ಅತ್ಯುತ್ತಮ ಫಲಿತಾಂಶಕ್ಕೆ ಶಿಕ್ಷಕರ ಪಣ; ಸರ್ಕಾರಿ ಶಾಲೆಗಳ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರಾತ್ರಿ ಕೂಡ ಕ್ಲಾಸ್!

ಹತ್ತನೇ ತರಗತಿ, ಪಿಯುಸಿ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟ. ಈ ಬಾರಿ ಮಾರ್ಚ್ 21ರಿಂದ...

Published: 13th March 2019 12:00 PM  |   Last Updated: 13th March 2019 10:27 AM   |  A+A-


SSLC students attend a night class at a government school in Bogase village in Chikkamagaluru district.

ಚಿಕ್ಕಮಗಳೂರಿನ ಬೊಗಸೆ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ರಾತ್ರಿ ವೇಳೆ ಅಧ್ಯಯನದಲ್ಲಿ ತೊಡಗಿರುವ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳು

Posted By : SUD SUD
Source : The New Indian Express
ಬೆಂಗಳೂರು: ಹತ್ತನೇ ತರಗತಿ, ಪಿಯುಸಿ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಘಟ್ಟ. ಈ ಬಾರಿ ಮಾರ್ಚ್ 21ರಿಂದ ಎಸ್ಎಸ್ ಎಲ್ ಸಿ  ಪರೀಕ್ಷೆ ಆರಂಭವಾಗುತ್ತಿದೆ. ಹೀಗೆಂದು ಸರ್ಕಾರಿ ಶಾಲೆಯ ಶಿಕ್ಷಕರು ಹತ್ತನೇ ತರಗತಿ ಮಕ್ಕಳನ್ನು ಹಗಲು-ರಾತ್ರಿ ಶಾಲೆಯಲ್ಲಿ ಕುಳ್ಳಿರಿಸಿ ಓದಿಸಿ ತಮ್ಮ ಶಾಲೆಯ ಫಲಿತಾಂಶ ಖಾಸಗಿ ಮತ್ತು ಅನುದಾನಿತ ಶಾಲೆಗಳ ಫಲಿತಾಂಶ ಸಮನಾಗಿ ಬರಬೇಕು ಎಂದು ಪಣತೊಟ್ಟಿದ್ದಾರೆ.

ತಡರಾತ್ರಿಯವರೆಗೆ ಮಕ್ಕಳನ್ನು ಕುಳ್ಳಿರಿಸಿ ಓದಿಸಿ ಬೆಳಗ್ಗೆ ಬೇಗನೆ ಎಬ್ಬಿಸುವ ಕೆಲಸ ಅಲ್ಲಲ್ಲಿ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಕ-ಶಿಕ್ಷಕಿಯರು ಮನೆ ಮನೆಗೆ ಬೆಳ್ಳಂಬೆಳಗ್ಗೆ ಹೋಗಿ ಮಕ್ಕಳಿಗೆ ಓದುವಂತೆ ಪ್ರೇರೇಪಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸಾಯಂಕಾಲದವರೆಗೆ ಶಿಕ್ಷಕರು ತರಗತಿಯನ್ನು ತೆಗೆದುಕೊಂಡು ಬೆಳಗ್ಗೆ ಕೂಡ ಬೇಗನೆ ಶಾಲೆಗೆ ಕರೆತರುತ್ತಾರೆ.

ಬೆಂಗಳೂರಿನ ಹೆಬ್ಬಾಳದ ಸರ್ಕಾರಿ ಹೈಸ್ಕೂಲ್ ನ ಶಿಕ್ಷಕ ಮಂಜುನಾಥ್, ಶಾಲಾ ಅವಧಿ ಮುಗಿದ ನಂತರವೂ ನಾವು ತರಗತಿಗಳನ್ನು ತೆಗೆದುಕೊಳ್ಳುತ್ತೇವೆ. ಸಾಯಂಕಾಲ 6.45ರವರೆಗೆ ಶಾಲೆ ತೆಗೆದುಕೊಳ್ಳುತ್ತೇವೆ. ಇದಕ್ಕೆ ಪೋಷಕರ ಒಪ್ಪಿಗೆ ಕೂಡ ಇದೆ. ಹೀಗೆ ಮಕ್ಕಳಿಗೆ ಹೇಳಿಕೊಡುವ ಮುನ್ನ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣೆ ಸಮಿತಿಯ ಜೊತೆ ಸಭೆ ನಡೆಸಿ ಪೋಷಕರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಂಡೆವು. ಪೋಷಕರ ಒಪ್ಪಿಗೆಯಿರುವುದು ನಮಗೆ ಖುಷಿಯೇ ಎನ್ನುತ್ತಾರೆ. ಬೆಂಗಳೂರಿನ ರಾಜಾನುಕುಂಟೆಯ ಸರ್ಕಾರಿ ಶಾಲೆಯಲ್ಲಿ 48 ಮಕ್ಕಳಿದ್ದು ಪ್ರತಿ ಶಿಕ್ಷಕರು 10 ಮಕ್ಕಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ ಎಂದರು.

ಇಂಗ್ಲಿಷ್ ಪ್ರಾಧ್ಯಾಪಕ ವೆಂಕಟೇಶ್ ಕೆ ಎಂ, ಶಾಲಾ ಅವಧಿ ಮುಗಿದ ನಂತರ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುತ್ತೇವೆ, ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಮತ್ತು ಸಾಯಂಕಾಲ ಸ್ನ್ಯಾಕ್ಸ್ ಕೊಡುತ್ತೇವೆ ಎಂದರು. ವಿದ್ಯಾನಗರದ ಸರ್ಕಾರಿ ಹೈಸ್ಕೂಲ್ ನ ಕನ್ನಡ ಶಿಕ್ಷಕ ಗೋಪಾಲಕೃಷ್ಣ ಜಿ ಕೆ, ನಮ್ಮಲ್ಲಿ ಹತ್ತನೇ ತರಗತಿಯಲ್ಲಿ ಸುಮಾರು 60 ಮಕ್ಕಳಿದ್ದು ಕಳೆದ ವರ್ಷ ಹತ್ತನೇ ತರಗತಿಯಲ್ಲಿ ಶೇಕಡಾ 93ರಷ್ಟು ಮತ್ತು ಈ ವರ್ಷ ಶೇಕಡಾ 100ರಷ್ಟು ಫಲಿತಾಂಶ ನಿರೀಕ್ಷಿಸುತ್ತಿದ್ದೇವೆ ಎಂದರು.

ಇನ್ನು ಚಿಕ್ಕಮಗಳೂರಿನ ಬೊಗಸೆ ಕುಗ್ರಾಮದ ಸರ್ಕಾರಿ ಹೈಸ್ಕೂಲ್ ನಲ್ಲಿ ಶಿಕ್ಷಕರು ಕಳೆದ ಮೂರು ತಿಂಗಳಿನಿಂದ ಮಕ್ಕಳಿಗೆ ರಾತ್ರಿ ಶಾಲೆಯನ್ನು ನಡೆಸುತ್ತಿದ್ದಾರೆ. ಕಳೆದ ವರ್ಷ ನಮ್ಮ ಶಾಲೆಗೆ ಶೇಕಡಾ 100ರಷ್ಟು ಫಲಿತಾಂಶ ಬಂದಿದ್ದು ಈ ವರ್ಷ ಅದನ್ನು ಕಾಪಾಡಬೇಕು, ಇದಕ್ಕಾಗಿ ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಎಸ್ಎಸ್ಎಲ್ ಸಿ ಮಕ್ಕಳಿಗೆ ತರಗತಿ ತೆಗೆದುಕೊಳ್ಳುತ್ತೇವೆ ಎಂದರು.

ಗ್ರಾಮಗಳಲ್ಲಿರುವ ಮಕ್ಕಳು 8ರಿಂದ 10 ಕಿಲೋ ಮೀಟರ್ ನಡೆದುಕೊಂಡು ಬರುತ್ತಾರೆ. ಪರೀಕ್ಷೆ ಮುಗಿಯುವವರೆಗೆ ಮಕ್ಕಳಿಗೆ ಶಾಲೆಯಲ್ಲಿ ಇರಲು ಸೌಲಭ್ಯ ಮಾಡಿಕೊಡುತ್ತೇವೆ. ರಾತ್ರಿ ಹೊತ್ತಿನಲ್ಲಿ ಪ್ರತಿದಿನ ಒಬ್ಬರಂತೆ ಒಬ್ಬ ವಿದ್ಯಾರ್ಥಿಯ ಪೋಷಕರು ಇರಬೇಕು. ಬೆಳಗ್ಗೆ 4 ಗಂಟೆಗೆ ಯೋಗ ತರಗತಿ ಮಾಡುತ್ತೇವೆ. ನಂತರ 5.30ರ ನಂತರ ಓದು ಆರಂಭವಾಗುತ್ತದೆ ಎಂದು ಹೇಳಿದರು.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp