ಹೊಸ ವರ್ಷಾಚರಣೆಗೆ ಚಾಮುಂಡಿಬೆಟ್ಟಕ್ಕೆ ಪ್ರವೇಶ ಇಲ್ಲ: ಪೊಲೀಸ್ ಆಯುಕ್ತರ ಎಚ್ಚರಿಕೆ

ಹೊಸ ವರ್ಷಾಚರಣೆಗೆ ಚಾಮುಂಡಿ ಬೆಟ್ಟಕ್ಕೆ ತೆರಳಬೇಕು ಎಂದು ಕೊಂಡಿದ್ದವರಿಗೆ ಮೈಸೂರು ಪೊಲೀಸ್ ಆಯುಕ್ತರು ಶಾಕ್ ನೀಡಿದ್ದು, ಚಾಮುಂಡಿ ಬೆಟ್ಟದಲ್ಲಿ ವರ್ಷಾಚರಣೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಹೊಸ ವರ್ಷಾಚರಣೆಗೆ ಚಾಮುಂಡಿ ಬೆಟ್ಟಕ್ಕೆ ತೆರಳಬೇಕು ಎಂದು ಕೊಂಡಿದ್ದವರಿಗೆ ಮೈಸೂರು ಪೊಲೀಸ್ ಆಯುಕ್ತರು ಶಾಕ್ ನೀಡಿದ್ದು, ಚಾಮುಂಡಿ ಬೆಟ್ಟದಲ್ಲಿ ವರ್ಷಾಚರಣೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ಅವರು, 'ಹೊಸ ವರ್ಷಾಚರಣೆಯ ಸಂಭ್ರಮಾಚರಣೆಯನ್ನು ಚಾಮುಂಡಿಬೆಟ್ಟದಲ್ಲಿ ನಿಷೇಧಿಸಲಾಗಿದೆ. ಡಿಸೆಂಬರ್ 31ರ ಸಂಜೆ 7 ರಿಂದ ಜನವರಿ 1ರ ಬೆಳಿಗ್ಗೆ 6 ಗಂಟೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ ಇಲ್ಲಿನ ಚಾಮುಂಡಿಬೆಟ್ಟದ ಸುತ್ತಮುತ್ತಲ ಪ್ರವಾಸಿ ತಾಣಗಳಾದ ಉತ್ತನಹಳ್ಳಿ ಗೇಟ್, ದೈವಿವನ ಗೇಟ್, ಲಲಿತಮಹಲ್ ಗೇಟ್ ಹಾಗೂ ಬೆಟ್ಟದ ಪಾದದ ಬಳಿ ಇರುವ ಗೇಟ್‌ ಗಳಲ್ಲಿ ಈ ಅವಧಿಯಲ್ಲಿ ಪ್ರವೇಶ ಇರುವುದಿಲ್ಲ. ತಾವರೆಕಟ್ಟೆ ಗೇಟ್‌ ನಲ್ಲಿ ಚಾಮುಂಡಿಬೆಟ್ಟದ ನಿವಾಸಿಗಳಿಗಷ್ಟೇ ಪ್ರವೇಶಾವಕಾಶ ಇರಲಿದೆ. ಬೆಟ್ಟ ಹಾಗೂ ಬೆಟ್ಟದ ತಪ್ಪಲಿನಲ್ಲಿ ಸಂಭ್ರಮಾಚರಣೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಂಭ್ರಮಾಚರಣೆ ನೆಪದಲ್ಲಿ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸುವವರು, ರಸ್ತೆಯಲ್ಲಿ ಮದ್ಯಪಾನ ಮಾಡುವುದು ಮತ್ತು ಬಾಟಲ್ ತೂರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಂಭ್ರಮಾಚರಣೆಗೆ ಧ್ವನಿವರ್ಧಕ ಬಳಸಲು ಅನುಮತಿ ಅಗತ್ಯ, ಧ್ವನಿವರ್ಧಕಗಳ ಶಬ್ದವು ಕಾನೂನಿನಡಿಯಲ್ಲಿ ನಿರ್ದಿಷ್ಟಪಡಿಸಿರುವ ಡೆಸಿಬಲ್‌ ಗಳನ್ನು ಮೀರಬಾರದು. ಖಾಸಗಿ ಸ್ಥಳಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡುವವರು ಕಡ್ಡಾಯವಾಗಿ ಪೊಲೀಸರಿಂದ ಅನುಮತಿ ಪಡೆದಿರಬೇಕು. ನಿಯಮ ಮೀರಿದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ. 

ಇನ್ನು ಮೈಸೂರು ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂ ಸ್ಟೇ, ಅಪಾರ್ಟ್‍ಮೆಂಟ್, ಶಾಪಿಂಗ್ ಮಾಲ್ ಮತ್ತು ಸಂಘ ಸಂಸ್ಥೆಗಳು ಸಂಭ್ರಮಾಚರಣೆಯನ್ನು ಮಧ್ಯರಾತ್ರಿ 1 ಗಂಟೆಯೊಳಗೆ ಮಾತ್ರ ಮಾಡಬೇಕು. ಸಂಭ್ರಮಾಚರಣೆಗೆ ಬೀದಿಗೆ ಬರಬಾರದು. ಮದ್ಯಪಾನ ಸರಬರಾಜು ಮಾಡುವ ಹೋಟೆಲ್‌ಗಳು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯದಲ್ಲಿ ಮದ್ಯ ವ್ಯಾಪಾರ ಮಾಡಲು ಅಬಕಾರಿ ಮತ್ತು ಪೊಲೀಸ್‌ ಇಲಾಖೆಯಿಂದ ಲಿಖಿತವಾದ ಅನುಮತಿ ಪಡೆದುಕೊಳ್ಳಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com