ಗಗನಕ್ಕೇರಿದ ಟೊಮೆಟೊ ಬೆಲೆ; ಸಂಕ್ರಾಂತಿಗೆ ಬೆಲೆ ಏರಿಕೆಯ ಬಿಸಿ

ಟೊಮೆಟೊ ಬೆಲೆ ಗಗನಕ್ಕೇರಿದೆ. ಪ್ರತಿ ಕೆಜಿಗೆ 60 ರೂಪಾಯಿಗೆ ತಲುಪಿದ್ದು ಸಂಕ್ರಾಂತಿ ಹಬ್ಬದ ವೇಳೆಗೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಟೊಮೆಟೊ ಬೆಲೆ ಗಗನಕ್ಕೇರಿದೆ. ಪ್ರತಿ ಕೆಜಿಗೆ 60 ರೂಪಾಯಿಗೆ ತಲುಪಿದ್ದು ಸಂಕ್ರಾಂತಿ ಹಬ್ಬದ ವೇಳೆಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಟೊಮೆಟೊ ಖಾದ್ಯ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಹಾಪ್ ಕಾಮ್ಸ್ ನಲ್ಲಿ ಸಿಕ್ಕಿದ ತರಕಾರಿ ಬೆಲೆ ಪಟ್ಟಿಯಂತೆ, ಟೊಮೆಟೊ ಬೆಲೆ ನಿನ್ನೆ ಪ್ರತಿ ಕೆಜಿಗೆ 58 ರೂಪಾಯಿಯಿದೆ. ಹೊರಗೆ ಚಿಲ್ಲರೆ ಮಾರಾಟಗಾರರು 70 ರೂಪಾಯಿಗಳವರೆಗೆ ಮಾರಾಟ ಮಾಡುತ್ತಿದ್ದಾರೆ. ಡಿಸೆಂಬರ್ ಆರಂಭದಲ್ಲಿ ಕೆಜಿಗೆ 20 ರೂಪಾಯಿಯಿದ್ದ ಟೊಮೆಟೊ ಬೆಲೆ ಇಂದು 70 ರೂಪಾಯಿಗೆ ಏರಿಕೆಯಾಗಿದ್ದು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನಗರ ನಿವಾಸಿಗಳಿಗೆ ನಿಜಕ್ಕೂ ಆಘಾತವಾಗಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಟೊಮೆಟೊ ಕೆಜಿಗೆ 3ರಿಂದ 5 ರೂಪಾಯಿಗಳವರೆಗೆ ಸಿಗುತ್ತಿತ್ತು.

ಸಾಮಾನ್ಯವಾಗಿ ಬೆಂಗಳೂರು ನಗರಕ್ಕೆ ಪ್ರತಿದಿನ ಸುಮಾರು 500 ಟನ್ ಗಳಷ್ಟು ಟೊಮೆಟೊ ಬರುತ್ತದೆ. ಈ ವರ್ಷ ಅದರ ಅರ್ಧದಷ್ಟು ಬಂದಿದೆ. ಆದರೆ ಜನರ ತಿನ್ನುವ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಪೂರೈಕೆ ಕಡಿಮೆ ಬಳಕೆ ಹೆಚ್ಚಾದಾಗ ಸಹಜವಾಗಿ ಬೆಲೆ ಹೆಚ್ಚಾಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. ಈ ವರ್ಷ ಪ್ರತಿಕೂಲ ಹವಾಮಾನ, ಕೊಳೆಬಾಧೆಯಿಂದ ಟೊಮೆಟೊ ಬೆಳೆ ಕಡಿಮೆಯಾಗಿದ್ದರಿಂದ ಪೂರೈಕೆ ಕಡಿಮೆಯಾಗಿದೆ.

ಜನವರಿ ಕೊನೆ, ಫೆಬ್ರವರಿ ಹೊತ್ತಿಗೆ ಬೆಲೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿದೆ ಎನ್ನುತ್ತಾರೆ ಹಾಪ್ ಕಾಮ್ಸ್ ನ ಸಂಗ್ರಹಣೆ ಮತ್ತು ಮಾರುಕಟ್ಟೆ ವ್ಯವಸ್ಥಾಪಕ ಕೇಶವ್.
ರಸಮ್, ಸಾಂಬಾರ್ ತಯಾರಿಸಲು ಟೊಮೆಟೊ ಬೇಕೇ ಬೇಕಾಗುತ್ತದೆ. ನನ್ನ ಮನೆ ಹತ್ತಿರ ಕೆಜಿಗೆ 64 ರೂಪಾಯಿ ಕೊಟ್ಟು ನಾನು ಖರೀದಿಸಿದೆ. ಕಳೆದ ತಿಂಗಳು 18 ರೂಪಾಯಿಗೆ ಸಿಗುತ್ತಿತ್ತು. ಟೊಮೆಟೊ ಮತ್ತು ಈರುಳ್ಳಿ ಇಲ್ಲದೆ ನಮಗೆ ಅಡುಗೆ ಮಾಡಲು ಬರುವುದೇ ಇಲ್ಲ ಎನ್ನುತ್ತಾರೆ ಹೊಸಕೆರೆಹಳ್ಳಿಯ ನಿವಾಸಿ ಸುನಿತಾ ಮಹೇಶ್.

ಕೇವಲ ಟೊಮೆಟೊ ಮಾತ್ರವಲ್ಲದೆ ಬೇರೆ ತರಕಾರಿಗಳ ಬೆಲೆ ಕೂಡ ದುಬಾರಿಯಾಗಿದೆ. ನುಗ್ಗೆಕಾಯಿಗೆ ಕೆಜಿಗೆ 140 ರೂಪಾಯಿಗಳಷ್ಟಾಗಿದೆ ಎನ್ನುತ್ತಾರೆ ರಾಜರಾಜೇಶ್ವರಿ ನಗರದ ಗೃಹಿಣಿ ಶ್ರೀಲಕ್ಷ್ಮಿ. ತರಕಾರಿಗಳ ಬೆಲೆ ಹೆಚ್ಚಳವಾದರೆ ಹೊಟೇಲ್, ರೆಸ್ಟೊರೆಂಟ್ ಗಳಲ್ಲಿ ಕೂಡ ಆಹಾರ ಪದಾರ್ಥಗಳ ಬೆಲೆ ವ್ಯತ್ಯಾಸವಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com