ಜುಲೈ 18ಕ್ಕೆ ವಿಶ್ವಾಸಮತ ಯಾಚನೆ; ಶಕ್ತಿ ಕೇಂದ್ರ ಆವರಣದ ಅರಳಿ ಮುನೇಶ್ವರ ದೇವಸ್ಥಾನದಲ್ಲಿ 'ರಾಜಕೀಯ ಪೂಜೆ'

ರಾಜ್ಯದ ಅಧಿಕಾರ ಕೇಂದ್ರ ವಿಧಾನ ಸೌಧದ ಆವರಣದ ಒಳಗಿರುವ 100 ವರ್ಷಗಳ ಹಳೆಯ ದೇವಸ್ಥಾನ ...
ವಿಧಾನಸೌಧ ಆವರಣದಲ್ಲಿರುವ ಮುನೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ನಿರತ ಅರ್ಚ ಕರು
ವಿಧಾನಸೌಧ ಆವರಣದಲ್ಲಿರುವ ಮುನೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ನಿರತ ಅರ್ಚ ಕರು
ಬೆಂಗಳೂರು: ರಾಜ್ಯದ ಅಧಿಕಾರ ಕೇಂದ್ರ ವಿಧಾನ ಸೌಧದ ಆವರಣದಲ್ಲಿರುವ 100 ವರ್ಷಗಳ ಹಳೆಯ ದೇವಸ್ಥಾನ ಕಳೆದೊಂದು ವಾರದಿಂದ ಭಕ್ತರಿಂದ ತುಂಬಿ ತುಳುಕುತ್ತಿದೆ. 
ಇಷ್ಟರವರೆಗೆ ಈ ದೇವಸ್ಥಾನದಲ್ಲಿ ಸರ್ಕಾರಿ ನೌಕರರು ತಮ್ಮ ವರ್ಗಾವಣೆ, ಬಡ್ತಿ, ವೈಯಕ್ತಿಕ ಸಮಸ್ಯೆ ಹೇಳಿಕೊಂಡು ವಿಶೇಷ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಬರುತ್ತಿದ್ದರೆ ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಬೆಂಬಲಿಗರು ರಾಜಕೀಯ ಬಿಕ್ಕಟ್ಟಿನ ನಂತರ ನಾಡಿದ್ದು ವಿಶ್ವಾಸಮತ ಯಾಚನೆ ಇರುವುದರಿಂದ ದೇವಸ್ಥಾನಕ್ಕೆ ಎಡತಾಕುತ್ತಿದ್ದಾರೆ. ಈ ದೇವಾಲಯ ಇರುವುದು ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯದಲ್ಲಿ.
ಈ ಇಬ್ಬರೂ ನಾಯಕರ ಬೆಂಬಲಿಗರು ಬಂದು ನನ್ನಲ್ಲಿ ಅಷ್ಟೋತ್ತರ ಪೂಜೆ ನೆರವೇರಿಸುವಂತೆ ಕೋರುತ್ತಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಬೇಕೆಂದು ಹರಕೆ ಹೊತ್ತು ಇಲ್ಲಿಗೆ ಬಂದು ಪೂಜೆ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ದೇವಸ್ಥಾನದ ಅರ್ಚಕ ಎಂ ಆರ್ ಸುಬ್ರಹ್ಮಣ್ಯ ಶಾಸ್ತ್ರಿ.
ವಿಧಾನ ಸೌಧದ ಹೊರಗೆ ಅರಳಿ ಮರದ ಪಕ್ಕದಲ್ಲಿ ಈ ದೇವಸ್ಥಾನ ಇರುವುದರಿಂದ ಅರಳಿ ಮುನೇಶ್ವರ ದೇವಸ್ಥಾನ ಎಂಬ ಪ್ರಸಿದ್ಧಿ ಪಡೆದಿದೆ. ಈ ದೇವಸ್ಥಾನಕ್ಕೆ ಭೇಟಿ ನೀಡದ ರಾಜಕೀಯ ನಾಯಕರು ಹೆಚ್ಚು ಕಾಲ ಅಧಿಕಾರದಲ್ಲಿ ಇರುವುದಿಲ್ಲ ಎಂಬ ನಂಬಿಕೆ ಇದೆಯಂತೆ.
ಕಳೆದ ವರ್ಷ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ನಾವು ತಯಾರಿ ಮಾಡಿಕೊಂಡಿದ್ದೆವು. ಆದರೆ ಅವರು ಇಲ್ಲಿಗೆ ಬರುವ ಬದಲು ನೇರವಾಗಿ ಮುಖ್ಯಮಂತ್ರಿ ಕಚೇರಿಗೆ ಹೋದರು. ಮುಂದಿನ 55 ಗಂಟೆಗಳೊಳಗೆ ಅಧಿಕಾರ ಕಳೆದುಕೊಂಡರು. 
ಆದರೆ ಗಾಂಧಿ ಪ್ರತಿಮೆ ಬಳಿಗೆ ಧರಣಿಗೆಂದು ಬಂದ ಕುಮಾರಸ್ವಾಮಿಯವರು ಜಿ ಟಿ ದೇವೇಗೌಡರ ಜೊತೆ ಮುನೀಶ್ವರನ ದರ್ಶನ ಪಡೆದುಕೊಂಡು ಹೋದರು. ದೇವರ ಆಶೀರ್ವಾದದಿಂದ ಅವರು ಮುಖ್ಯಮಂತ್ರಿಯಾದರು ಎಂದು ಅರ್ಚಕರು ಹೇಳುತ್ತಾರೆ.
ದೇವಸ್ಥಾನ ಚಿಕ್ಕದಾಗಿದ್ದು ನೆಲದ ಅಡಿಯಲ್ಲಿ ದೇವರ ಮೂರ್ತಿಯಿದೆ. ಭಕ್ತರು ಪೂಜೆ ಸಲ್ಲಿಸಲು ಕೆಳಗೆ ಹೋಗಬೇಕು. ಇಲ್ಲಿ ಶಿವಲಿಂಗವಿದ್ದು ನಾಗದೇವತೆ ಮತ್ತು ಬಲಮುರಿ ಗಣೇಶನ ವಿಗ್ರಹಗಳಿವೆ. ಬೆಳಗ್ಗೆ 9.30ರಿಂದ ಸಾಯಂಕಾಲ 7 ಗಂಟೆಯವರೆಗೆ ದೇವಸ್ಥಾನ ತೆರೆದಿರುತ್ತದೆ. ಶನಿವಾರ ಮತ್ತು ಭಾನುವಾರ ಇರುವುದಿಲ್ಲ.
ಈ ದೇವಸ್ಥಾನಕ್ಕೆ ಬಾಗಿಲುಗಳೇ ಇಲ್ಲ, ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com