ಭಾರತ್ ಬಂದ್: ಎರಡನೇ ದಿನ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತ, ಹಲವೆಡೆ ಬಸ್ ಗೆ ಕಲ್ಲು

ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆ ನಡೆಸಿರುವ ರಾಷ್ಟ್ರವ್ಯಾಪ್ತಿ ಮುಷ್ಕರದ ಎರಡನೇ ದಿನ ರಾಜ್ಯಾದ್ಯಂತ ಬಸ್ ಸಂಚಾರ ಬಹುತೇಕ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆ ನಡೆಸಿರುವ ರಾಷ್ಟ್ರವ್ಯಾಪ್ತಿ ಮುಷ್ಕರದ ಎರಡನೇ ದಿನ ರಾಜ್ಯಾದ್ಯಂತ ಬಸ್ ಸಂಚಾರ ಬಹುತೇಕ ಸ್ತಬ್ದಗೊಂಡ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ.
ಪ್ರತಿಭಟನಾಕಾರರು ಬೆಂಗಳೂರು ಕೇಂದ್ರ ಬಸ್ ನಿಲ್ದಾಣ ಮೆಜೆಸ್ಟಿಕ್ ನಲ್ಲಿ ನೂರಾರು ಬಸ್ ಗಳನ್ನು ತಡೆಯುತ್ತಿದ್ದು ನಾಗರಿಕರಿಗೆ ತೀವ್ರ ಅನಾನುಕೂಲವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರತಿಭಟನಾಕಾರರ ಬೆದರಿಕೆಗಳ ಕಾರಣ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬಸ್ಸುಗಳು  ತಮ್ಮ ಡಿಪೊಗಳಲ್ಲೇ ನಿಂತಿದೆ. ಆದರೆ ಕ್ಯಾಬ್ ಚಾಲಕರು, ಆಟೋ ಚಾಲಕ್ಜರು ನಿನ್ನೆ ಪ್ರಾರಂಭವಾಗಿದ್ದ ಮುಷ್ಕರಕ್ಕೆ ಆರಂಭದ ಕೆಲ ಗಂಟೆಗಳ ಕಾಲ ಮಾತ್ರ ಬೆಂಬಲ ಸೂಚಿಸಿದ್ದು ಇಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ.
ಇದಾಗ್ಯೂ ನಾಗರಿಕರು ತಮ್ಮ ದಿನನಿತ್ಯದ ಸಾಮಾನ್ಯ ಜೀವನ ನಡೆಸಲು ಪರದಾಡುವುದು ಕಂಡುಬಂದಿದೆ. ಇತ್ತ ಕಡೆ ಟ್ರೇಡ್ ಯೂನಿಯನ್ ಗಳ ಕಾರ್ಯಕರ್ತರು ರಾಜ್ಯದ ನಾನಾಭಾಗಗಳಲ್ಲಿ  ರ್ಯಾಲಿಗಳನ್ನು ನಡೆಸಿ ಕೇಂದ್ರದ ವಿರುದ್ಧ  ಘೋಷಣೆಗಳನ್ನು ಕೂಗಿದ್ದಾರೆ.
ಇದೇ ವೇಳೆ ರೈಲು ಸೇವೆಗಳಿಗೆ ಅಡ್ಡಿಪಡಿಸಲೆತ್ನಿಸಿದ ಪ್ರತಿಭಟನಾಕಾರರನ್ನು ರೈಲ್ವೆ ರಕ್ಷಣಾ ಪಡೆ ಅಧಿಕಾರಿಗಳು ಚದುರಿಸಿದ್ದಾರೆ.
ಬೆಂಗಳೂರಿನ ಟೌನ್ ಹಾಲ್ ಹಾಗೂ ಮೆಜೆಸ್ಟಿಕ್ ಭಾಗಗಳಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ನೇತೃತ್ವದ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದ ಕಾರಣ ಭಾರೀ ವಾಹನ ದಟ್ಟಣೆಯುಂತಾಗಿ ಸಂಚಾರಕ್ಕೆ ಅಡ್ಡಿಯಾಗಿದೆ. ಈ ವೇಳೆ ಮಾಗಡಿ, ಯಲಹಂಕ ಭಾಗಗಳಲ್ಲಿ ಪ್ರತಿಭಟನಾಕಾರರು ಬಸ್ಸುಗಳತ್ತ ಕಲ್ಲು ತೂರಿರುವ ಘಟನೆ ನಡೆದಿದೆ. ನಗರದಲ್ಲಿ ಕೆಲವು ಶಾಲೆ, ಕಾಲೇಜುಗಳು ಮುಚ್ಚಿದ್ದು  ಪ್ರಯಾಣಿಕರಿಗೆ ಮೆಟ್ರೋ ರೈಲು ವರದಾನವಾಗಿ ಪರಿಣಮಿಸಿದೆ.
ದಾವಣಗೆರೆ ವರದಿ
ಇನ್ನು ಕರ್ನಾಟಕದ ಮ್ಯಾಂಚೆಸ್ಟರ್ ದಾವಣಗೆರೆಯಲ್ಲಿ ಸಹ ಪ್ರತಿಭಟನೆ, ಮುಷ್ಕರದ ಕಾವು ಜೋರಾಗಿದ್ದು ಪ್ರತಿಭಟನಾಗಾರರು ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೆ ಕೇಂದ್ರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಪ್ರಧಾನಿ ಮೋದಿಯವರ ಪ್ರತಿಕೃತಿ ದಹಿಸಿದ್ದಾರೆ.
ಅದಲ್ಲದೆ ಕಲಬುರ್ಗಿ, ಬಾಗಲಕೋಟೆ, ಕಾರವಾರ, ಉಡುಪಿ, ಹುಬ್ಬಳ್ಳಿ, ಚಿಕ್ಕೋಡಿ, ವಿಜಯಪುರಗಳಲ್ಲಿ ರ್ಯಾಲಿ ನಡೆದಿರುವುದಾಗಿ ವರದಿಯಾಗಿದೆ. ಕಲಬುರ್ಗಿ ಹಾಗೂ ಬಳ್ಳಾರಿಗಳಲ್ಲಿ ರೈತರು ರೈಲುಗಳತ್ತ ಕಲ್ಲು ತೂರಾಟ ನಡೆಸಿದ್ದರೆನ್ನಲಾಗಿದೆ.
ಬಂದ್ ಕಾರಣ ರಾಜ್ಯ ಪೋಲೀಸರು ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಭಾರೀ ಬಂದೋಬಸ್ತ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com