ಸೆ. 29ರಿಂದ ದಸರಾ ಚಟುವಟಿಕೆ ಆರಂಭ: ಹಿಂದಿಗಿಂತಲೂ ಹೆಚ್ಚು ಝಗಮಗಿಸಲಿರುವ ಮೈಸೂರು

ಮೈಸೂರು ದಸರಾ ವೀಕ್ಷಿಸಲು ಬರುವ ಪ್ರವಾಸಿಗರ ಕಣ್ಮನ ಸೆಳೆಯಲು ಸಜ್ಜಾಗಿರುವ ಜಿಲ್ಲಾಡಳಿತ, ರಾತ್ರಿ ವೇಳೆ ನಗರವನ್ನು ಇನ್ನಷ್ಟು ವೈಭವಯುತವಾಗಿಸಲು ಕ್ರಮ ಕೈಗೊಂಡಿದೆ. 
ಮೈಸೂರು ದಸರಾ
ಮೈಸೂರು ದಸರಾ

ಮೈಸೂರು: ಮೈಸೂರು ದಸರಾ ವೀಕ್ಷಿಸಲು ಬರುವ ಪ್ರವಾಸಿಗರ ಕಣ್ಮನ ಸೆಳೆಯಲು ಸಜ್ಜಾಗಿರುವ ಜಿಲ್ಲಾಡಳಿತ, ರಾತ್ರಿ ವೇಳೆ ನಗರವನ್ನು ಇನ್ನಷ್ಟು ವೈಭವಯುತವಾಗಿಸಲು ಕ್ರಮ ಕೈಗೊಂಡಿದೆ. 

ನಗರದ 75 ಕಿಮೀ ಉದ್ದದ ರಸ್ತೆ ಹಾಗೂ 91 ವೃತ್ತಗಳಲ್ಲಿ ದೀಪಾಲಂಕಾರ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಇದು ಕಳೆದ ವರ್ಷಗಳಿಗಿಂತ ಭಿನ್ನವಾಗಿರಲಿದೆಯಂತೆ. ಜೊತೆಗೆ, ಅನೇಕ ಸಾರ್ವಜನಿಕ ಕಟ್ಟಡಗಳು ಹಾಗೂ ಪಾರಂಪರಿಕ ಕಟ್ಟಡಗಳನ್ನು ಸಂಪೂರ್ಣವಾಗಿ ದೀಪಗಳಿಂದ ಅಲಂಕರಿಸಲು ಯೋಜನೆ ರೂಪಿಸಿದೆ. ಈ ಎಲ್ಲಾ ಕೆಲಸಗಳು ಸೆ .25ರೊಳಗೆ ಪೂರ್ಣಗೊಳ್ಳಲಿದೆ. 

ಗುರುವಾರ ಸಂಜೆ ಉತ್ಸವ ವಿವಿಧ ಸಿದ್ಧತೆಗಳನ್ನು ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ದಸರಾ ದೀಪಾಲಂಕಾರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದರು. ನಂತರ ಸುದ್ದಿಗಾರರೊಂದಿಗೆ  ಮಾತನಾಡಿ, ಈ ಪೋಸ್ಟರ್ ಗಳು ಪಶ್ಚಿಮ ಬಂಗಾಳದ ದುರ್ಗಾ ಪೂಜೆಯ ಚಿತ್ರಗಳಿಗೆ ಹೋಲಿಕೆಯಾಗುತ್ತವೆ ಎಂದರು. 

ನಗರದಾದ್ಯಂತ 10 ದಿನಗಳ ಕಾಲ ದೀಪಾಲಂಕಾರ ಮಾಡಲು ಸುಮಾರು 1 ಲಕ್ಷ ಯೂನಿಟ್ ವಿದ್ಯುತ್ ಬೇಕಾಗುತ್ತದೆ. ಆದ್ದರಿಂದ ವಿದ್ಯುತ್ ಉಳಿಸುವ ಸಲುವಾಗಿ ಅರಮನೆ ಹಾಗೂ ಪ್ರಮುಖ ಪ್ರವಾಸಿ ತಾಣಗಳಲ್ಲಿ ಎಲ್ ಇಡಿ ಬಲ್ಬ್ ಗಳನ್ನು ಬಳಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಇದರ ಜೊತೆಗೆ, ದಸರಾ ಉತ್ಸವ ಉಸ್ತುವಾರಿ ಸಮಿತಿ ಶ್ರೀರಂಗಪಟ್ಟಣದಲ್ಲಿ 10 ಲಕ್ಷ ರೂ. ಹಾಗೂ ಚಾಮರಾಜನಗರದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ದೀಪಾಲಂಕಾರ ಮಾಡಲು ಯೋಜನೆ ರೂಪಿಸಿದೆ ಎಂದ ಸಚಿವರು, ಈ ಯೋಜನೆಗೆ ಒಟ್ಟಾರೆಯಾಗಿ 15 ಲಕ್ಷ ರೂ. ವೆಚ್ಚವಾಗಲಿದೆ ಎಂದರು. ಜೊತೆಗೆ, ದಸರಾ ಉತ್ಸವ ಮುಗಿದ ನಂತರ ಚಾಮುಂಡೇಶ್ವರಿ ತೆಪ್ಪೋತ್ಸವದವರೆಗೆ ದೀಪಾಲಂಕಾರ ವ್ಯವಸ್ಥೆ ಮುಂದುವರಿಸಲು ಅಧಿಕಾರಿಗಳಿಗೆ ಸೂಚಿಸಿದರು. 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೆ. 29ರಂದು ದಸರಾ ಕ್ರೀಡಾ ಜ್ಯೋತಿಯನ್ನು ಬೆಳಗಲಿದ್ದಾರೆ ಎಂದು ಘೋಷಿಸಲಾಗಿದೆ. ಈ ಜ್ಯೋತಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಸುತ್ತುವರಿದು ಅ.1ರಂದು ಮೈಸೂರು ನಗರ ತಲುಪಲಿದೆ. ಉತ್ಸವದ ಅಂಗವಾಗಿ ಸೆ. 14ರಿಂದ ತಾಲೂಕು ಮಟ್ಟದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು. ಅ. 1ರಿಂದ 3ರವರೆಗೆ ರೈತ ದಸರಾ ನಡೆಯಲಿದೆ. ಸೆ. 29ರಿಂದ ಅಕ್ಟೋಬರ್ 10ರವರೆಗೆ ಇಲ್ಲಿನ ಲಲಿತ ಮಹಲ್ ಅರಮನೆ ಮೈದಾನ ಹಾಗೂ ಸ್ಕ್ಟೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳ ನಡೆಯಲಿದೆ ಎಂದರು. 

ಈ ಸಂದರ್ಭದಲ್ಲಿ ಉಪ ಆಯುಕ್ತ ಅಭಿರಾಮ್ ಜಿ . ಶಂಕರ್ ಹಾಗೂ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com