ಬಿಜೆಪಿ ನಾಯಕನಿಗೆ ತೋಡಿದ್ದ ಖೆಡ್ಡಾದಲ್ಲಿ ತಾನೇ ಬಿದ್ದ ಟಿ.ವಿ ಚಾನಲ್ ಮುಖ್ಯಸ್ಥ!

ರಾಜ್ಯ ಬಿಜೆಪಿ ನಾಯಕನಿಗೆ ಬೆದರಿಕೆ ಹಾಕಿ ಹಣ ಪಡೆಯಲು ಯತ್ನಿಸುತ್ತಿದ್ದ ಸುದ್ದಿ ವಾಹಿನಿಯೊಂದರ ಮುಖ್ಯಸ್ಥನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ನಾಯಕ ಅರವಿಂದ ಲಿಂಬಾವಳಿ
ಬಿಜೆಪಿ ನಾಯಕ ಅರವಿಂದ ಲಿಂಬಾವಳಿ
ಬೆಂಗಳೂರು: ರಾಜ್ಯ ಬಿಜೆಪಿ ನಾಯಕನಿಗೆ ಬೆದರಿಕೆ ಹಾಕಿ ಹಣ ಪಡೆಯಲು ಯತ್ನಿಸುತ್ತಿದ್ದ ಸುದ್ದಿ ವಾಹಿನಿಯೊಂದರ ಮುಖ್ಯಸ್ಥನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 
ಫೋಕಸ್ ಟಿ.ವಿಯ ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ಕಮ್ಮಾರ್ ಬಂಧಿತ ಆರೋಪಿ. ಸಿಸಿಬಿಯ ಡೆಪ್ಯುಟಿ ಕಮಿಷನರ್ ನೀಡಿರುವ ಮಾಹಿತಿಯ ಪ್ರಕಾರ ಅರವಿಂದ ಲಿಂಬಾವಳಿಯ ಸ್ನೇಹಿತ ಗಿರೀಶ್ ಭಾರಧ್ವಾಜ್ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. "ಹೇಮಂತ್ ಕಮ್ಮಾರ್ ಎಂಬ ವ್ಯಕ್ತಿ ನಿರಂತರವಾಗಿ ತನಗೆ ವಾಟ್ಸ್ ಆಪ್ ಕರೆ ಮಾಡುತ್ತಿದ್ದು, ಬಿಜೆಪಿ ನಾಯಕನ ಆಡಿಯೋ ಹಾಗೂ ಖಾಸಗಿ ವಿಡಿಯೋಗಳು ತನ್ನ ಬಳಿ ಇದೆ, ಇದನ್ನು ಪ್ರಸಾರ ಮಾಡದೇ ಇರುವುದಕ್ಕಾಗಿ ತನಗೆ 50 ಲಕ್ಷ ನೀಡಬೇಕೆಂದು ಬೆದರಿಕೆ ಹಾಕುತ್ತಿದ್ದ" ಎಂದು ದೂರಿನಲ್ಲಿ ತಿಳಿಸಲಾಗಿದೆ. 
ತನ್ನ ಬಳಿ ಇರುವ ವಿಡಿಯೋವನ್ನು ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳು ಸಹ ಕೇಳುತ್ತಿದ್ದಾರೆ. ಒಂದು ವೇಳೆ ಬಿಜೆಪಿ ನಾಯಕ ತಾನು ಕೇಳಿದಷ್ಟು ಹಣ ನೀಡದೇ ಇದ್ದಲ್ಲಿ ಅದನ್ನು ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳಿಗೆ ನೀಡುವುದಾಗಿ ಹೇಮಂತ್ ಕಮ್ಮಾರ್ ಹೇಳಿದ್ದ ಎಂದು ಗಿರೀಶ್ ಭಾರಧ್ವಾಜ್ ಆರೋಪಿಸಿದ್ದಾರೆ. 
ಇದು ಗಂಭೀರವಾದ ಪ್ರಕರಣ ಆದ್ದರಿಂದ ಸಿಸಿಬಿಗೆ ಇದನ್ನು ವರ್ಗಾಯಿಸಲಾಯಿತು. ಅಂತಿಮವಾಗಿ ಚಾಲುಕ್ಯ ಹೋಟೆಲ್ ನಲ್ಲಿ ಹೇಮಂತ್ ನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ನೀಡಲಾಗಿದೆ. ಹೇಮಂತ್ ನಿಂದ ಬೆದರಿಕೆಗೆ ಒಳಗಾದವರು ಬೇರೆ ಯಾರಾದರೂ ಇದ್ದರೆ ಅಂತಹವರು ಸಿಸಿಬಿ ಪೊಲೀಸರನ್ನು ಸಂಪರ್ಕಿಸಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com