ನೆರೆ ಪರಿಹಾರ ನೇರವಾಗಿ ಸಂತ್ರಸ್ಥರಿಗೆ ತಲುಪಿಸಲು ವಿಶೇಷ ತಂಡ: ಆರ್. ಅಶೋಕ್

ಪ್ರವಾಹ ಪರಿಹಾರ ನೇರವಾಗಿ ಸಂತ್ರಸ್ತರ ಕೈ ಸೇರುವಂತೆ ನೋಡಿಕೊಳ್ಳಲು ವಿಶೇಷ ತಂಡ ರಚನೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. 
ಆರ್ ಅಶೋಕ್
ಆರ್ ಅಶೋಕ್

ಬೆಂಗಳೂರು:  ಪ್ರವಾಹ ಪರಿಹಾರ ನೇರವಾಗಿ ಸಂತ್ರಸ್ತರ ಕೈ ಸೇರುವಂತೆ ನೋಡಿಕೊಳ್ಳಲು ವಿಶೇಷ ತಂಡ ರಚನೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ನೆರೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯವರ್ತಿಗಳಿಂದಾಗಿ ಸಂತ್ರಸ್ತರ ಹಣ ಅವರ ಕೈ ಸೇರುವುದಿಲ್ಲ, ಮಧ್ಯವರ್ತಿಗಳು ಲೂಟಿ ಹೊಡಿಯುತ್ತಾರೆ ಎಂಬ ಹಿನ್ನೆಲೆಯಲ್ಲಿ ಒಂದು ವಿಶೇಷ ಸ್ಕ್ವಾಡ್ ರಚನೆ ಮಾಡುತ್ತೇವೆ, ಈ ತಂಡ ಸಂತ್ರಸ್ತರ ಸಮಸ್ಯೆ ಆಲಿಸಿ, ಅವರಿಗೆ ಸಿಗಬೇಕಾದ ಪರಿಹಾರವನ್ನು ಒದಗಿಸಲಿದೆ ಎಂದರು.

ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಾದ ಹಾನಿಯ ಬಗ್ಗೆ ಎರಡು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು, ಕೇಂದ್ರದಿಂದ ಹೆಚ್ಚಿನ ಪರಿಹಾರ ರಾಜ್ಯಕ್ಕೆ ಸಿಗುವ ವಿಶ್ವಾಸವಿದೆ ಎಂದರು.

ರಾಜ್ಯದಲ್ಲಿ ಉಂಟಾದ ನೆರೆಯಿಂದ ಸಾಕಷ್ಟು ಹಾನಿಯಾಗಿದ್ದು, ಎಷ್ಟು ನಷ್ಟವಾಗಿದೆ ಎಂಬುದರ ಬಗ್ಗೆ ಕಂದಾಯ ಇಲಾಖೆಯಿಂದ ಮಾಹಿತಿ ಪಡೆದಿದ್ದೇನೆ, ಒಟ್ಟು 32 ಸಾವಿರ ಕೋಟಿಗೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ, ಕೇಂದ್ರಕ್ಕೆ‌ ನಾವು ನೆರೆ ನಷ್ಟದ ಕುರಿತು ಮಾಹಿತಿ ನೀಡಬೇಕಿದೆ ಎಂದರು.

ಉಪ‌ಸಮಿತಿ‌ ಆದಷ್ಟು ಶೀಘ್ರವಾಗಿ ದೆಹಲಿಗೆ ತೆರಳಿಲಿದೆ. ಅತಿ ವೃಷ್ಟಿಯಿಂದ 32,000 ಕೋಟಿ ಗೂ ಹೆಚ್ಚು ಹಾನಿಯಾಗಿದೆ.118 ವರ್ಷಗಳಲ್ಲಿ ಶೇ.279ರಷ್ಟು ಮಳೆಯಾಗಿರುವುದು ಇದೇ ಮೊದಲು. 87ಜನ ಸಾವನ್ನಪ್ಪಿದ್ದರೆ. 2067 ಜಾನುವಾರು ಮೃತಪಟ್ಟಿವೆ, 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಹಾನಿ ಉಂಟಾಗಿದೆ, 7.82 ಲಕ್ಷ ಹೆಕ್ಟೇರ್ ಬೆಳೆ ಹಾನಿ ಉಂಟಾಗಿದ್ದು, 2,37,367 ಮನೆಗಳು ನಾಶವಾಗಿವೆ. 6,96,000 ಜನರನ್ನು ಸ್ಥಳಾಂತರ ಮಾಡಲಾಗಿದೆ. 4,61,000 ಜನರನ್ನು 1465 ಪರಿಹಾರ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಇಂತಹಾ ಕಷ್ಟದಲ್ಲಿ ಕೇಂದ್ರ ನೆರವಿಗೆ ಬಂದಿದೆ. ಎನ್ ಡಿ ಆರ್ ಎಫ್ 19 ತಂಡ, ಭೂ ಸೇನೆ 17ತಂಡ, ನೌಕಾಪಡೆ ಹೆಲಿಕ್ಯಾಪ್ಟರ್ ಸಹಿತ ಐದು ತಂಡ, ಕೆಎಸ್ ಆರ್ ಪಿ ಯ 30ಕ್ಕೂ ಹೆಚ್ಚು ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವು ಎಂದು ಅಶೋಕ್ ಮಾಹಿತಿ ನೀಡಿದರು.

ರಾಜ್ಯದಲ್ಲಿ ಶೇ.76.96 ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು, ಆದರೆ ಶೇ.56ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ರಾಜ್ಯದ ಜಲಾಶಯಗಳಲ್ಲಿ 825 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಇದೆ. ಆದರೆ 1834 ಟಿಎಂಸಿ ನೀರು ಹರಿದು ಬಂದಿದೆ‌. ಹೆಚ್ಚುವರಿ ನೀರನ್ನು ಎಲ್ಲ ಜಲಾಶಯಗಳಿಂದ ಹೊರ ಬಿಡಲಾಗಿದೆ. ಕಲಬುರಗಿ, ಬೀದರ್, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದರು.

ಸಂತ್ರಸ್ತರಿಗೆ 10,000 ರೂ ತಕ್ಷಣದ ಪರಿಹಾರವನ್ನು ತಲುಪಿಸಲಾಗಿದೆ. ಶೇಕಡಾ 99ರಷ್ಟು ಸಂತ್ರಸ್ತರಿಗೆ 309 ಕೋಟಿ ರೂ.ವಿತರಣೆಯಾಗಿದೆ. ಸಂತ್ರಸ್ತರ ಬ್ಯಾಂಕ್ ಖಾತೆಗೆ ಆರ್ ಟಿಜಿಎಸ್ ಮೂಲಕ ಪರಿಹಾರದ ಹಣ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದಿಂದಲೂ ಫೋನ್ ಕದ್ದಾಲಿಕೆಯಾಗಿದೆ ಎಂಬ ಜೆಡಿಎಸ್ ನಾಯಕರ ಆರೋಪದ ಬಗ್ಗೆ ಕೇಳಿದಾಗ, ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com