ಹಿರಿಯ ಸಾಹಿತಿ ನಾಡೋಜ ಕೊ. ಚನ್ನಬಸಪ್ಪ ವಿಧಿವಶ

ನಾಡಿನ ಹಿರಿಯ ಸಾಹಿತಿ, ಚಿಂತಕರಾಗಿದ್ದ ನಾಡೋಜ ಕೊ. ಚೆನ್ನಬಸಪ್ಪ (೯೬) ಶನಿವಾರ ವಿಧಿವಶರಾದರು.
ಕೊ. ಚನ್ನಬಸಪ್ಪ
ಕೊ. ಚನ್ನಬಸಪ್ಪ
ಬೆಂಗಳೂರುನಾಡಿನ ಹಿರಿಯ ಸಾಹಿತಿ, ಚಿಂತಕರಾಗಿದ್ದ ನಾಡೋಜ ಕೊ. ಚನ್ನಬಸಪ್ಪ (96) ಶನಿವಾರ ವಿಧಿವಶರಾದರು.
ವೃತ್ತಿಯಲ್ಲಿ ನ್ಯಾಯವಾದಿ, ನ್ಯಾಯಾಧೀಶರಾಗಿದ್ದ ಕೊ. ಚನ್ನಬಸಪ್ಪ ಸಾಹಿತ್ಯ ವಲಯದಲ್ಲಿ ಕೊಚೆ ಎಂದೇ ಪ್ರಖ್ಯಾತರಾಗಿದ್ದರು. ಕನ್ನಡದ ಮಹತ್ವದ ಚಿಂತಕ, ಸಾಹಿತಿಗಳಲ್ಲಿ ಒಬ್ಬರಾಗಿದ್ದ ಇವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರಿನಲ್ಲಿ ಜನಿಸಿದ್ದ ಚನ್ನಬಸಪ್ಪ ಸ್ವಾತಂತ್ರ ಹೋರಾಟಗಾರ, ನ್ಯಾಯವಾದಿಯಾಗಿದ್ದರು. ಅವರು ವಿದ್ಯಾರ್ಥಿ ಆಗಿದ್ದಾಗಲೇ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. ಕುವೆಂಪು ಆಪ್ತವರ್ಗದಲ್ಲಿ ಗುರುತಿಸಿಕೊಂಡಿದ್ದ ಇವರು ಸಾಹಿತ್ಯ ಪ್ರೇಮಿಯಷ್ಟೇ ಅಲ್ಲದೆ ಅನೇಕ ಕೃತಿಗಳ ರಚನಾಕಾರರೂ ಸಹ ಆಗಿದ್ದಾರೆ.
 'ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ' ಸೇರಿದಂತೆ ಹಲವಾರು ಮಹತ್ವದ ಕೃತಿಗಳನ್ನು ಇವರು ರಚಿಸಿದ್ದು ಖಜಾನೆ, ರಕ್ತತರ್ಪಣ, ಹಿಂದಿರುಗಿ ಬರಲಿಲ್ಲ, ನ್ಯಾಯಾಲಯದ ಸತ್ಯಕಥೆಗಳು, ಹೃದಯ ನೈವೇದ್ಯ, ಬೆಳಕಿನೆಡೆಗೆ ಇನ್ನೂ ಮೊದಲಾದವು ಇವರ ಪ್ರಮುಖ ಕೃತಿಗಳಾಗಿದೆ.
ವಿಜಯಪುರದಲ್ಲಿ 2015ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಚನ್ನಬಸಪ್ಪ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಮತ್ತು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ಲಭಿಸಿತ್ತು. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಸ.ಸ.ಮಾಳವಾಡ ಪ್ರಶಸ್ತಿ, ಚಿಂತನಶ್ರೀ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳೂ ಇವರಿಗೆ ಸಂದಿದೆ. ’ ಟಿಪ್ಪು ಜಯಂತಿ ಆಚರಣೆ ಕುರಿತು ಇವರು ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಆಸ್ಪದ ನೀಡಿತ್ತು. 
ಸಿದ್ದರಾಮಯ್ಯ ಸಂತಾಪ
ಹಿರಿಯ ಸಾಹಿತಿ ಕೊ. ಚೆನ್ನಬಸಪ್ಪ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ."ಕರ್ನಾಟಕ ಏಕೀಕರಣದ ಹೋರಾಟಗಾರ, ಕ‌ನ್ನಡ ಪ್ರಜ್ಞೆಯನ್ನು ಉಸಿರಾಗಿಸಿಕೊಂಡ ಹಿರಿಜೀವ,  ಕುವೆಂಪು ಅವರ ಪರಮಾಪ್ತ ಶಿಷ್ಯ, ವೈಯಕ್ತಿಕವಾಗಿ ಸದಾ ನನಗೆ ಮಾರ್ಗದರ್ಶನ ನೀಡುತ್ತಿದ್ದ ಹಿತೈಷಿ ಕೋ.ಚೆನ್ನಬಸಪ್ಪನವರ‌ ಅಗಲಿಕೆಯ ಸುದ್ದಿ ಆಘಾತವನ್ನುಂಟು ಮಾಡಿದೆ. ಆ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ." ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕೋ. ಚನ್ನಬಸಪ್ಪ ನಿಧನಕ್ಕೆ ಸಿಎಂ, ಮಾಜಿ ಸಿಎಂ ಬಿಎಸ್‍ವೈ ಸಂತಾಪ
ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ ಕೋ.ಚನ್ನಬಸಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೋ.ಚನ್ನಬಸಪ್ಪ ಅವರು ವೃತ್ತಿಯಿಂದ ವಕೀಲ, ನ್ಯಾಯಾಧೀಶರಾದರೂ ಪ್ರವೃತ್ತಿಯಿಂದ ಸಾಹಿತಿಯಾಗಿ ಕನ್ನಡ ಸಾಹಿತ್ಯಕ್ಕೆ  ನೀಡಿದ ಕೊಡುಗೆ ಅವಿಸ್ಮರಣೀಯ. ಕುವೆಂಪು ಅವರಿಗೆ ಅತಿ ಆಪ್ತರಾಗಿದ್ದ ಕೋ ಚೆ. ಅವರು ಶ್ರೀ ರಾಮಾಯಣ ದರ್ಶನಂ ಮಹಾ ಕಾವ್ಯ ಸಮೀಕ್ಷೆ ಹಾಗೂ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

ಇವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, “ಸಾಹಿತಿ, ನಿವೃತ್ತ ನ್ಯಾಯಮೂರ್ತಿ ಕೋ. ಚನ್ನಬಸಪ್ಪ ನಿಧನದಿಂದ ದುಃಖವಾಗಿದೆ. ಕನ್ನಡ ಸಾರಸ್ವತ ಲೋಕಕ್ಕೆ ಹಲವು ಕಥೆ, ಕಾದಂಬರಿಗಳು ಮತ್ತು ವಿಮರ್ಶಾ ಗ್ರಂಥಗಳನ್ನು ನೀಡಿರುವ ಶ್ರೀಯುತರ ನಿಧನದಿಂದ ಕನ್ನಡ ನಾಡಿಗೆ, ಸಾಹಿತ್ಯಾಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ” ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com