ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು: ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸರ್ಕಾರ ಸೂಚನೆ

ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವ ಬೆಂಗಳೂರಿನಲ್ಲಿ ತಲೆದೋರಿರುವ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಉದ್ದೇಶಿಸಿರುವ ಲಿಂಗನಮಕ್ಕಿ ಯೋಜನೆಗೆ....

Published: 20th June 2019 12:00 PM  |   Last Updated: 20th June 2019 06:02 AM   |  A+A-


Karnataka government asks officials to prepare report on Linganamakki project

ಜಿ ಪರಮೇಶ್ವರ

Posted By : LSB LSB
Source : UNI
ಬೆಂಗಳೂರು: ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವ ಬೆಂಗಳೂರಿನಲ್ಲಿ ತಲೆದೋರಿರುವ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಉದ್ದೇಶಿಸಿರುವ ಲಿಂಗನಮಕ್ಕಿ ಯೋಜನೆಗೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ‍್ವರ್ ಅವರು ಗುರುವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ನಗರದ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ತರುವ ಯೋಜನೆಯ ರೂಪುರೇಷೆಗಳ ಕುರಿತು ಇಂದು ಬಿಎಂಆರ್‌ಡಿಎ ಕಚೇರಿಯಲ್ಲಿ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಪ್ರಸ್ತುತ ಕಾವೇರಿಯಿಂದ 1400 ಎಂಎಲ್‌ಡಿ ನೀರನ್ನು ಪೂರೈಸಲಾಗುತ್ತಿದೆಯಾದರೂ ನೀರಿನ ಸಮಸ್ಯೆ ಇದೆ. ಇನ್ನು ಕೆಲವೆಡೆ ಕಾವೇರಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಕಾವೇರಿ ಮೊದಲ ಹಾಗೂ ಎರಡನೇ ಹಂತದಿಂದಲೂ ನೀರಿನ ಪ್ರಮಾಣ ಇಳಿಕೆಯಾಗಿದೆ. ಕಾವೇರಿ 5ನೇ ಹಂತದ ಯೋಜನೆಯಿಂದ ಹೆಚ್ಚೆಂದರೆ 800 ಎಂಎಲ್‌ಡಿ ನೀರು ತರಬಹುದಾದರೂ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇತರೆ ಮೂಲದಿಂದ‌ ಬೆಂಗಳೂರಿಗೆ ನೀರು ತರುವ ಅನಿವಾರ್ಯತೆ ಇದೆ. ಎತ್ತಿನಹೊಳೆ ಯೋಜನೆ ಮೂಲಕ 2.5 ಟಿಎಂಸಿ ನೀರು ತರಲಾಗುತ್ತದೆ. ಇಷ್ಟು ನೀರು ಬೆಂಗಳೂರಿಗೆ ಸಾಲದು. ಹೀಗಾಗಿ ಲಿಂಗನಮಕ್ಕಿಯಿಂದಲೂ ನೀರು ತರಲು ಯೋಜಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಲಿಂಗನಮಕ್ಕಿ ಕೇವಲ ವಿದ್ಯುತ್‌ ಉತ್ಪಾದನೆಗಷ್ಟೇ ಬಳಕೆಯಾಗುತ್ತಿದೆ. ಬಳಿಕ ಈ ನೀರು ಸಮುದ್ರದ ಪಾಲಾಗುತ್ತಿದೆ. ಈ ಜಲಾಶಯದಿಂದ ಯಾವುದೇ ನೀರಾವರಿ ಯೋಜನೆ ಕೈಗೊಂಡಿಲ್ಲ. ಹೀಗಾಗಿ‌ ಈ ಮೂಲದಿಂದ ನೀರು ತರುವುದರಿಂದ ಯಾವುದೇ ರೈತರಿಗೂ ಸಮಸ್ಯೆ ಆಗುವುದಿಲ್ಲ ಎಂದು ಅವರು ತಿಳಿಸಿದರು.

ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಸಬಹುದು ಎಂದು ತ್ಯಾಗರಾಜ್ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ವರದಿಯನ್ನು ಅಧ್ಯಯನ ನಡೆಸಿ ನೀರು ತರುವ ಸಾಧ್ಯತೆಯನ್ನು ಕಂಡುಕೊಳ್ಳಲಾಗಿದ್ದು, ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ. ಲಿಂಗನಮಕ್ಕಿ ಬೆಂಗಳೂರಿನಿಂದ 300 ಕಿ.ಮೀ. ದೂರವಿದೆ. ಯೋಜನೆಗೆ ಅಂದಾಜು 12 ಸಾವಿರ ಕೋಟಿ ರೂ.ವೆಚ್ಚವಾಗಲಿದೆ.

ಯೋಜನೆಯ ಮೊದಲ ಹಂತದಲ್ಲಿ 10 ಟಿಎಂಸಿ ನೀರನ್ನು ತರಲು ಯೋಜಿಸಲಾಗಿದೆ. ಡಿಪಿಆರ್‌ ಬಳಿಕ ಯೋಜನೆಯ ಸಾಧಕ ಬಾದಕವನ್ನು ಪರಿಶೀಲಿಸಲಾಗುವುದು. ಪರಿಸರ, ನೀರು ಪಂಪ್‌ ಮಾಡಲು ಇರುವ ಸವಾಲುಗಳ ಬಗ್ಗೆ ಅವಲೋಕಿಸಲಾಗುವುದು ಎಂದರು.

ಬೆಂಗಳೂರಿನ ಕುಡಿಯುವ ನೀರಿನ ದಾಹ ತಣಿಸಲು ಕಾವೇರಿ ನದಿಯಿಂದ ಸಾಧ‍್ಯವಾಗದ ಕಾರಣ ಲಿಂಗನಮಕ್ಕಿ ಅಣೆಕಟ್ಟಿನಿಂದ ಶರಾವತಿ ಹಾಗೂ ತುಂಗಾಭದ್ರಾ ನದಿಯಿಂದ ನೀರು ತರುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು.

ಜೂನ್ 12 ರಂದು ಈ ಸಂಬಂಧ ನಡೆದ ಸಭೆಯಲ್ಲಿ 18 ಟಿಎಂಸಿ ಅಡಿಗಳಷ್ಟು ನೀರು ತರಲು ಬೇಕಾದ ರೂಪುರೇಷೆ ಸಿದ್ಧಪಡಿಸಿ ವರದಿ ನೀಡುವಂತೆ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ಸೂಚಿಸಿದ್ದರು.

ಲಿಂಗನಮಕ್ಕಿಯಿಂದ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತಂದರೆ, ಬೆಂಗಳೂರಷ್ಟೇ ಅಲ್ಲ, ಚಿಕ್ಕಬಳ್ಳಾಪುರ, ಕೋಲಾರ ಭಾಗಗಳಿಗೂ ಕುಡಿಯುವ ನೀರು ಒದಗಿಸಬಹುದು ಎಂದು ನೀರಾವರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ಶರಾವತಿ ನದಿಗೆ ಅಡ್ಡಲಾಗಿ 1964 ರಲ್ಲಿ ಲಿಂಗಮನಕ್ಕಿ ಅಣೆಕಟ್ಟು ನಿರ್ಮಾಣಗೊಂಡಿದ್ದು, ಅಣೆಕಟ್ಟಿನಲ್ಲಿ ಗರಿಷ್ಠ 151 ಟಿಎಂಸಿ ನೀರು ಸಂಗ್ರಹಿಸಬಹುದಾಗಿದೆ. ಈ ಅಣೆಕಟ್ಟು 2.4 ಕಿ.ಮೀ. ಉದ್ದವಿದ್ದು, 1819 ಅಡಿ ಎತ್ತರವಿದೆ. 4368 ಮಿಲಿಯನ್ ಮೀಟರ್ ಕ್ಯೂಬ್ ನೀರು ಸಂಗ್ರಹ ಸಾಮರ್ಥ್ಯವನ್ನು ಜಲಾಶಯ ಹೊಂದಿದೆ. 

ಈ ಯೋಜನೆಗೆ ಸಾಗರ ತಾಲೂಕಿನಲ್ಲಿ ವಿರೋಧ ವ್ಯಕ್ತವಾಗಿದೆ. ಪರಿಸರಾಸಕ್ತರು ಹಾಗೂ ಸಾಗರ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ. ಈ ಬಾರಿ ಮಳೆ ಕೊರತೆ, ನೀರಿನ ಸಮಸ್ಯೆಯನ್ನು ತಾಲೂಕಿನ ಜನರು ಅನುಭವಿಸುತ್ತಿದ್ದಾರೆ. ಸಾಗರ ಪಟ್ಟಣಕ್ಕೆ 24 ತಾಸು ನೀರು ಒದಗಿಸುವ ಯೋಜನೆ ಕಾರ್ಯರೂಪಕ್ಕೆ ಬಂದಿದ್ದರೂ ತಾಂತ್ರಿಕ ಅಡಚಣೆಯಿಂದ ನೆನೆಗುದಿಗೆ ಬಿದ್ದಿದೆ. ಕಾರ್ಗಲ್ ಸಮೀಪದ ಪಂಪ್ ಹಾಳಾಗುತ್ತಿದ್ದು ಹತ್ತಾರು ಸಮಸ್ಯೆಗಳಿವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಹ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಹೀಗೆ ಈ ಭಾಗದಲ್ಲಿಯೇ ಜನರೇ ನೀರಿನ ಸಮಸ್ಯೆ ಎದುರಿಸುತ್ತಿರುವಾಗ ಇಲ್ಲಿನ ನೀರನ್ನು ಬೆಂಗಳೂರಿಗೆ ಕೊಡುವುದು ಸರಿಯಲ್ಲ ಎಂದು ಇಲ್ಲಿನ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ಲಿಂಗನಮಕ್ಕಿಯಿಂದ 30 ಟಿಎಂಸಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡುವ ಹೋಗುವ ಯೋಜನೆಯನ್ನು ರೂಪಿಸಿತ್ತು. ಆ ಸಂಬಂಧ ವಿಸ್ತೃತ ವರದಿ ನೀಡಲು ಈಗಿನ ಮೈತ್ರಿ ಸರ್ಕಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿತ್ತು. 

ಯುಎನ್‍ಐ ಕನ್ನಡ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಸಾಗರ ಶಾಸಕ ಹೆಚ್.ಹಾಲಪ್ಪ, ಸ್ಥಳೀಯ ಜಲಮೂಲ ಸಂರಕ್ಷಣೆಯ ಬದಲು ನೂರಾರು ಕಿ.ಮೀ ದೂರದ ನೀರಿನ ಬಳಕೆಯ ಯೋಜನೆ ಹಾಸ್ಯಾಸ್ಪದ ಎನ್ನುವುದು ನಮ್ಮನ್ನು ಆಳುವವರಿಗೆ ಏಕೆ ಅರ್ಥವಾಗುವುದಿಲ್ಲ. ಇಂತಹ ಯೋಜನೆಗಳನ್ನು ಪ್ರಬಲವಾಗಿ ವಿರೋಧಿಸುವ ಮನೋಭಾವ ಹೆಚ್ಚಾಗಬೇಕು ಎಂದರು.
Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp