ರಾಜ್ಯದಲ್ಲೂ ರಾಷ್ಟ್ರೀಯ ಪೌರತ್ವ ನೀತಿ ಜಾರಿ: ಬಸವರಾಜ್ ಬೊಮ್ಮಾಯಿ
ಹಾವೇರಿ: ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಈಗಾಗಲೇ ಸಾಕಷ್ಟು ವಿಶ್ಲೇಷಣೆ ನಡೆದಿದೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಪ್ರತಿಯೊಬ್ಬರು ತಮ್ಮ ಕೆಲಸ ನಿರ್ವಹಿಸುವಾಗ ಎದುರಾದ ಅನುಭವಗಳಿಂದ ಕೆಲವು ಮಾತುಗಳು ಹೇಳಿರುತ್ತಾರೆ. ಅದನ್ನು ಪೂರ್ಣ ಬಹುಮತ ಸರ್ಕಾರದ ಹೋಲಿಕೆಗೆ ಹಾಗೆ ಹೇಳಿದ್ದು ಬಿಟ್ಟರೆ ಬೇರೇನೂ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ “ತಂತಿ ಮೇಲಿನ ನಡಿಗೆ” ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ಏನು ಹೇಳುವುದು. ಅವರು ಹದಿನಾಲ್ಕು ತಿಂಗಳಿಗೆ ಕಳೆದು ಹೋದವರು. ಅಂಥವರು ನೀಡುವ ಪ್ರಮಾಣ ಪತ್ರ ನಮಗೆ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ನಡೆಸಿದಂತೆ ರಾಜ್ಯದಲ್ಲೂ ಎನ್ಆರ್ಸಿ ನಡೆಸುವ ಕುರಿತು ಎರಡು ಬಾರಿ ಸಭೆ ನಡೆಸಿದ್ದೇವೆ. ದೇಶದ ಹಲವು ರಾಜ್ಯಗಳು ಎನ್ಆರ್ಸಿ ನಡೆಸಲು ಒಪ್ಪಿಗೆ ಸೂಚಿಸಿವೆ. ಬೆಂಗಳೂರು ಹಾಗೂ ರಾಜ್ಯದ ವಿವಿಧ ನಗರಗಳಲ್ಲಿ ಹೊರ ದೇಶಗಳಿಂದ ಬಂದವರು ಬಹುದೊಡ್ಡ ಪ್ರಮಾಣದಲ್ಲಿ ನೆಲೆಸಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಎನ್ಆರ್ಸಿ ನಡೆಸುವ ಕುರಿತು ಅಧ್ಯಯನ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ರಾಜ್ಯದಲ್ಲೂ ಎನ್ ಆರ್ ಸಿ ಜಾರಿಗೊಳಿಸಲಾಗುವುದು ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ