ಸಾರ್ವಜನಿಕರನ್ನು ವಂಚಿಸುತ್ತಿದ್ದ ಕಂಪನಿಗಳ ವಿರುದ್ಧ ಮುಂದುವರೆದ ತನಿಖೆ

ಅಧಿಕ ಬಡ್ಡಿ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಠೇವಣಿ ಇರಿಸಿಕೊಂಡು, ನಂತರ ಬಡ್ಡಿ ಮತ್ತು ಠೇವಣಿ ಮೊತ್ತ ಹಿಂತಿರುಗಿಸದೇ ಹೂಡಿಕೆದಾರರಿಗೆ ವಂಚಿಸುತ್ತಿದ್ದ ಸಂಸ್ಥೆಗಳ ವಿರುದ್ಧ ದೂರು...
ಸಾರ್ವಜನಿಕರನ್ನು ವಂಚಿಸುತ್ತಿದ್ದ ಕಂಪನಿಗಳ ವಿರುದ್ಧ ಮುಂದುವರೆದ ತನಿಖೆ
ಸಾರ್ವಜನಿಕರನ್ನು ವಂಚಿಸುತ್ತಿದ್ದ ಕಂಪನಿಗಳ ವಿರುದ್ಧ ಮುಂದುವರೆದ ತನಿಖೆ
ಬೆಂಗಳೂರು: ಅಧಿಕ ಬಡ್ಡಿ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಠೇವಣಿ ಇರಿಸಿಕೊಂಡು, ನಂತರ ಬಡ್ಡಿ ಮತ್ತು ಠೇವಣಿ ಮೊತ್ತ ಹಿಂತಿರುಗಿಸದೇ ಹೂಡಿಕೆದಾರರಿಗೆ ವಂಚಿಸುತ್ತಿದ್ದ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದೂವರೆದಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಐ ಮಾನಿಟರಿ ಅಡ್ವೈಸರಿ ಕಂಪನಿ (ಐಎಂಎ) ತನಿಖೆಯನ್ನು ಎಸ್ಐಟಿ ಗೆ, ಆಂಬಿಡೆಂಟ್ ಮಾರ್ಕೆಂಟಿಂಗ್ ಪ್ರೈ. ಲಿ ತನಿಖೆಯನ್ನು ಸಿಸಿಬಿಗೆ, ಅಜ್ಮೇರಾ ಗ್ರೂಪ್ಸ್- ತನಿಖೆಯನ್ನು ಸಿಸಿಬಿಗೆ ಹಾಗೂ ಇಂಜಾಂಜ್ ಇಂಟರ್ ನ್ಯಾಷನಲ್ ಕಂಪನಿ ತನಿಖೆಯನ್ನು ಸಿಸಿಬಿಗೆ ಮತ್ತು ಮಾರ್ಗೇನೆಲ್ ಕೋ.ಆಪೇರೇಟಿವ್ ಸೊಸೈಟಿ ಲಿ. ತನಿಖೆಯನ್ನು ಸಿಸಿಬಿಗೆ ಹಾಗೂ ನಾಫೀಯಾ ಅಡ್ವೈಜ್ಸರಿ ಕಂಪನಿ ಮತ್ತು ನಾಫೀಯಾ ಟೂರ್ಸ್ ತನಿಖೆಯನ್ನು ಸಿಸಿಬಿಗೆ ಮತ್ತು ಎಐಎಂಎಸ್ ವೆಂಚರ್ಸ್ ಸಂಸ್ಥೆಯ ತನಿಖೆ ಸಿಸಿಬಿ ಸೇರಿದಂತೆ ಒಟ್ಟು 12 ಕಂಪನಿಗಳ ವಿರುದ್ಧ ವಿವಿಧ ಸಂಸ್ಥೆಗಳಡಿ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿಯ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ವಿರುದ್ಧ ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಶೇಷ ತನಿಖಾ ತಂಡಕ್ಕೆ ಪ್ರಕರಣ ವಹಿಸಲಾಗಿದೆ ಎಂದರು.
ಈ ಕಂಪನಿ 2006ರಲ್ಲಿ ಆರಂಭವಾಗಿದ್ದು, ಸಾರ್ವಜನಿಕರಿಗೆ ತಿಂಗಳಿಗೆ ಶೇಕಡ 8 ರಿಂದ 10 ರಷ್ಟು ಬಡ್ಡಿಯ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ಸಾವಿರಾರು ಕೋಟಿ ರೂ. ಗಳನ್ನು ಹೂಡಿಕೆ ಮಾಡಿಸಿಕೊಂಡಿತ್ತು. ಆದರೆ 2019ನೇ ಸಾಲಿನ ಮಾರ್ಚ್ ತಿಂಗಳವರೆಗೆ ಹೂಡಿಕೆದಾರರಿಗೆ ಲಾಭಾಂಶ ಕೊಡುವುದನ್ನು ನಿಲ್ಲಿಸಿದ್ದರಿಂದ ಹೂಡಿಕೆದಾರ ಮಹಮ್ಮದ್ ಖಾಲಿದ್ ಅಹಮ್ಮದ್ ಎಂಬಾತ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಕಂಪನಿಯಲ್ಲಿ 21 ಸಾವಿರ ಸಾರ್ವಜನಿಕರು ಸುಮಾರು 1,230 ಕೋಟಿ ರೂ. ಗಳನ್ನು ಹೂಡಿಕೆ ಮಾಡಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈಗಾಗಲೇ 20 ಸಾವಿರ ಹೂಡಿಕೆದಾರರು ದೂರು ನೀಡಿದ್ದು, ಇದರ ಆಧಾರದ ಮೇಲೆ ತನಿಖೆ ಮುಂದುವರೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಏಳು ನಿರ್ದೇಶಕರನ್ನು ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಸ್ಥೆಯ ಎಂ.ಡಿ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಮನ್ಸೂರ್ ಖಾನ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಜಾಲ ಬೀಸಲಾಗಿದ್ದು, ಲುಕ್ಔಟ್ ನೋಟೀಸ್ ಸಹ ಹೊರಡಿಸಲಾಗಿದೆ. ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಡಿಜಿ, ಐಜಿಪಿ ಹಾಗೂ ರಾಜ್ಯ ಸರ್ಕಾರ ನುರಿತ ಹಿರಿಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡಂತೆ ವಿಶೇಷ ತನಿಖಾ ತಂಡ ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಮನ್ಸೂರ್ ಖಾನ್ ಪತ್ತೆಗೆ ವ್ಯಾಪಕ ಬಲೆ ಬೀಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
2016ರಲ್ಲಿ ನಗರದ ಡಿ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೈಯದ್ ಅಹಮದ್ ಫರೀದ್ ಎಂಬುವವರು ತಮ್ಮ ಮಗ ಸೈಯದ್ ಅಫಾಕ್ ಅಹಮದ್ ಅವರೊಂದಿಗೆ ಆಂಬಿಡೆಂಟ್ ಮಾರ್ಕೆಂಟಿಂಗ್ ಕಂಪನಿ ಆರಂಭಿಸಿ ಸಾರ್ವಜನಿಕರಿಗೆ ಶೇ.15 ರಿಂದ 60ರಷ್ಟು ಬಡ್ಡಿ ನೀಡುವುದಾಗಿ ಸುಮಾರು 6,156 ಕ್ಕೂ ಅಧಿಕ ಜನರಿಂದ 121 ಕೋಟಿ ರೂ.ಗೂ ಹೆಚ್ಚು ಹಣವನ್ನು ಠೇವಣಿ ರೂಪದಲ್ಲಿ ಪಡೆದು ವಂಚಿಸಿದ್ದರು ಎಂದರು.
ಈ ಪ್ರಕರಣದಲ್ಲಿ ಸೈಯದ್ ಫರೀದ್ ಅಹಮದ್, ಸೈಯದ್ ಅಫಾಕ್ ಅಹಮದ್, ಇರ್ಫಾನ್ ಮಿರ್ಜಾ, ವಿಜಯ್ ಟಾಟಾ, ರಮೇಶ್, ಇನಾಯತ್-ಉಲ್ಲಾ ವಾಹಬ್, ಗಾಲಿ ಜರ್ನಾದನ ರೆಡ್ಡಿ, ಆಲಿ ಖಾನ್ ಮತ್ತು ಆಶ್ರಫ್ ಆಲಿ ಎಂಬುವರು ಆರೋಪಿಗಳಾಗಿದ್ದು, ಈ ಪೈಕಿ ಫರೀದ್ ಅಹಮದ್ ಮತ್ತು ಸೈಯದ್ ಅಫಾಕ್ ಅಹಮದ್ ಅವರುಗಳು ನಿರೀಕ್ಷಣಾ ಜಾಮೀನನ್ನು ಪಡೆದಿದ್ದರೆ, ಇರ್ಫಾನ್ ಮಿರ್ಜಾ, ಬಳ್ಳಾರಿ ರಮೇಶ್, ಇನಾಯತ್-ಉಲ್ಲಾ , ಗಾಲಿ ಜರ್ನಾಧನ್ ರೆಡ್ಡಿ, ಅಲಿ ಖಾನ್ ಮತ್ತು ಅಶ್ರಫ್ ಅಲಿ ಅವರನ್ನು ತನಿಖೆಯ ಅವಧಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಸದ್ಯ ಇವರೆಲ್ಲ ಹಾಲಿ ನ್ಯಾಯಾಲಯದ ಜಾಮೀನಿನ ಮೇಲೆ ಹೊರಬಂದಿದ್ದಾರೆ.
ಈ ಪ್ರಕರಣವು ತನಿಖೆಯಲ್ಲಿದ್ದು, ಆರೋಪಿಗಳ ವಶದಿಂದ ಬ್ಯಾಂಕ್ ಡಿಡಿ ರೂಪದಲ್ಲಿ 5.9 ಕೋಟಿ ನಗದು ಮತ್ತು ಸುಮಾರು 50 ಕೋಟಿ ಬೆಲೆಯ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com