ಜೈವಿಕ ಗೊಬ್ಬರ ತಯಾರಿಕೆ, ಬಳಕೆ, ಮಾರಾಟ, ತರಕಾರಿ ತಯಾರಿಕೆ, ಉದ್ಯಾನ ನಿರ್ವಹಣೆಗೆ ಸಹಕಾರಿ ಆಗಲಿದೆ. ಒಟ್ಟಾರೆ ಶಾಲೆಯ ವಾತಾರವಣದಲ್ಲಿ ಸಮಗ್ರ ಬದಲಾವಣೆ ಕೂಡ ತರಲು ಸಾಧ್ಯವಾಗಲಿದೆ ಎನ್ನುವದು ಸಿಇಒ ಅವರ ಉದ್ದೇಶವಾಗಿದೆ.  ಅವರ ಉದ್ದೇಶ ಸಾಕಾರಕ್ಕೆ ಜಿಲ್ಲೆಯ ಎಲ್ಲ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳು ಎಷ್ಟರ ಮಟ್ಟಿಗೆ ಕೈ ಜೋಡಿಸಲಿದ್ದಾರೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com