ನೂತನ ಸಿಎಂ ಯಡಿಯೂರಪ್ಪಗೆ ಗಿಫ್ಟ್ ನೀಡಿ ದಂಡ ಕಟ್ಟಿದ ಮೇಯರ್ ಗಂಗಾಂಬಿಕೆ!

ಸ್ವಚ್ಛ, ಸುಂದರ ಬೆಂಗಳೂರು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಬಿಬಿಎಂಪಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ತಮಗೆ....
ಬಿ.ಎಸ್.ಯಡಿಯೂರಪ್ಪ - ಗಂಗಾಂಬಿಕೆ
ಬಿ.ಎಸ್.ಯಡಿಯೂರಪ್ಪ - ಗಂಗಾಂಬಿಕೆ
ಬೆಂಗಳೂರು: ಸ್ವಚ್ಛ, ಸುಂದರ ಬೆಂಗಳೂರು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ  ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ತಮಗೆ ಅರಿವಿಲ್ಲದಂತೆ ಪ್ಲಾಸ್ಟಿಕ್ ಬಳಸಿದ ತಪ್ಪಿಗೆ ದಂಡ ಪಾವತಿಸಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.
ಮಹಾನಗರದ ಮೊದಲ ಪ್ರಜೆಯಾಗಿರುವ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ತಾವೇ ದಂಡ ಪಾವತಿಸಿ ನಗರದ ಜನತೆಗೆ ಪ್ಲಾಸ್ಟಿಕ್ ಪಿಡುಗಿನ ವಿರುದ್ಧ ಸಂದೇಶ ರವಾನಿಸಿ ಮಾದರಿಯಾಗಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರನ್ನು ಸಂಪ್ರದಾಯದಂತೆ ಭೇಟಿಯಾಗಿ ಅಭಿನಂದನೆ ಸಲ್ಲಿಸಿ ಪುಷ್ಪಗುಚ್ಛ, ಬಿದಿರಿನ ಬುಟ್ಟಿಯಲ್ಲಿ ಒಣಹಣ್ಣುಗಳನ್ನು ಕಾಣಿಕೆಯಾಗಿ ನೀಡಿ, ಶಾಲು ಹೊದಿಸಿ ಇತ್ತೀಚೆಗೆ ಸನ್ಮಾನಿಸಿದ್ದರು.
ಈ ಸಂದರ್ಭದಲ್ಲಿ ಗಂಗಾಂಬಿಕೆ ಅವರು ಮುಖ್ಯಮಂತ್ರಿಗಳಿಗೆ ನೀಡಿದ ಒಣಹಣ್ಣುಗಳ ಬಿದಿರಿನ ಬುಟ್ಟಿಗೆ ಪ್ಲಾಸ್ಟಿಕ್ ಸುತ್ತಲಾಗಿತ್ತು. 
ಈ ದೃಶ್ಯ ಮತ್ತು ಚಿತ್ರಗಳು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಕಂಡ ಪರಿಸರವಾದಿ ಒಬ್ಬರು ಪ್ಲಾಸ್ಟಿಕ್ ವಿರುದ್ಧ ದಾಳಿ ನಡೆಸಿ ದಂಡ ವಿಧಿಸುವ ನಗರದ ಮೊದಲ ಪ್ರಜೆಯೇ ಬಿಬಿಎಂಪಿ ನಿಯಮ ಮೀರಿ ಪ್ಲಾಸ್ಟಿಕ್ ಬಳಕೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದರು. ಇದು ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿತ್ತು.
ಇದರಿಂದ ಎಚ್ಚೆತ್ತುಕೊಂಡ ಗಂಗಾಂಬಿಕೆ ಅವರು ತಮಗೆ ಅರಿವಿಲ್ಲದಂತೆ ತಾವು ಮಾಡಿದ ಪ್ರಮಾದಕ್ಕಾಗಿ ಶನಿವಾರ ಬಿಬಿಎಂಪಿಗೆ 500 ರೂ. ದಂಡತೆತ್ತು ರಶೀದಿ ಪಡೆದುಕೊಂಡಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 2016 ರಿಂದಲೇ ಪ್ಲಾಸ್ಟಿಕ್ ಉತ್ಪಾದನೆ, ಬಳಕೆಯ ಮೇಲೆ ನಿಷೇಧವಿದೆ. ಆದರೂ ಬೆಂಗಳೂರು ಮಹಾನಗರದಲ್ಲಿ ಪ್ಲಾಸ್ಟಿಕ್ ಮಹಾಮಾರಿಯಾಗಿ ಪರಿವರ್ತನೆಯಾಗಿದ್ದು, ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯೇನೂ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಮೇಯರ್ ಅವರು ಬಿಬಿಎಂಪಿ ಅಧಿಕಾರಿಗಳ ಜೊತೆ ನಗರದ ವಿವಿದೆಡೆ ದಾಳಿ ಮಾಡಿ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಜೊತೆಗೆ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಬಿಬಿಎಂಪಿಯ ಎಲ್ಲಾ ವಲಯಗಳಲ್ಲಿಯೂ ಜಾಗೃತಿ ಕಾರ್ಯಕ್ರಮಗಳಲ್ಲೂ ಅವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.
ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿಗಳಿಗೆ ನೋಟಿಸ್ ನೀಡಿ ಪರವಾನಿಗೆ ರದ್ದುಪಡಿಸುವುದಾಗಿಯೂ ಅವರು ಎಚ್ಚರಿಕೆ ನೀಡುತ್ತಿದ್ದಾರೆ. ಪ್ಲಾಸ್ಟಿಕ್ ಪಿಡುಗಿನ ವಿರುದ್ಧ ನಿಂತಿರುವ  ಗಂಗಾಂಬಿಕೆ ಮಲ್ಲಿಕಾರ್ಜುನ್,  ಈ ಬಗ್ಗೆ ಯುಎನ್‍ಐ ಕನ್ನಡ ಸುದ್ದಿಸಂಸ್ಥೆ ಜೊತೆ ಮಾತನಾಡಿ, '' ತಿಳಿದೋ ತಿಳಿಯದೆಯೋ ಮುಖ್ಯಮಂತ್ರಿಯವರಿಗೆ ಪ್ಲಾಸ್ಟಿಕ್ ಹೊದಿಕೆಯಿದ್ದ ವಸ್ತು ನೀಡಿ ತಪ್ಪು ಮಾಡಿದ್ದೇನೆ.  ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುತ್ತಿರುವ ತಾವೇ ಪ್ರಮಾದವೆಸಗುವುದು ಸರಿಯಲ್ಲ. ಈ ಬಗ್ಗೆ ಜನರಿಗೆ ಸಂದೇಶ ರವಾನಿಸಲು ಹಾಗೂ ಮಾದರಿಯಾಗಲು ದಂಡ ಪಾವತಿಸಿದ್ದೇನೆ '' ಎಂದು  ಸ್ಪಷ್ಟಪಡಿಸಿದರು.
ತಾವು ಬಳಸಿದ್ದು ಡ್ರೈಪ್ರೂಟ್ಸ್ ಮೇಲಿನ ಪ್ಲಾಸ್ಟಿಕ್ ಕವರ್. ಆದರೆ ಇದು ಪ್ಲಾಸ್ಟಿಕ್ ಆದರೂ ಎರಡನೇ ಹಂತದ ಪ್ಲಾಸ್ಟಿಕ್ ಗೆ ಸೇರುತ್ತದೆ. ಇದನ್ನು ನಿಷೇಧಿಸಿಲ್ಲ. ಆದರೂ ತಾವು ಪ್ಲಾಸ್ಟಿಕ್ ಬಳಕೆ ಮಾಡಿರುವುದು ಸರಿಯಲ್ಲ ಎಂದು ಒಪ್ಪಿಕೊಂಡರು.
ಮೊದಲನೇ ಹಂತದ ಪ್ಲಾಸ್ಟಿಕ್ ಗೆ ಪರ್ಯಾಯವಿದೆ. ಆದರೆ ಎರಡನೇ ಹಂತದ ಪ್ಲಾಸ್ಟಿಕ್ ಗೆ ಇನ್ನೂ ಪರ್ಯಾಯ ಮಾರ್ಗ ಕಂಡುಕೊಂಡಿಲ್ಲ. ಆಹಾರ ವಸ್ತುಗಳ ಪ್ಯಾಕಿಂಗ್,  ಔಷಧಗಳ ಪ್ಯಾಕಿಂಗ್ ಗೆ ಪ್ಲಾಸ್ಟಿಕ್ ಬಳಸುತ್ತಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಈ ಬಗ್ಗೆ ಬಿಬಿಎಂಪಿ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ಶೀಘ್ರದಲ್ಲಿ ಎರಡನೇ ಹಂತದ ಪ್ಲಾಸ್ಟಿಕ್ ನಿಷೇಧಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com