ಅಧಿವೇಶನ ಪುನಾರಂಭಕ್ಕೂ ಮುನ್ನ ಕುಮಾರಸ್ವಾಮಿ ಪತ್ರಿಕಾ ಪ್ರಕಟಣೆ: ಸಿಎಂ ಹೇಳಿದ್ದೇನು?

ಬಿಜೆಪಿಯು ಕರ್ನಾಟಕದ ರಾಜಕಾರಣವನ್ನು ಪಾತಾಳಕ್ಕೆ ಕೊಂಡೊಯ್ದಿರುವುದಲ್ಲದೆ ದೇಶದಲ್ಲಿ ಅನೈತಿಕ ರಾಜಕಾರಣಕ್ಕೆ ಹೊಸ ಭಾಷ್ಯ ಬರೆದಿರುವುದು ಅತ್ಯಂತ ನೋವಿನ ಹಾಗೂ ಜಿಗುಪ್ಸೆ ತರುವ ಸಂಗತಿ.

Published: 21st July 2019 12:00 PM  |   Last Updated: 21st July 2019 11:37 AM   |  A+A-


Posted By : SBV SBV
Source : Online Desk
ಬೆಂಗಳೂರು: ಬಿಜೆಪಿಯು ಕರ್ನಾಟಕದ ರಾಜಕಾರಣವನ್ನು ಪಾತಾಳಕ್ಕೆ ಕೊಂಡೊಯ್ದಿರುವುದಲ್ಲದೆ ದೇಶದಲ್ಲಿ ಅನೈತಿಕ ರಾಜಕಾರಣಕ್ಕೆ ಹೊಸ ಭಾಷ್ಯ ಬರೆದಿರುವುದು ಅತ್ಯಂತ ನೋವಿನ ಹಾಗೂ ಜಿಗುಪ್ಸೆ ತರುವ ಸಂಗತಿ.

ಆಡಳಿತಾರೂಢ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಶಾಸಕರನ್ನು ಕರೆದೊಯ್ದು ಬಿಜೆಪಿಯು ಪ್ರಜಾಪ್ರಭುತ್ವದ ಅಣಕವಾಡಿದೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಶೇಷ ವಿಮಾನಗಳಲ್ಲಿ ನಮ್ಮ ಶಾಸಕರೊಂದಿಗೆ ತೆರಳಿರುವುದು ಮಾಧ್ಯಮಗಳಿಂದ ಸ್ಪಷ್ಟವಾಗಿದೆ. 

ಅನೈತಿಕ ಹಾಗೂ ಕಾನೂನು ಬಾಹಿರ ವಿಧಾನಗಳಿಂದ ಅಧಿಕಾರಕ್ಕೆ ಬರಲು ಹಾತೊರೆಯುತ್ತಿರುವ ಬಿಜೆಪಿಯು, ಈ ಎಲ್ಲ ಬೆಳವಣಿಗೆಗಳ ನಡುವೆ, ನಾನು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿದೆ. ವಿಶ್ವಾಸ ನಿಲುವಳಿಯನ್ನು ಮತಕ್ಕೆ ಹಾಕುವಂತೆ ರಾಜಭವನದ ಮೂಲಕ ಗಡುವುಗಳನ್ನೂ ನೀಡಿದೆ.

ನಾನು ಅಧಿಕಾರಕ್ಕೆ ಅಂಟಿಕೊಳ್ಳುವ ಉದ್ದೇಶ ಹೊಂದಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಬಯಸುತ್ತೇನೆ. ವಿಶ್ವಾಸ ಮತ ಕುರಿತು ವಿಸ್ತøತ ಚರ್ಚೆಗೆ ಸಮಯ ಕೋರಿರುವುದರ ಹಿಂದೆ ನನ್ನ ಉದ್ದೇಶವಿರುವುದು ಒಂದೇ- ಬಿಜೆಪಿಯು ನೈತಿಕತೆಯ ಕುರಿತು ಮಾತನಾಡುತ್ತಲೇ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೂಲತತ್ವ, ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿರುವುದು ಇಡೀ ದೇಶಕ್ಕೆ ಅರಿವಾಗಬೇಕು.

ಈ ಸಂದರ್ಭದಲ್ಲಿ, ನಮ್ಮಿಂದ ದೂರ ಹೋಗಿರುವ ಶಾಸಕರು ಹಿಂದಿರುಗಿ, ಅಧಿವೇಶನದಲ್ಲಿ ಪಾಲ್ಗೊಲ್ಲುವಂತೆ ಮನವಿ ಮಾಡುತ್ತೇನೆ. ಬಿಜೆಪಿಯು ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನು ಹೇಗೆ ಹಾಳುಗೆಡವಿದೆ ಎಂಬುದರ ಕುರಿತು ಸದನದಲ್ಲಿ  ವಿವರವಾಗಿ ಚರ್ಚಿಸೋಣ.

ಶಾಸಕರಿಗೆ ಇನ್ನೊಂದು ವಿಷಯ ತಿಳಿಸ ಬಯಸುತ್ತೇನೆ. ಎಲ್ಲರೂ ಹಿಂದಿರುಗಿ ಬನ್ನಿ; ಎಲ್ಲ ವಿಷಯಗಳ ಕುರಿತು ಒಟ್ಟಾಗಿ ಕುಳಿತು ಮುಕ್ತವಾಗಿ ಚರ್ಚಿಸೋಣ. ಪಕ್ಷ ತಾಯಿ ಇದ್ದಂತೆ. ಜಾತ್ಯತೀತ ತಳಹದಿಯ ನಮ್ಮ ಪಕ್ಷಗಳನ್ನು ಬಲಪಡಿಸಲು ನಿಷ್ಠೆಯಿಂದ ಶ್ರಮಿಸೋಣ.

ಯಾಕೆಂದರೆ, ರಾಜಕೀಯ ಪ್ರಭಾವದ ದುರ್ಬಳಕೆಯ ಮೂಲಕ ಪ್ರಜಾಪ್ರಭುತ್ವದ ಬುನಾದಿಯನ್ನೇ ಅಲುಗಾಡಿಸುತ್ತಿರುವ, ಜನತಂತ್ರದಡಿ ಆಯ್ಕೆಯಾದ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳಿಂದ ಸರ್ಕಾರವನ್ನು ಪಾರು ಮಾಡಬೇಕಾಗಿದೆ.

ಅಧಿಕಾರಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಾಂವಿಧಾನಿಕವಾಗಿ ರಚಿಸಲಾದ ಸಂಸ್ಥೆಗಳನ್ನೇ ನಾಶಪಡಿಸಲು ಮುಂದಾಗಿರುವ ದುಷ್ಟ ಶಕ್ತಿಗಳಿಂದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ಉಳಿಸಲು ಜೊತೆಯಾಗಿ ಹೋರಾಟ ನಡೆಸೋಣ.

-ಹೆಚ್ ಡಿ ಕುಮಾರಸ್ವಾಮಿ
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp