ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮಾಡಿದ್ದಕ್ಕೆ ಪಶ್ಚಾತಾಪವಿದೆ: ಸಿಎಂ ಕುಮಾರಸ್ವಾಮಿ

ರಾಜಕೀಯ ವಿಚಾರಕ್ಕೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಹೆಸರನ್ನು ಎಳೆದು ತಂದು ನಾವು ಅಪಚಾರ ಮಾಡಿದ್ದೇವೆ. ಧರ್ಮಸ್ಥಳದಲ್ಲಿ...
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ರಾಜಕೀಯ ವಿಚಾರಕ್ಕೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಹೆಸರನ್ನು ಎಳೆದು ತಂದು ನಾವು ಅಪಚಾರ ಮಾಡಿದ್ದೇವೆ. ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮಾಡಿದ್ದಕ್ಕೆ ಪಶ್ಚಾತಾಪವಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶನಿವಾರ ಹೇಳಿದ್ದಾರೆ.
ಇಂದು ನಾಡಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ರ್ಮಸ್ಥಳದ ಮಂಜುನಾಥೇಶ್ವರ ಅತ್ಯಂತ ಪವಿತ್ರವಾದ ದೇವರಾಗಿದ್ದು, ರಾಜಕೀಯ ಕಾರಣಗಳಿಗಾಗಿ 12 ವರ್ಷಗಳ ಹಿಂದೆ ಇಲ್ಲಿ ಆಣೆ, ಪ್ರಮಾಣ ಮಾಡಲಾಗಿತ್ತು. ಈ ಬಗ್ಗೆ ತಮಗೆ ಪಶ್ಚಾತಾಪವಿದೆ ಎಂದರು. 
ಸಮಸ್ತ ಕನ್ನಡಿಗರಿಗೆ ಧರ್ಮಸ್ಥಳದ ದೈವಶಕ್ತಿಯಲ್ಲಿ, ಧರ್ಮಸ್ಥಳದ ನ್ಯಾಯಪೀಠದಲ್ಲಿ ಅನನ್ಯವಾದ ನಂಬಿಕೆ ಇದೆ. ತಮ್ಮ ಧಾರ್ಮಿಕ ನಂಬಿಕೆ, ದೈನಂದಿನ ಬದುಕು ಮತ್ತು ಜೀವನ ಮಾರ್ಗಗಳನ್ನು ಧರ್ಮಸ್ಥಳದ ಮಂಜುನಾಥನ ಸುತ್ತಲೇ ಹೆಣೆದುಕೊಂಡು ಬಂದವರು ನಾವು. ನಮಗೆ ಧರ್ಮಸ್ಥಳ ಎಂಬುದೊಂದು ಕೇವಲ ಸ್ಥಳದ ಹೆಸರಲ್ಲ. ಅದೊಂದು ಪರಂಪರಾಗತ ದೈವೀಕ ಸಂಕೇತ ಮತ್ತು ವಿಶ್ವಾಸ ಎಂದರು. 
ಮಂಜುನಾಥನನ್ನು ಧರ್ಮಸ್ಥಳದ ನ್ಯಾಯಪೀಠವನ್ನು ಮುಂದಿಟ್ಟುಕೊಂಡೇ ಬಾಳು ಕಟ್ಟಿಕೊಂಡವರು ನಾವು. ನಮ್ಮ ಪ್ರತಿ ಆಣೆ, ಸಂಕಲ್ಪ, ಪ್ರಾರ್ಥನೆಯ ಹಿಂದಿರುವ ಪ್ರೇರಣೆಯೇ ಮಂಜುನಾಥ ಮತ್ತು ಧರ್ಮಸ್ಥಳ ನ್ಯಾಯಪೀಠದ ಬೆನ್ನಿಗಿರುವ ಜಾತ್ಯಾತೀತ ಮತ್ತು ಕಾಲಾತೀತ ನಿರಪೇಕ್ಷ ಸತ್ಯನಿಷ್ಠೆ ಎಂದರು. 
ಇಲ್ಲಿ ಅಪೂರ್ವ ಸಂಕಲ್ಪ ಶಕ್ತಿ ಮತ್ತು ಅನನ್ಯ ಧಾರ್ಮಿಕ ಪರಂಪರೆಯ ಮೂರ್ತ ರೂಪವಾಗಿ ಬಾಹುಬಲಿ ಸ್ವಾಮಿ ಇಲ್ಲಿ ರಾರಾಜಿಸಿದ್ದಾರೆ. ವಿಪ್ಲವಪೂರಿತ ಸಮಾಜಕ್ಕೆ ಶಾಂತಿ - ಸಮಚಿತ್ತಗಳೇ   ದಿವ್ಯ ಔಷಧಿಗಳು ಎಂಬ ಸಂದೇಶವನ್ನು ಈ ಮೂರ್ತಿ ಸಾರುತ್ತಿದೆ. ಕನ್ನಡ ಸಂಸ್ಕಂತಿ ಮತ್ತು ಜೈನಧರ್ಮದ ಸಂಬಂಧ ಹಾಲು ಜೇನಿನಂತಹುದು. ಕನ್ನಡದ ಮೊದಲ ಕೃತಿ, ಕವಿರಾಜ ಮಾರ್ಗದ ಕರ್ತೃವಾದ ವಿಜಯನಿಂದ ಮೊದಲ್ಗೊಂಡು ಕನ್ನಡ ಸಾಹಿತ್ಯದ ರತ್ನತ್ರಯರ ಆದಿಯಾಗಿ ಹಲವು ಮಹನೀಯರು ಇತಿಹಾಸದ ಸುವರ್ಣ ಪುಟಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ದಾನ ಚಿಂತಾಮಣಿ ಅತ್ತಿಮಬ್ಬೆ ಯಂತಹ ಮಹಾನ್ ಸಾಹಿತ್ಯ ಪೋಷಕಿಯನ್ನು ಮರೆಯುವುದಾದರೂ ಹೇಗೆ ? ಎಂದರು. 
ಧರ್ಮಸ್ಥಳದ ಬಾಹುಬಲಿ ಮೂರ್ತಿಗೆ ಮೊದಲ ಬಾರಿ ನಡೆದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ವಿರೇಂದ್ರ ಹೆಗಡೆ ಅವರು ಆರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಇಂದು ಲಕ್ಷಾಂತರ ಕೃಷಿಕರ ಬಾಳಿನ ಬೆಳಕಾಗಿದೆ. ಈ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅವರು ಕೈಗೊಂಡಿರುವ ಕೆರೆಗಳ ಕಾಯಕಲ್ಪ ಯೋಜನೆ ಅವರ ಮೊದಲ ಯೋಜನೆಯಂತೆಯೇ ಕರ್ನಾಟಕವನ್ನು ಜಲಸಮೃದ್ಧವನ್ನಾಗಿ ಮಾಡುವ ಕನಸನ್ನು ನನಸು ಮಾಡುತ್ತದೆ ಎಂದು ಅಚಲ ನಂಬಿಕೆ. ಏಕೆಂದರೆ ಧರ್ಮಸ್ಥಳದ ಕತೃತ್ವ ಶಕ್ತಿಗೆ ಮತ್ತು ತನ್ನ ಯೋಜನೆಗಳನ್ನು ಅದು ಅನುಷ್ಠಾನಗೊಳಿಸುವ ರೀತಿಗೆ ಸರಿಸಾಟಿ ಇಲ್ಲ ಎಂದು ಕುಮಾರ ಸ್ವಾಮಿ ಹೇಳಿದರು. 
ಕೇಂದ್ರ ಯೋಜನೆ ಮತ್ತು ಸಾಂಖಿಕ ಸಚಿವ ಡಿ.ವಿ. ಸದಾನಂದಗೌಡ, ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತಿತರು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com