ತಂದೆಗೆ ಪಂಕ್ಚರ್ ಶಾಪ್ ನಲ್ಲಿ ಕೆಲಸಕ್ಕೆ ನೆರವಾಗುವ ಪಿಯುಸಿ ಕಲಾ ವಿಭಾಗದ ಟಾಪರ್

ಇಲ್ಲಿನ ಕೊಟ್ಟೂರು ಪಿಯುಸಿ ಕಾಲೇಜು ವಿದ್ಯಾರ್ಥಿನಿ ಡಿ ಕುಸುಮಾ ಪಾಲಿಗೆ ನಿನ್ನೆಯ ಸೋಮವಾರ ಅತ್ಯಂತ ...

Published: 16th April 2019 12:00 PM  |   Last Updated: 16th April 2019 11:07 AM   |  A+A-


Kusuma in fathers puncture shop

ಪಂಕ್ಚರ್ ಶಾಪ್ ನಲ್ಲಿ ತಂದೆಗೆ ಕೆಲಸಕ್ಕೆ ನೆರವಾಗುತ್ತಿರುವ ಕುಸುಮಾ

Posted By : SUD SUD
Source : The New Indian Express
ಬಳ್ಳಾರಿ: ಇಲ್ಲಿನ ಕೊಟ್ಟೂರು ಪಿಯುಸಿ ಕಾಲೇಜು ವಿದ್ಯಾರ್ಥಿನಿ ಡಿ ಕುಸುಮಾ ಪಾಲಿಗೆ ನಿನ್ನೆಯ ಸೋಮವಾರ ಅತ್ಯಂತ ಸಂತಸದ ದಿನವಾಗಿತ್ತು. ತನ್ನ ತಂದೆಯ ವಾಹನ ಪಂಕ್ಚರ್ ಶಾಪ್ ನಲ್ಲಿ ವಿರಾಮದ ಸಮಯಗಳಲ್ಲಿ ಕೆಲಸಕ್ಕೆ ಸಹಾಯ ಮಾಡುತ್ತಿದ್ದ ಕುಸುಮಾ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಕುಸುಮಾಳ ತಂದೆ ದೇವೇಂದ್ರಪ್ಪ ಕಳೆದೆರಡು ದಶಕದಿಂದ ಇಲ್ಲಿ ವಾಹನ ಪಂಕ್ಚರ್ ಶಾಪ್ ಇಟ್ಟುಕೊಂಡಿದ್ದು ಅದುವೇ ಅವರ ಜೀವನಕ್ಕೆ ಆಧಾರ. ಕುಸುಮಾಳ ಮೂವರು ಹಿರಿಯ ಸೋದರಿಯರು ತಂದೆಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಇದೀಗ ಕುಸುಮಾ ಕೂಡ ಕಾಲೇಜು ಇಲ್ಲದ ದಿನ, ವಿರಾಮದ ಸಮಯದಲ್ಲಿ ತಂದೆಯ ಶಾಪ್ ಗೆ ಹೋಗಿ ಗ್ರಾಹಕರು ಪಂಕ್ಚರ್ ಹಾಕಿಸಲೆಂದು ಬಂದಾಗ ಪಂಕ್ಚರ್ ಹಾಕಿಕೊಡುವ ಕೆಲಸ ಮಾಡುತ್ತಿದ್ದಾಳೆ. ಕುಸುಮಾಳ ತಾಯಿ ಜಯಮ್ಮ ಕೂಲಿ ಕೆಲಸ ಮಾಡುತ್ತಾರೆ.

ಕುಸುಮಾಳಲ್ಲಿ ಚಿಕ್ಕಂದಿನಿಂದಲೂ ಓದಿನಲ್ಲಿ ಬಹಳ ಉತ್ಸಾಹ, ಇದರಿಂದಾಗಿಯೇ ಕಲಾ ವಿಭಾಗದಲ್ಲಿ 600ಕ್ಕೆ 594 ಅಂಕಗಳನ್ನು ಗಳಿಸಿದ್ದಾಳೆ. 5 ವರ್ಷಗಳ ಹಿಂದೆ ಕುಸುಮಾ ಓದಿದ್ದ ಕಾಲೇಜಿನಲ್ಲಿಯೇ ಓದಿದ್ದ ನೇತ್ರಾವತಿ ಎಂಬುವವಳು ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಳು. ಅವರೇ ನನಗೆ ಸ್ಪೂರ್ತಿ ಎನ್ನುತ್ತಾಳೆ ಕುಸುಮಾ.

ಕುಸುಮಾಳ ಸಾಧನೆಯ ಹಿಂದೆ ಹೆತ್ತವರ ಪ್ರೋತ್ಸಾಹವೂ ಇದೆ. ಅವರು ಅಷ್ಟೊಂದು ಶಿಕ್ಷಿತರಲ್ಲದಿದ್ದರೂ ಕೂಡ ಮಕ್ಕಳು ಓದುವುದಕ್ಕೆ ಯಾವುದೇ ಅಡ್ಡಿಪಡಿಸಲಿಲ್ಲ. ನಾನು ಮತ್ತು ನನ್ನ ಸೋದರಿಯರು ಓದಲು ಪೋಷಕರು ಸಹಾಯ ಮಾಡಿದ್ದಾರೆ ಎನ್ನುತ್ತಾರೆ ಕುಸುಮಾ.
ಅಂತಿಮ ಪರೀಕ್ಷೆಗೆ ಮೊದಲು ಇಡೀ ಸಿಲೆಬಸ್ ನ ಮೇಲೆ 10 ಬಾರಿ ನಮಗೆ ಪೂರ್ವತಯಾರಿ ಪರೀಕ್ಷೆ ಮಾಡಿದ್ದರು. ಇಡೀ ವರ್ಷ ಉಪನ್ಯಾಸಕರು ಚೆನ್ನಾಗಿ ನಮಗೆ ಹೇಳಿಕೊಟ್ಟು ಪರೀಕ್ಷೆಗೆ ಸಜ್ಜುಗೊಳಿಸಿದರು. ಇದು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಹಾಯವಾಯಿತು ಎನ್ನುವ ಕುಸುಮಾಗೆ ಐಎಎಸ್ ಮಾಡಬೇಕೆಂಬ ಆಸೆಯಿದೆ.

ಕುಸುಮಾಳಿಗೆ ಮೂವರು ಸೋದರಿಯರಿದ್ದಾರೆ. ಹಿರಿಯ ಸೋದರಿ ಕರಿಬಸಮ್ಮ ಎಂ.ಕಾಂ ಮಾಡಿದ್ದು, ಎರಡನೇ ಸೋದರಿ ಕಾವ್ಯ ಬಿ.ಎಡ್ ಮುಗಿಸಿದ್ದಾಳೆ. ಮೂರನೇ ಸೋದರಿ ಪ್ರೇಮಾ ಅಂತಿಮ ವರ್ಷದ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದಾಳೆ. ಮಕ್ಕಳ ಓದಿನ ಆಸೆಗೆ ನನ್ನಿಂದಾದಷ್ಟು ಸಹಾಯ ಮಾಡುತ್ತೇನೆ. ಅವರ ಕನಸು ಈಡೇರಬೇಕೆಂಬುದು ನನ್ನ ಆಸೆ ಎನ್ನುತ್ತಾರೆ ತಂದೆ ದೇವೇಂದ್ರಪ್ಪ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp