'ವಿಜ್ಞಾನ'ವನ್ನು ವಿಶಿಷ್ಟವಾಗಿ ಬೋಧಿಸುವ ಅಪರೂಪದ ಶಿಕ್ಷಕ; ಮಕ್ಕಳ ಪಾಲಿಗೆ ಪ್ರೀತಿಯ ಶಶಿ ಸರ್!

ಸರ್ಕಾರಿ ಕೆಲಸವೆಂದರೆ ಸಾಮಾನ್ಯವಾಗಿ ನಿಗದಿತ ಅವಧಿಯವರೆಗೆ ಕೆಲಸ ಮಾಡಿ ಮನೆಗೆ ಹೋಗುವವರೇ ಅಧಿಕ ಮಂದಿ. ಶಾಲಾ ಶಿಕ್ಷಕರು ಕೂಡ ಇದಕ್ಕೆ ಹೊರತಲ್ಲ. 
'ವಿಜ್ಞಾನ'ವನ್ನು ವಿಶಿಷ್ಟವಾಗಿ ಬೋಧಿಸುವ ಅಪರೂಪದ ಶಿಕ್ಷಕ; ಮಕ್ಕಳ ಪಾಲಿಗೆ ಪ್ರೀತಿಯ ಶಶಿ ಸರ್!

ಬೆಂಗಳೂರು: ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ ಎಂಬುದರಲ್ಲಿ ಎರಡು ಮಾತಿಲ್ಲ, ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡಿ ಅವರ ಪ್ರೀತಿಯನ್ನು ಗಳಿಸುವುದು ಸುಲಭದ ಮಾತಲ್ಲ, ಈ ಕಲೆ ಕೆಲವು ಶಿಕ್ಷಕರಲ್ಲಿ ಮಾತ್ರ ಇರುತ್ತದೆ. ಅಂತವರಲ್ಲೊಬ್ಬರು ತುಮಕೂರಿನ ಶಶಿಕುಮಾರ್ ಬಿಎಸ್.  ಇವರು ತನ್ನ ವೃತ್ತಿಯನ್ನು ಪ್ರೀತಿಸಿ ವಿದ್ಯಾರ್ಥಿಗಳ ಪಾಲಿಗೆ ಬೋಧಕ ಮಾತ್ರವಲ್ಲ ಮಾರ್ಗದರ್ಶಕ ಕೂಡ ಆಗಿದ್ದಾರೆ. 


ಶಶಿಕುಮಾರ್ ವಿಜ್ಞಾನ ಮೇಷ್ಟ್ರು, ಇವರ ಮನೆ ಇರುವುದು ತುಮಕೂರಿನಲ್ಲಿ, ಅಲ್ಲಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲೆಕ್ಯಾತನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಗೆ ನಿತ್ಯ 60 ಕಿಲೋ ಮೀಟರ್ ಪ್ರಯಾಣಿಸಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಾರೆ.


ಇದರಲ್ಲೇನಾಪ್ಪಾ ವಿಶೇಷ ಎಂದುಕೊಂಡಿರಾ, ಅವರ ಬೋಧನೆ ವಿಧಾನ ವಿಶಿಷ್ಟ, ಜೊತೆಗೆ ಹಲವು ಬೇರೆ ಉಪಯುಕ್ತ ಕೆಲಸಗಳನ್ನು ಕೂಡ ಮಾಡುತ್ತಾರೆ. ಅವರ ಬೋಧನೆಯ ವಿಶೇಷವೆಂದರೆ ಮಕ್ಕಳಿಗೆ ನೋಟ್ಸ್ ಕೊಡುವುದಿಲ್ಲ. ಬದಲಿಗೆ ಮಕ್ಕಳು ಪ್ರಯೋಗಾಲಯದಲ್ಲಿ ತಾವು ಏನು ಕಲಿತಿದ್ದಾರೋ, ಎಷ್ಟು ಅರ್ಥ ಮಾಡಿಕೊಂಡರೋ ಅದನ್ನು ತಾವೇ ಬರೆಯಬೇಕು. ತಮ್ಮದೇ ನೋಟ್ಸ್ ನ್ನು ತಾವೇ ತಯಾರಿಸಬೇಕು, ಇದರಿಂದ ಮಕ್ಕಳಿಗೆ ಪರೀಕ್ಷೆಯಲ್ಲಿ ಸಹಾಯ ಆಗುತ್ತದೆ ಎಂಬ ವಾದ ಶಶಿಕುಮಾರ್ ಅವರದ್ದು. 


ತರಗತಿಯಲ್ಲಿ ಮಕ್ಕಳಿಗೆ ಇಂದಿನ ತಾಂತ್ರಿಕ ಸಲಕರಣೆಗಳನ್ನು ಬಳಸಿಕೊಂಡು ನಿಗದಿತ ವಿಷಯದ ಬಗ್ಗೆ ಮಾತನಾಡುವಂತೆ ಹೇಳುತ್ತಾರೆ. ಕೇವಲ ಪಠ್ಯಪುಸ್ತಕದಿಂದ ಮಕ್ಕಳಿಗೆ ಏನೂ ಪ್ರಯೋಜನವಾಗುವುದಿಲ್ಲ. ಅದರ ಜೊತೆ ಪಠ್ಯೇತರ ವಿಷಯಗಳು, ಅವರು ಪಾಠದಿಂದ ಜೀವನಕ್ಕೆ ಬೇಕಾದ್ದನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎನ್ನುತ್ತಾರೆ ಶಶಿಕುಮಾರ್.


ಶಾಲಾ ಅವಧಿ ಮುಗಿದ ನಂತರ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳುತ್ತಾರೆ. 16 ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಮಾಡುತ್ತಾರೆ. ಸಂಜೆ 6.30ರವರೆಗೆ ತರಗತಿ ಇರುವುದರಿಂದ ದೂರದೂರುಗಳ ಮಕ್ಕಳನ್ನು ಅವರ ಮನೆಗೆ ತಾವೇ ಬಿಟ್ಟುಬರುವ ಅಥವಾ ವಾಹನಕ್ಕೆ ಹಣ ನೀಡಿ ಕಳುಹಿಸುವ ವ್ಯವಸ್ಥೆ ಮಾಡುತ್ತಾರೆ.  


ವಿಜ್ಞಾನಕ್ಕೆ ಸಂಬಂಧಪಟ್ಟ ರಂಗೋಲಿ ಸ್ಪರ್ಧೆಗಳನ್ನು ಶಶಿಕುಮಾರ್ ಮಕ್ಕಳಿಗೆ ಆಯೋಜಿಸುತ್ತಾರೆ. ''ವಿದ್ಯಾರ್ಥಿಗಳು ಕಿಡ್ನಿ, ಹೃದಯ, ಶ್ವಾಸಕೋಶವನ್ನು ರಂಗೋಲಿ ಮೂಲಕ ರಚಿಸುವಂತೆ ಪ್ರೇರೇಪಿಸುತ್ತೇನೆ, ಇದರಿಂದ ಮಕ್ಕಳ ಸೃಜನಾತ್ಮಕತೆ ಹೊರಬರುತ್ತದೆ. ಪರಾಸರಣ(ಆಸ್ಮೋಸಿಸ್) ಬಗ್ಗೆ ಮಕ್ಕಳಿಗೆ ಹೇಳಿಕೊಡುವಾಗ ಆಲೂಗಡ್ಡೆ ಮತ್ತು ಸಕ್ಕರೆಯಿಂದ ಮಿಶ್ರಣಗೊಂಡ ನೀರನ್ನು ಬಳಸಿ ತೋರಿಸಿ ವಿವರಿಸುತ್ತೇನೆ. ವಿಡಿಯೊ ಮಾಡಿ ಆ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚು ಮನದಟ್ಟಾಗುವಂತೆ ಹೇಳಿಕೊಡುತ್ತೇನೆ,ಇದರಿಂದ ಅವರಿಗೆ ಆಸಕ್ತಿ ಕೂಡ ಹೆಚ್ಚುತ್ತದೆ'' ಎನ್ನುತ್ತಾರೆ ಶಶಿಕುಮಾರ್.
ಇನ್ನು ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿಯಾದ ಪ್ಲಾಸ್ಟಿಕ್ ಬಳಕೆ ನಿಷೇಧ, ನೀರಿನ ನಿರ್ವಹಣೆ ಮೊದಲಾದವುಗಳ ಬಗ್ಗೆ ಅರಿವು ಮೂಡಿಸುತ್ತಾರೆ. 


ಮೂಲತಃ ತುಮಕೂರಿನವರಾದ ಶಶಿಕುಮಾರ್ ಎಂ.ಎಸ್ಸಿ, ಎಂ.ಫಿಲ್ ಮತ್ತು ಬಿಎಡ್ ಪದವೀಧರ. ಹಿಂದೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಇತರ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡಿದ್ದರು. ಎಂಟು ವರ್ಷಗಳ ಹಿಂದೆ ಎಲೆಕ್ಯಾತನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ಸೇರಿದ್ದರು. ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಿದ ಕೀರ್ತಿ ಕೂಡ ಇವರಿಗೇ ಸಲ್ಲುತ್ತದೆ. 


ಶಶಿಕುಮಾರ್ ಅವರು ಈ ಶಾಲೆಗೆ ಸೇರಿದಲ್ಲಿಂದ ಶೇಕಡಾ 100ಕ್ಕೆ ಹತ್ತಿರ ಫಲಿತಾಂಶ ಬರುತ್ತಿದೆ. ವಿಜ್ಞಾನದಲ್ಲಿ ಮಕ್ಕಳು 100ರಲ್ಲಿ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದಾರೆ. ಈ ಮಕ್ಕಳೆಲ್ಲ ಆರ್ಥಿಕವಾಗಿ ದುರ್ಬಲ ಕುಟುಂಬದಿಂದ ಬಂದವರು. ಮಕ್ಕಳಿಗೆಲ್ಲಾ ಅಚ್ಚುಮೆಚ್ಚಿನ ಶಶಿ ಸರ್ ಆಗಿದ್ದಾರೆ.


ಮೈಸೂರಿನಲ್ಲಿ ಎಮೆರ್ಜೆನ್ಸಿ ಮೆಡಿಸಿನ್ ನಲ್ಲಿ ಎಂಡಿ ಮಾಡುತ್ತಿರುವ ಇವರ ವಿದ್ಯಾರ್ಥಿ ಡಾ ನರೇಶಾಚಾರಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಶಶಿಕುಮಾರ್ ಅವರ ಶಿಷ್ಯರಾಗಿದ್ದರು. ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿಯಲು ನನಗೆ ಶಶಿ ಸರ್ ಅವರೇ ಕಾರಣ. ಅವರು ವಿಜ್ಞಾನ ವಿಷಯ ಹೇಳಿಕೊಡುವ ರೀತಿಯೇ ವಿಶಿಷ್ಟ ಎನ್ನುತ್ತಾರೆ. 


ಇಷ್ಟು ಕೆಲಸ, ಸಾಧನೆ ಮಾಡಿರುವ ಶಶಿಕುಮಾರ್ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನೀಡುವ ಅತ್ಯುತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಾಡಿದ್ದು ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಂದು ಉಳಿದ 45 ಶಿಕ್ಷಕರೊಂದಿಗೆ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಅದಕ್ಕೆ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com