ಬಂಡೀಪುರ ಅರಣ್ಯ ಪ್ರದೇಶದಲ್ಲಿ ತೇಗ, ಹೊನ್ನೆಯಂತಹ ಸಂಪದ್ಭರಿತ ಮರಗಳಿದ್ದು ಇವುಗಳ ಮೇಲೆ ಯಾವಾಗಲೂ ಇರುತ್ತಿದ್ದ ಮರಗಳ್ಳರ ಕಣ್ಣು ಈಗ ಪೊಲೀಸ್ ನಾಯಿ ರಾಣಾನಿಂದ ತಪ್ಪಿದೆ ಎನ್ನಬಹುದು. ಯಾವುದೇ ಡಿಸ್ಟರ್ಬೆನ್ಸ್ ಇಲ್ಲಾಂದ್ರೆ 30-40 ಕಿ.ಮೀ. ದೂರದವರೆಗೂ ವಾಸನೆ ಮೂಲಕವೇ ಕಳ್ಳರನ್ನು ಹಿಡಿಯುತ್ತಿದ್ದ ರಾಣಾನಿಗೆ ವಯಸ್ಸಾಗುತ್ತಿರುವುದರಿಂದ ಕೆಲವೇ ತಿಂಗಳುಗಳಲ್ಲಿ ರಾಣಾ ನಿವೃತ್ತಿಯಾಗಲಿದ್ದಾನೆ.
ಚಾಮರಾಜನಗರ: ಕ್ಷಣಾರ್ಧದಲ್ಲಿ ಕಾಡುಗಳ್ಳರನ್ನು, ನಾಡಿಗೆ ಬಂದ ವನ್ಯಜೀವಿಗಳ ಇರುವಿಕೆಯನ್ನು ಪತ್ತೆಹಚ್ಚುತ್ತಿದ್ದ ಬಂಡೀಪುರ ಹುಲಿ ಸುರಕ್ಷಿತ ಪ್ರದೇಶದ ಸ್ಪೆಷಲ್ ಇನ್ವೆಸ್ಟಿಗೇಟರ್ ರಾಣಾ ಮುಂದಿನ ವರ್ಷ ನಿವೃತ್ತಿಯಾಗುತ್ತಿದ್ದಾನೆ.ಪೊಲೀಸ್ ಶ್ವಾನ ರಾಣಾನಿಗೆ 8 ವರ್ಷವಾಗುತ್ತಿದೆ. ರಾಣಾನ ಸೂಕ್ಷ್ಮ ವಾಸನಾಗ್ರಹಿಗಳು ಕುಂದದಿದ್ದರೂ ವಯೋಮಾನಕ್ಕುಗುಣವಾಗಿ ನಿವೃತ್ತಿಯಂಚಿಗೆ ಬಂದು ನಿಂತಿದ್ದಾನೆ. ಬಂಡೀಪುರದ ಮುಕುಟಮಣಿಯಾಗಿದ್ದ ಪ್ರಿನ್ಸ್ ಹುಲಿಯಂತೆ ರಾಣಾ ಕೂಡ ತನ್ನ ಸಾಹಸಕಾರ್ಯದಿಂದ ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದು ಅವನ ಅಭಿಮಾನಿಗಳಿಗೆ ಈ ನಿವೃತ್ತಿಯ ಸುದ್ದಿ ನಿಜಕ್ಕೂ ಬೇಸರ ತರಿಸಬಹುದು. ಈ ಬಗ್ಗೆ ಬಂಡೀಪುರ ಸಿಎಫ್ಒ ಬಾಲಚಂದ್ರ ಮತ್ತು ರಾಣಾನನ್ನು ನೋಡಿಕೊಳ್ಳುತ್ತಿರುವ ಕಾಳ ತಿಳಿಸಿದ್ದಾರೆ.
ರಾಣಾ ಜರ್ಮನ್ ಶಫರ್ಡ್ ಜಾತಿಯ ಶ್ವಾನವಾಗಿದ್ದು, 9 ತಿಂಗಳು ಮಧ್ಯಪ್ರದೇಶದಲ್ಲಿ 11 ತಿಂಗಳು ತರಬೇತಿ ಪಡೆದಿತ್ತು. ಪ್ರಕಾಶ್ ಎಂಬವರು ಈ ರಾಣಾನನ್ನು ನೋಡಿಕೊಳ್ಳುತ್ತಿದ್ದರು. ಈಗ ಕಾಳ ಎಂಬವರು ಶ್ವಾನದ ಮೇಂಟರ್ ಆಗಿದ್ದು, ಇವರನ್ನು ಬಿಟ್ಟು ಬೇರಿನ್ಯಾರ ಮಾತನ್ನು ರಾಣಾ ಕೇಳಲ್ಲ, ಬೇರೆಯವರು ನೀಡಿದ ತಿನಿಸನ್ನು ತಿನ್ನಲ್ಲ ಈ ಸೂಪರ್ ಡಾಗ್.
Advertisement