ಹಿರಿಯ ರಂಗಕರ್ಮಿ ಮಾಲತಿ ಸಾಗರ ವಿಧಿವಶ

:ಹಿರಿಯ ರಂಗಕರ್ಮಿ ಮಾಲತಿ ಸಾಗರ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಮಾಲತಿ ಸಾಗರ
ಮಾಲತಿ ಸಾಗರ
ಶಿವಮೊಗ್ಗ: ಹಿರಿಯ ರಂಗಕರ್ಮಿ ಮಾಲತಿ ಸಾಗರ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಾಲತಿ ಸಾಗರ ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಎಚ್1ಎನ್1 ನಿಂದ ಬಳಲುತ್ತಿದ್ದ ಅವರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.
ದೆಹಲಿ ನಾಟಕಶಾಲೆಯಲ್ಲಿ ರಂಗ ಅದ್ಯಯನ ಕೈಗೊಂಡಿದ್ದ ಮಾಲತಿ ಸಾಗರ ಅವರು ಹಲವು ನಾಟಕಗಳ ರಚನೆ, ನಿರ್ದೇಶನ ಮಾಡಿದ್ದಾರೆ. ಕೆಲವಾರು ಚಲನಚಿತ್ರಗಳಲ್ಲಿ ಸಹ ಅಭಿನಯಿಸಿದ್ದಾರೆ. ಎಸ್.ಮಾಲತಿ ಸಮುದಾಯ ರಂಗ ಚಳವಳಿಗೆ ಸಾಕಷ್ಟು ಶಕ್ತಿ ತುಂಬಿದ್ದರು.
‘ಜನಮ್’ ತಂಡದ ಸಫ್ದರ್  ಹಷ್ಮಿ ರಚಿಸಿದ ನಾಟಕಗಳನ್ನು ಕನ್ನಡ ಬೀದಿ ರಂಗಭೂಮಿಗೆ ಪರಿಚಯಿಸಿದ ಹಿರಿಮೆ ಅವರದ್ದಾಗಿತ್ತು. ಅನೇಕ ಸ್ವತಂತ್ರ ನಾಟಕಗಳನ್ನು ರಚಿಸಿ ಅದನ್ನು ವೇದಿಕೆಗೆ ತಂದಿದ್ದರು.
ರಂಗಕರ್ಮಿ ಮಾಲತಿ ಅವರ ನಿಧನಕ್ಕೆ ಸಾಗರ ಶಾಸಕ ಹರತಾಳು ಹಾಲಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾಲತಿ ಅವರ ಅಂತಿಮ ಸಂಸ್ಕಾರ ಸಾಗರದಲ್ಲಿ ಇಂದು ಸಂಜೆ ನಡೆಯಲಿದೆ ಎಂದು ಅವರ ನಿಕಟವರ್ತಿ ಮೂಲಗಳು ಹೇಳಿವೆ. 
ಎಸ್‌.ಮಾಲತಿ ಅವರು ರಾಜ್ಯದ ಚಂದನ ವಾಹಿನಿ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೂ ಭಾಜನರಾಗಿದ್ದರು. 

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಪದವೀಧರೆಯಾಗಿದ್ದ ಮಾಲತಿ ನಾಟಕ ರಚನೆ, ಪುಸ್ತಕ ವಿಮರ್ಶೆ, ನಾಟಕ ನಿರ್ದೇಶನ ಹೀಗೆ ಸದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. 'ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ಅಂತರಂಗ ಅಂಕಣದ ಮೂಲಕ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದರು. 

ಕೆರೆಗೆ ಹಾರ, ಸಿರಿ ಸಂಪಿಗೆ, ಯಯಾತಿ, ಹಯವದನ, ಹ್ಯಾಮ್ಲೆಟ್‌ ಮುಂತಾದ ನಾಟಕಗಳನ್ನು ನಿರ್ದೇಶಿಸಿ, ಪ್ರದರ್ಶಿಸಿದ್ದಾರೆ. ಜೀವನವೆಂಬ ನಾಟಕ ರಂಗ, ದಲಿತ ಲೋಕ, ಭೀಮಕಥಾನಕ ಮುಂತಾದ ಸ್ವರಚಿತ ನಾಟಕಗಳಲ್ಲದೆ, ರೋಶೋಮನ್‌, ಜನತೆಯ ಶತ್ರು, ಒಂದು ಪಯಣದ ಕಥೆ ಮುಂತಾದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. 

ಭಾವಕೋಶ, ತಾನು ಒಲಿದಂತೆ ಹಾಡುವೆ ಸಂಕಲನಗಳನ್ನು ಪ್ರಕಟಿಸಿದ್ದರು. ಕ್ಷಣಿಕವಲ್ಲದ ಕ್ಷಣಗಳು ಕವನ ಸಂಕಲನಕ್ಕೆ ಮುಂಬಯಿ ಕನ್ನಡ ಸಂಘದ ಪೇಜಾವರ ಸದಾಶಿವ ರಾವ್‌ ಪ್ರಶಸ್ತಿ ಲಭಿಸಿತ್ತು.

ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದ ಅವರು ನಾಟಕ ಅಕಾಡೆಮಿಯ ನಿರ್ದೇಶಕಿ ಪ್ರಶಸ್ತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಮಕ್ಕಳ ರಂಗಭೂಮಿ ಪ್ರಶಸ್ತಿಗೂ  ಭಾಜನರಾಗಿದ್ದರು.  ಪತಿ ಪುರುಷೋತ್ತಮ ತಲವಾಟ ಸಹ ರಂಗಭೂಮಿ, ಚಲನಚಿತ್ರ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com