ಮನೆ ಬದಲಿಸಿದವರು, ಮೃತಪಟ್ಟವರ ಹೆಸರು ಪಟ್ಟೀಲಿದೆ ಆದರೆ ನೈಜ ಮತದಾರರು ಕಾಣೆಯಾಗಿದ್ದಾರೆ: ರಾಮಲಿಂಗಾ ರೆಡ್ಡಿ

ಏಪ್ರಿಲ್ 18 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯಿಂದ ಹಲವಾರು ಹೆಸರುಗಳು ಕೈಬಿಟ್ಟು ಹೋಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ....
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ
ಬೆಂಗಳೂರು: ಏಪ್ರಿಲ್ 18 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯಿಂದ ಹಲವಾರು ಹೆಸರುಗಳು ಕೈಬಿಟ್ಟು ಹೋಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆಗೆ ತನ್ನದೇ ಆದ ಮಹತ್ವವಿದೆ. ಆದರೆ ಮತದಾರರು ಮತದಾನದಿಂದ ದೂರ ಉಳಿಯುವಂತೆ ಮಾಡುವುದು ಅಪಾಯಕಾರಿ ಬೆಳವಣಿಗೆ. ಕಳೆದ ಗುರುವಾರ ನಡೆದ ಚುನಾವಣೆಯಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ಅದರಲ್ಲೂ ನಿರ್ದಿಷ್ಟವಾಗಿ ಬೆಂಗಳೂರು ನಗರದಲ್ಲಿ ಬಹಳಷ್ಟು ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು. 
ಮನೆ ಖಾಲಿ ಮಾಡಿದವರ ಹಾಗೂ ಮೃತಪಟ್ಟವರ ಹೆಸರು ಮತದಾರರ ಪಟ್ಟಿಯಲ್ಲಿ ಹಾಗೆಯೇ ಉಳಿದಿದೆ. ಒಂದೇ ಮನೆಯ ಮತದಾರ ಹೆಸರು ಬೇರೆ ಬೇರೆ ಮತಗಟ್ಟೆಗಳಿಗೆ ಹಂಚಿಹೋಗಿದೆ. ಮತದಾರರ ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಸಾಕಷ್ಟು ಮಂದಿ ಮತದಾನದಿಂದ ದೂರ ಉಳಿಯುವಂತಾಯಿತು. ಮನೆ ಖಾಲಿಮಾಡಿದವರು, ಸತ್ತವರ ಹೆಸರನ್ನು ಮತದಾರರ ಪಟ್ಟಿಯಿಂದ ಕೂಡಲೇ ಕೈಬಿಡಬೇಕು. ಗುರುತಿನ ಚೀಟಿ ಇರುವ ನೈಜ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಬೇಕು ಎಂದು ಆಯೋಗಕ್ಕೆ ದೂರು ನೀಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ ಎಂದರು. 
ಆಯೋಗದ ಅಂತರ್ಜಾಲದಲ್ಲಿರುವ ಮತದಾರರ ಪಟ್ಟಿಗೂ, ಮುದ್ರಿತ ಮತದಾರರ ಪಟ್ಟಿಗೂ ತಾಳೆಯಾಗುತ್ತಿಲ್ಲ. ವಿಚಿತ್ರವೆಂದರೆ ಕಳೆದ ವರ್ಷ ವಿದಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರ ಹೆಸರು ಈ ಬಾರಿಯ ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿದೆ. ಸಾಕಷ್ಟು ಲೋಪದೋಷಗಳು ಈ ಬಾರಿ ಉಂಟಾಗಿದೆ ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದರು.  
ಶ್ರೀಲಂಕಾದಲ್ಲಿನ ಭೀಕರ ಬಾಂಬ್ ಸ್ಫೋಟದಲ್ಲಿ ಕನ್ನಡಿಗರ ಸಾವು ತಮಗೆ ಅತೀವ ನೋವು ತಂದಿದ್ದು, ಸ್ಫೋಟದಲ್ಲಿ ನಾಗರಾಜರೆಡ್ಡಿ ಮೃತಪಟ್ಟಿದ್ದಾರೆ. ಪುರುಷೋತ್ತಮ ರೆಡ್ಡಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರೂ ನಮ್ಮ ಸಂಬಂಧಿಕರು. ಜತೆಗೆ ತಮ್ಮ ಕ್ಷೇತ್ರದವರು. ಇದೊಂದು ದುರದೃಷ್ಟಕರ ಘಟನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com