ಕಲಬುರಗಿ ವಿಭಾಗದ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ, 15 ಲಕ್ಷ ರೂಪಾಯಿ ಅನುದಾನ ನಿಗದಿ

ವಿದ್ಯಾರ್ಥಿ ಜೀವನದಲ್ಲಿ ಎಸ್ಎಸ್ಎಲ್ಸಿ ಮಹತ್ವದ ಘಟ್ಟ. ಫಲಿತಾಂಶ ಕೇವಲ ವಿದ್ಯಾರ್ಥಿ ಬದುಕಿಗೆ ಮಾತ್ರವಲ್ಲ, ಸರಕಾರಿ ಪ್ರೌಢಶಾಲೆಗಳಿಗೂ ಟರ್ನಿಂಗ್ ಪಾಯಿಂಟ್ ಎನ್ನುವ ಕಾಲಘಟ್ಟವಿದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಪ್ಪಳ: ವಿದ್ಯಾರ್ಥಿ ಜೀವನದಲ್ಲಿ ಎಸ್ಎಸ್ಎಲ್ಸಿ ಮಹತ್ವದ ಘಟ್ಟ. ಫಲಿತಾಂಶ ಕೇವಲ ವಿದ್ಯಾರ್ಥಿ ಬದುಕಿಗೆ ಮಾತ್ರವಲ್ಲ, ಸರಕಾರಿ ಪ್ರೌಢಶಾಲೆಗಳಿಗೂ ಟರ್ನಿಂಗ್ ಪಾಯಿಂಟ್ ಎನ್ನುವ ಕಾಲಘಟ್ಟವಿದು. ಹಾಗಾಗಿ ಕಳೆದ ಸುಮಾರು 5 ವರ್ಷಗಳಿಂದ ಕಳಪೆ ಫಲಿತಾಂಶ ದಾಖಲಿಸಿರುವ ಶಾಲೆಗಳನ್ನ ಗುರುತಿಸಿ ಅವುಗಳ ಪುನಶ್ಚೇತನಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. 
ಕಲಬುರಗಿ ವಿಭಾಗದ ಜಿಲ್ಲೆಗಳ ಒಟ್ಟು 521 ಪ್ರೌಢಶಾಲೆಗಳ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಈಗಿನಿಂದಲೇ ಸರ್ಕಸ್ ಶುರುವಾಗಿದೆ.

ಕಲಬುರಗಿ ವಿಭಾಗದ 6 ಜಿಲ್ಲೆಗಳ 521 ಸರಕಾರಿ ಪ್ರೌಢಶಾಲೆಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಶಾಲಾ ಅವಧಿಗಿಂತ ಒಂದು ಗಂಟೆ ಮುಂಚೆ ಮತ್ತು ಶಾಲಾ ಅವಧಿ ಮುಗಿದ ನಂತರ ಒಂದು ಗಂಟೆ ಒಟ್ಟು 2 ಗಂಟೆಗಳ ಅವಧಿಗೆ ಮಕ್ಕಳ ತೀವ್ರ ನಿಗಾ ಕಲಿಕಾ ತರಗತಿಗಳನ್ನು ಆರಂಭಿಸುವಂತೆ 2019ರ ಅಕ್ಟೋಬರ್ 16ರಂದೇ ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಡಿ.ಷಣ್ಮುಖ ಅವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಿಗೆ, ಕಲಬುರಗಿ ವಿಭಾಗದ ಎಲ್ಲ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜ್ಞಾಪನಾ ಪತ್ರ ಕಳಿಸಿದ್ದಾರೆ.

ತೀವ್ರ ನಿಗಾ ಕಲಿಕೆಯ ಉದ್ದೇಶವೇನು?
ಅಪರ ಆಯುಕ್ತರು ಕಳಿಸಿರುವ ಜ್ಞಾಪನಾ ಪತ್ರದಲ್ಲಿ ಶಾಲಾ ಅವಧಿ ಹೊರತುಪಡಿಸಿ ತೀವ್ರ ನಿಗಾ ಕಲಿಕಾ ತರಗತಿಗಳನ್ನ ನಡೆಸುವಂತೆ ಸೂಚಿಸಿದ್ದು, ಜೊತೆಗೆ ಉದ್ದೇಶಗಳನ್ನು ತಿಳಿಸಿದ್ದಾರೆ. 

ಸಂಪೂರ್ಣ ಪಠ್ಯಕ್ರಮವನ್ನು ಪುನಃ ಇನ್ನೊಂದು ಬಾರಿ ತೀವ್ರವಾಗಿ ಬೋಧನೆ ಮಾಡಿ ಮುಗಿಸುವುದು. ಪಠ್ಯಕ್ರಮದಲ್ಲಿರುವ ಕಠಿಣ ಅಂಶಗಳಿಗೆ ವಿಶೇಷ ಒತ್ತು ನೀಡಿ ಅವುಗಳಿಗೆ ಪರಿಹಾರ ನೀಡುವುದು. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಿ ಕಲಿಕಾ ದೃಢೀಕರಣಗೊಳಿಸುವುದು. ಕಲಿಕೆಯಲ್ಲಿ ಪರಿಪೂರ್ಣತೆ ಸಾಧಿಸುವಲ್ಲಿ ನೆರವಾಗುವುದು. ಮಕ್ಕಳಲ್ಲಿರುವ ಕಲಿಕಾ ಭಯ, ಪರೀಕ್ಷಾ ಭಯ ಹಾಗೂ ಆತಂಕಗಳನ್ನು ದೂರ ಮಾಡುವುದು.

ಇದಕ್ಕಾಗಿ 2019ರ ನವೆಂಬರ್ ನಿಂದ ಫೆಬ್ರವರಿ 2020ರವರೆಗೆ ನಾಲ್ಕು ತಿಂಗಳ ಕಾಲ ಬೆಳಗ್ಗೆ 8-45ರಿಂದ 9-45ರವರೆಗೆ ಹಾಗೂ ಸಂಜೆ 4-45 ರಿಂದ 5-45ರವರೆಗೆ ತೀವ್ರ ನಿಗಾ ಕಲಿಕಾ ತರಗತಿಗಳನ್ನು ನಡೆಸಬೇಕು. ಜೊತೆಗೆ ಮಾರ್ಚ್ ನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭಗೊಂಡು ಮುಕ್ತಾಯ ಆಗುವವರೆಗೆ ನಿರಂತರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಕೆಲಸವನ್ನು ಮಾಡಬೇಕು. ತೀವ್ರ ನಿಗಾ ಕಲಿಕಾ ತರಗತಿಗಳಿಗಾಗಿ ಕಳೆದ 5 ವರ್ಷಗಳಲ್ಲಿ ಸರಾಸರಿ ಶೇಕಡಾ 75ಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅವುಗಳಲ್ಲಿ ಕೊಪ್ಪಳ ಜಿಲ್ಲೆಯ 50 ಶಾಲೆಗಳನ್ನು ಗುರುತಿಸಲಾಗಿದೆ ಎಂದು ಡಾ.ಷಣ್ಮುಖ ತಿಳಿಸಿದ್ದಾರೆ.

15 ಲಕ್ಷ ಅನುದಾನ ನಿಗದಿ
ರಾಜ್ಯದ ಸರಾಸರಿ ಫಲಿತಾಂಶಕ್ಕಿಂತ ಹೆಚ್ಚುವರಿ ಫಲಿತಾಂಶ ಪಡೆದ ಶಾಲೆಗಳಿಗೆ ಹೆಚ್ಚುವರಿ ಫಲಿತಾಂಶಕ್ಕೆ ಒಟ್ಟು 15 ಲಕ್ಷ ರೂಪಾಯಿ ಅನುದಾನ ನಿಗದಿಪಡಿಸಲಾಗಿದ್ದು, ಈ ಮೊತ್ತದಲ್ಲಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳನ್ನು ಬಲಪಡಿಸಲು ಕಲಿಕಾ ಉಪಕರಣಗಳ ಖರೀದಿಗಾಗಿ, ಕಲಿಕೆಗೆ ಪ್ರೋತ್ಸಾಹ ನೀಡುವ ಉಪಕರಣಗಳ ಖರೀದಿಗಾಗಿ ಹೆಚ್ಚುವರಿ ಫಲಿತಾಂಶ ಪಡೆದ ಶಾಲೆಗಳಿಗೆ ಸಮನಾಗಿ ಅನುದನ ಬಿಡುಗಡೆ ಮಾಡಲಾಗುವುದು ಎಂದು ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.

ಗಣಿತ, ವಿಜ್ಞಾನ ಮತ್ತು ಆಂಗ್ಲಭಾಷಾ ಶಿಕ್ಷಕರು ತೀವ್ರ ನಿಗಾ ಕಲಿಕಾ ತರಗತಿಗಳನ್ನು ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಕಠಿಣ ವಿಷಯಗಳೆಂದರೆ ಇವೇ ಮೂರು ವಿಷಯಗಳು. ಇವುಗಳ ಪುನರಾವರ್ತನಾ ಬೋಧನಾ ಕಾರ್ಯಕ್ರಮದ ಮೇಲುಸ್ತುವಾರಿ ಆಯಾ ಶಾಲೆಯ ಮುಖ್ಯ ಶಿಕ್ಷಕರದ್ದಾಗಿರುತ್ತದೆ. ಇದಕ್ಕಾಗಿ ಆಯಾ ಶಾಲೆಯ ಮುಖ್ಯ ಶಿಕ್ಷಕರು ಹಾಗೂ 3 ವಿಷಯಗಳ ಶಿಕ್ಷಕರಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಹೆಚ್ಚುವರಿ ಸಂಭಾವನೆ ನೀಡಲಾಗುವುದು ಎಂದು ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ತಿಳಿಸಿದ್ದಾರೆ.

ಪಾಲಕರ-ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ
ಎಸ್ಎಸ್ಎಲ್ಸಿ ಎಂದರೆ ಸಾಕು ವಿದ್ಯಾರ್ಥಿಗಳಲ್ಲಿ, ಪಾಲಕರಲ್ಲಿ ದುಗುಡ ಇರುತ್ತದೆ. ಅದರಲ್ಲು ಪರೀಕ್ಷಾ ಸಮಯ ಹತ್ತಿರವಾಗುತ್ತಿದ್ದಂತೆ ಮಕ್ಕಳ ಫಲಿತಾಂಶ ಉತ್ತಮವಾಗಲೆಂದು ಸಾಕಷ್ಟು ಹಣ ಖರ್ಚು ಮಾಡಿ ಮಕ್ಕಳನ್ನು ಟ್ಯೂಷನ್ಗೆ ಕಳಿಸುವ ಪಾಲಕರ ಸಂಖ್ಯೆ ಹೆಚ್ಚಿದೆ. ಪಾಲಕರಿಗೆ ಆರ್ಥಿಕ ಹೊರೆ ತಪ್ಪಿಸಬೇಕು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಹಾಗೂ ಸರಕಾರಿ ಪ್ರೌಢಶಾಲೆಗಳ ಫಲಿತಾಂಶ ಖಾಸಗಿ ಶಾಲೆಗಳ ಫಲಿತಾಂಶಕ್ಕಿಂತಲೂ ಉತ್ತಮವಾಗಬೇಕು ಎಂಬ ಹಿತದೃಷ್ಟಿ ಈ ಕ್ರಮದ ಹಿಂದಿದೆ.
-ಬಸವರಾಜಸ್ವಾಮಿ, ಡಿಡಿಪಿಐ, ಕೊಪ್ಪಳ.

-ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com