ಧರ್ಮದ ಮಾರ್ಗ ಮೀರಿದರೆ ರೋಗಗಳನ್ನು ಆಹ್ವಾನಿಸಿಕೊಂಡಂತೆ: ವೀರೇಂದ್ರ ಹೆಗ್ಗಡೆ

ಆಸೆ ಈಡೇರಿಸಿಕೊಳ್ಳಲು ಧರ್ಮದ ಮಾರ್ಗ ಮೀರಿದರೆ ರೋಗಗಳನ್ನು ಆಹ್ವಾನಿಸಿಕೊಂಡಂತೆ. ಕಾಲ ಯಾವುದೇ ಇರಲಿ ಶರೀರವನ್ನು ಬಳಸಿಕೊಳ್ಳುವಲ್ಲಿ....
ವೀರೇಂದ್ರ ಹೆಗ್ಗಡೆ
ವೀರೇಂದ್ರ ಹೆಗ್ಗಡೆ
ಬೆಂಗಳೂರು: ಆಸೆ ಈಡೇರಿಸಿಕೊಳ್ಳಲು ಧರ್ಮದ ಮಾರ್ಗ ಮೀರಿದರೆ ರೋಗಗಳನ್ನು ಆಹ್ವಾನಿಸಿಕೊಂಡಂತೆ. ಕಾಲ ಯಾವುದೇ ಇರಲಿ ಶರೀರವನ್ನು ಬಳಸಿಕೊಳ್ಳುವಲ್ಲಿ ಸಂಸ್ಕಾರವಿರಬೇಕು ಆಧುನಿಕ ಜೀವನಶೈಲಿ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗಿದ್ದು, ನಾವು ಆರಿಸಿಕೊಳ್ಳುವ ಮಾರ್ಗಗಳು ಸರಿಯಾಗಿರಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಸಲಹೆ ನೀಡಿದ್ದಾರೆ.
ಶನಿವಾರ ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಕಾಲದಲ್ಲಿ ಮನಸ್ಸು-ದೇಹಕ್ಕೆ ವಿಶ್ರಾಂತಿ ಇಲ್ಲದೆ ದುಡಿಯುವ ಮನಃಸ್ಥಿತಿ ಆರಂಭವಾಗಿದೆ. ಧಾರ್ಮಿಕ ಆಚರಣೆಗಳು ಕಡೆಗಣಿಸಲ್ಪಡುತ್ತಿದೆ. ಅರ್ಥ ಧರ್ಮವನ್ನು ಮೀರಬಾರದು, ಅರ್ಥಕ್ಕೆ ಮಿತಿ ಇರಬೇಕು ಎಂದ ಅವರು, ಆಧುನಿಕ ಜೀವನ ಶೈಲಿಯಲ್ಲಿ ಧರ್ಮದ ಸ್ಥಾನವನ್ನು ಅರ್ಥ ಆಕ್ರಮಿಸಿದೆ ಎಂದು ವಿಶ್ಲೇಷಿಸಿದರು.
ಯಾವುದೇ ವೈದ್ಯ ಪದ್ಧತಿ, ಧಾರ್ಮಿಕ ಆಚರಣೆ ಇರಲಿ ಎಲ್ಲವೂ ನಂಬಿಕೆಯನ್ನಾಧರಿಸಿವೆ. ಧರ್ಮದ ಮೇಲಿನ ನಂಬಿಕೆ ಅನಾರೋಗ್ಯಕ್ಕೆ ಔಷಧಿಯಾಗಬಲ್ಲದು. ಎಲ್ಲ ಧರ್ಮಗಳಲ್ಲಿ ವ್ಯಕ್ತಿಗಳು ವೈಯಕ್ತಿಕ ಶುದ್ಧತೆ ಕಾಯ್ದುಕೊಳ್ಳಬೇಕು. ಧರ್ಮದ ನಿಯಮಗಳ ಬಳಕೆಗೆ ದೇಹವನ್ನು ಸಾಧನವನ್ನಾಗಿ ಬಳಸಿಕೊಂಡಾಗ ಮಾತ್ರ ದೇಹದ ಎಲ್ಲ ನಡವಳಿಕೆಗಳು ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ ಎಂದರು.
ಆರೋಗ್ಯ ಕಳೆದುಕೊಂಡವನು ಎಲ್ಲವನ್ನೂ ಕಳೆದುಕೊಂಡ ಹಾಗೆ, ಪ್ರತಿ ಔಷಧಿ ಸೇವನೆಯಿಂದ ಕಾಯಿಲೆಗಳು ತೀವ್ರತೆ ಪಡೆದುಕೊಳ್ಳುತ್ತದೆ. ಕಾಯಿಲೆಗಳ ಕುರಿತಂತೆ ಅಹಂಕಾರ, ಆಲಸ್ಯ, ತಿರಸ್ಕಾರ ಒಳ್ಳೆಯದಲ್ಲ. ವ್ಯಸನ ಮುಕ್ತ ಜೀವನ ದೇಶೀಯ ಪದ್ಧತಿ ಆಹಾರ ಹಾಗೂ ಸನ್ಮಾರ್ಗದ ನಡವಳಿಕೆಗಳು ಮನುಷ್ಯನ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಿದರು.
ನಾಡೋಜ, ಕರ್ನಾಟಕ ಹೋಮಿಯೋಪತಿ ಮಂಡಳಿ ಅಧ್ಯಕ್ಷ ಡಾ. ಬಿ.ಟಿ ರುದ್ರೇಶ್ ಮಾತನಾಡಿ, ಸಮಾಜ, ಕಾರ್ಯಕ್ಷೇತ್ರ ಹಾಗೂ ಕುಟುಂಬದೊಂದಿಗೆ ನಮ್ಮ ಸಂಬಂಧ ಉತ್ತಮವಾಗಿರದಿದ್ದರೆ ರೋಗ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಈ ಮೂರೂ ಕ್ಷೇತ್ರಗಳೊಂದಿಗೆ ಹಿತಮಿತವಾದ ಅಂತರ ಹಾಗೂ ಸಂಬಂಧ ಕಾಯ್ದುಕೊಳ್ಳಬೇಕು. ಪ್ರಸ್ತುತ 86 ರಾಷ್ಟ್ರಗಳಲ್ಲಿ ಹೋಮಿಯೋಪತಿ ವೈದ್ಯ ಪದ್ಧತಿ ಅನುಸರಿಸಲಾಗುತ್ತಿದೆ. ದೇಶದಲ್ಲಿ 240 ಹೋಮಿಯೋಪತಿ ವೈದ್ಯ ಕಾಲೇಜುಗಳಿವೆ. 30 ಲಕ್ಷ ಹೋಮಿಯೋಪತಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ 2020ರ ವ್ಯಕ್ತಿ ನಿರ್ಮಾಣ ಕಾರ್ಯ, ಆರೋಗ್ಯ ಭಾಗ್ಯ, ಹೋಮಿಯೋಪತಿ ಹೊರತುಪಡಿಸಿದರೆ ಯಶಸ್ವಿಯಾಗುವುದಿಲ್ಲ. ಎಲ್ಲ ಕಾಯಿಲೆಗಳಿಗೂ ಔಷಧಿಯೊಂದೇ ಪರಿಹಾರವಲ್ಲ. ಸಾವಿನಲ್ಲಿ ಸಮಾನತೆ ಕಾಣುವ ನಾವು ಬದುಕಿನಲ್ಲಿ ಸಮಾನತೆ ಕಾಣಬೇಕು ಹಾಗೂ ನಮ್ಮ ಜೀವನ ಕ್ರಮ ಬದಲಾಗಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ರಾಜೀವ್‍ಗಾಂಧಿ ವಿವಿ ಕುಲಪತಿ ಡಾ. ಎನ್ ಸಚ್ಚಿದಾನಂದ, ಕುಲಸಚಿವ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com