ವಿಟಿಯು ವಿಭಜನೆಗೆ ಕಾಂಗ್ರೆಸ್ ವಿರೋಧ: ಬಿಜೆಪಿಗೆ ಎಸ್ಆರ್ ಪಾಟೀಲ್ ಸಾಥ್

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ವನ್ನು ವಿಭಜಿಸಿ ಒಂದು ಭಾಗವನ್ನು ಹಾಸನಕ್ಕೆ ಸ್ಥಳಾಂತರಿಸುವುದನ್ನು 2019-20 ನೇ ಸಾಲಿನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ವನ್ನು ವಿಭಜಿಸಿ ಒಂದು ಭಾಗವನ್ನು ಹಾಸನಕ್ಕೆ ಸ್ಥಳಾಂತರಿಸುವುದನ್ನು 2019-20 ನೇ ಸಾಲಿನ ಆಯವ್ಯಯದಲ್ಲಿ ಪ್ರಕಟಿಸಿರುವುದತ್ತೆ ಮಿತ್ರ ಪಕ್ಷ ಕಾಂಗ್ರೆಸ್ ನಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಜತೆಗೆ ಉತ್ತರ ಕರ್ನಾಟಕ ಭಾಗಕ್ಕೆ ಸಚಿವ ಸ್ಥಾನ ಹಂಚಿಕೆಯೂ ಸೇರಿದಂತೆ ಬಜೆಟ್ ನಲ್ಲಿಯೂ ಅನ್ಯಾಯ ಮಾಡಲಾಗಿದೆ ಎಂಬ ಆರೋಪ ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು.
ಇಂದು ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಮಹಾಂತೇಶ ಕವಟಗಿಮಠ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಆಯವ್ಯಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯನ್ನು ವಿಭಜನೆ ಮಾಡುವ ಬಗ್ಗೆ ಸರ್ಕಾರ ತಿಳಿಸಿದ್ದು, ಇದು ಅಸಮಂಜಸವಾಗಿದೆ. ವಿಶ್ವವಿದ್ಯಾಲಯವನ್ನು ವಿಭಜಿಸಿ ಹಾಸನದಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದರಿಂದ ಗಂಭೀರ ಸ್ವರೂಪದ ಪ್ರತಿಕೂಲ ಪರಿಣಾಮ ಎದುರಾಗಬಹುದು. ಬೆಳಗಾವಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ವಿಭಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ವಿಭಜನೆ ಮಾಡುತ್ತಿರುವ ಉದ್ದೇಶವೇನು ಎಂಬುದೇ ಅರ್ಥವಾಗುತ್ತಿಲ್ಲ ಎಂದರು. 
ಕವಟಗಿಮಠ ಕಳವಳಕ್ಕೆ ಬಿಜೆಪಿಯ ಅರುಣ್ ಶಹಪೂರ, ವಿ.ಬಿ.ಸಂಕನ್ಹೂರ ಧ್ವನಿಗೂಡಿಸಿದರು. ಬಿಜೆಪಿಯ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಹಿರಿಯ ಸದಸ್ಯ ಎಸ್.ಆರ್.ಪಾಟೀಲ್, ಸರ್ಕಾರದ ಯಾವುದೇ ಅನುದಾನವಿಲ್ಲದೇ ವಿಟಿಯು ಕೆಲಸ ನಿರ್ವಹಿಸಿಕೊಂಡು ಬಂದಿದ್ದು, ರಾಜ್ಯದಲ್ಲಿ ಉತ್ತಮ ವಿಶ್ವವಿದ್ಯಾಲಯವಾಗಿ. ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುತ್ತಿದೆ. ಇದನ್ನು ವಿಭಜಿಸುತ್ತಿರುವುದು ಉತ್ತರ ಕರ್ನಾಟಕ ಭಾಗಕ್ಕೆ ಮಾಡಿದ ಅನ್ಯಾಯ. ಈ ಹಿಂದಿನಿಂದಲೂ ಈ ಭಾಗಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಅನ್ಯಾಯವೆಸಗುತ್ತಲೇ ಬರಲಾಗಿದೆ. ಇದೀಗ ವಿಟಿಯು ವಿಭಜನೆ ವಿಚಾರನ್ನು ಬಜೆಟ್ ನಲ್ಲಿ ಸೇರಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.?
 ಈ ಸಂದರ್ಭದಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಎಸ್.ಆರ್.ಪಾಟೀಲ್ ಅವರಿಗೆ ಸುಮ್ಮನಾಗುವಂತೆ ತಿಳಿಸಿದಾಗ, ಇನ್ನಷ್ಟು ಸಿಟ್ಟಿಗೆದ್ದ ಅವರು, ಸಚಿವ ಸ್ಥಾನ ಹಂಚಿಕೆಯಲ್ಲಿಯೂ ಅನ್ಯಾಯವಾಗಿದೆ. ದಕ್ಷಿಣ ಕನ್ನಡ ಭಾಗದವರಿಗೆ ಸಭಾಪತಿ, ಸಭಾನಾಯಕಿ, ಸೇರಿ ಒಳ್ಳೊಳ್ಳೆ ಖಾತೆಗಳನ್ನು ನೀಡಲಾಗಿದ್ದು, ಉತ್ತರ ಕರ್ನಾಟಕ ಭಾಗದವರಿಗೆ ಮಾತ್ರ ಈರುಳ್ಳಿ, ಬೆಳ್ಳುಳ್ಳಿ ಖಾತೆಗಳನ್ನು ಹಂಚಿಕೆಮಾಡಲಾಗಿದೆ. ಸದನದಲ್ಲಿ ಏನು ಮಾತನಾಡಬೇಕು ಎಂಬುದು ತಮಗೂ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭಾನಾಯಕಿ ಜಯಮಾಲಾ ಮಧ್ಯ ಪ್ರವೇಶಿಸಿ, ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಹೇಳಿದರು.
ಬೆಳಗಾವಿಯ ವಿಟಿಯು ವ್ಯಾಪ್ತಿಯಲ್ಲಿ 217 ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ವಿಭಜನೆಯಿಂದಾಗಿ 160 ಕ್ಕೂ ಹೆಚ್ಚು ಕಾಲೇಜುಗಳು ಹಾಸನಕ್ಕೆ ವರ್ಗಾವಣೆಗೊಳ್ಳಲಿವೆ. ಬೆಳಗಾವಿಯಲ್ಲಿ ಕೆಲವೇ ಕಾಲೇಜುಗಳು ಮಾತ್ರ ಉಳಿಯಲಿವೆ. ಕಳೆದೆರೆಡು ದಿನಗಳ ಹಿಂದೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ  ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಮಠಾಧೀಶರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com