ಗದಗ ಜಿಲ್ಲೆಯ ಈ ಗ್ರಾಮಸ್ಥರು ಸಿಡುಬು ಕಾಯಿಲೆಗೆ ಮೊರೆ ಹೋಗುವುದು ದೇವಿಯ ಬಳಿಗೆ!

ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಗದಗ ಜಿಲ್ಲೆಯ ಗ್ರಾಮಸ್ಥರು ನಂಬಿಕೊಂಡು...
ಗದಗ ಜಿಲ್ಲೆಯೊಂದರ ದೇವಸ್ಥಾನ
ಗದಗ ಜಿಲ್ಲೆಯೊಂದರ ದೇವಸ್ಥಾನ

ಕೌಜಗೇರಿ(ಗದಗ ಜಿಲ್ಲೆ): ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಗದಗ ಜಿಲ್ಲೆಯ ಗ್ರಾಮಸ್ಥರು ನಂಬಿಕೊಂಡು ಬಂದಿದ್ದಾರೆ. ತಮ್ಮ ಮಕ್ಕಳಿಗೆ ಸಿಡುಬು(chicken pox) ಆದಾಗ ವೈದ್ಯರಲ್ಲಿಗೆ ಕರೆದುಕೊಂಡು ಹೋಗುವ ಬದಲು ಅಥವಾ ಮನೆಯಲ್ಲಿಯೇ ಔಷಧಿ ಮಾಡುವ ಬದಲು ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ.

ಗದಗ ಜಿಲ್ಲೆಯಿಂದ 45 ಕಿಲೋ ಮೀಟರ್ ದೂರದಲ್ಲಿ ರೋಣ ತಾಲ್ಲೂಕಿನ ಕೌಜಗೇರಿ ಗ್ರಾಮದಲ್ಲಿ ಸುಮಾರು 5 ಸಾವಿರ ಜನರಿದ್ದಾರೆ. ಇಲ್ಲಿನ ಜನರು ಸಿಡುಬು ಬಂದಾಗ ಔಷಧಿ ಮಾಡುವ ಬದಲು ದೇವಿಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ.

ಇಲ್ಲಿ ಮಕ್ಕಳಿಗೆ ಸಿಡುಬು ಬಂದರೆ ಶಾಲೆಗೆ ಹೋಗುವುದಿಲ್ಲ.ದೇವಿಗೆ ಸಿಟ್ಟು ಬಂದು ಗ್ರಾಮಕ್ಕೆ ಸಿಡುಬು ಕಾಲಿಟ್ಟಿದೆ ಎಂದು ಗ್ರಾಮಸ್ಥರು ನಂಬುತ್ತಾರೆ. ಈ ಗ್ರಾಮದಲ್ಲಿ ದುರ್ಗವ್ವ ಮತ್ತು ದ್ಯಾಮವ್ವ ಎಂಬ ಎರಡು ದೇವಿಯ ದೇವಸ್ಥಾನಗಳಿವೆ. ಇಲ್ಲಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ.

ಅಷ್ಟಕ್ಕೂ ದೇವಿಗೆ ಸಲ್ಲಿಸುವ ಪ್ರಾರ್ಥನೆ ಹೇಗೆ ಅಂತಿರಾ? ಅದು 5 ದಿನಗಳ ಕಾಲದ್ದು. ಮಕ್ಕಳು ಮನೆಮನೆಗೆ ಹೋಗಿ ಜೋಳವನ್ನು ಭಿಕ್ಷೆ ಬೇಡಿ ತರಬೇಕು. 5ನೇ ದಿನ ಜೋಳವನ್ನು ರುಬ್ಬಿ ಸಿಡುಬು ಆದ ಮಕ್ಕಳ ಮೈಗೆ ಹಚ್ಚಲಾಗುತ್ತದೆ. ನಂತರ ಮಕ್ಕಳನ್ನು ಬೇವಿನ ಸೊಪ್ಪನ್ನು ಸುತ್ತಿ ಮಲಗಿಸಲಾಗುತ್ತದೆ. ಹಸುವಿನ ಸಗಣಿಯನ್ನು ಒಣಗಿಸಿ ಅದನ್ನು ಸುಟ್ಟು ಅದರಿಂದ ಬರುವ ಹೊಗೆಯನ್ನು ಮಕ್ಕಳ ದೇಹಪೂರ್ತಿ ತಾಗಿಸಲಾಗುತ್ತದೆ. ಈ ಎಲ್ಲಾ ವಿಧಾನಗಳು ಮುಗಿದ ನಂತರ ಮಕ್ಕಳನ್ನು ದೇವಸ್ಥಾನದಲ್ಲಿ ದೇವಿಯ ಮುಂದೆ ಕುಳ್ಳಿರಿಸಿ ದೀಪ ಹಚ್ಚುತ್ತಾರೆ.

ಗ್ರಾಮಸ್ಥರ ಈ ಸಾಂಪ್ರದಾಯಿಕ ಚಿಕಿತ್ಸಾ ವಿಧಾನ ಜಿಲ್ಲಾ ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಇದುವರೆಗೆ ಗ್ರಾಮದಲ್ಲಿ 42 ಸಿಡುಬು ಪ್ರಕರಣಗಳು ದಾಖಲಾಗಿವೆ. ಸಿಡುಬು ಬಂದಾಗ ಗ್ರಾಮಸ್ಥರು ವೈದ್ಯರಲ್ಲಿಗೆ ಹೋಗಲು ಸುತಾರಂ ಒಪ್ಪುತ್ತಿಲ್ಲ. ತಮ್ಮ ಸಾಂಪ್ರದಾಯಿಕ ಮದ್ದೇ ಸಾಕೆಂದು ಹೇಳುತ್ತಾರೆ.

ಜಿಲ್ಲಾ, ತಾಲ್ಲೂಕು ಆರೋಗ್ಯಾಧಿಕಾರಿಗಳು ಗ್ರಾಮಸ್ಥರನ್ನು ಮನವೊಲಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com