ಬರ ಪರಿಹಾರ ಕಾಮಗಾರಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ: ರಾಜ್ಯ ಸರ್ಕಾರ ಗಂಭೀರ ಆರೋಪ

ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ತಣ್ಣಗಾದ ನಂತರ ಕೊನೆಗೂ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಕಾವು ತಣ್ಣಗಾದ ನಂತರ ಕೊನೆಗೂ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಬರ ಸಮರಕ್ಕೆ ಸಜ್ಜಾಗಿದೆ.
ನಿನ್ನೆ ಸಭೆ ಕರೆದಿದ್ದ ರಾಜ್ಯ ಸಚಿವ ಸಂಪುಟ, ಗ್ರಾಮೀಣ ಭಾಗಗಳಿಂದ ಜನರು ವಲಸೆ ಹೋಗುವುದನ್ನು ತಡೆಯಲು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕೆಲಸಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಕೇಂದ್ರದತ್ತ ಬೆರಳು ತೋರಿಸಿದೆ.
ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಮೊದಲ ಬಾರಿಗೆ ಸಭೆ ಸೇರಿದ ರಾಜ್ಯ ಸಚಿವ ಸಂಪುಟ ಖಾರಿಫ್ ಮತ್ತು ರಬಿ ಋತುವಿನಲ್ಲಿ ಆದ ನಷ್ಟಕ್ಕೆ ಪರಿಹಾರ ನೀಡಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಕೂಡ ಅಸಹನೆ ವ್ಯಕ್ತಪಡಿಸಿತು.
ಸಭೆಯ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ, ರಾಜ್ಯದ 1,324 ಗ್ರಾಮಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಗಳ ಮೂಲಕ ಒದಗಿಸಲಾಗಿದ್ದು, ಜಾನುವಾರುಗಳಿಗೆ ಮೇವು ಸಾಮಾನ್ಯ ಬೆಲೆಗೆ ದೊರಕಲು 150 ಮೇವು ಬ್ಯಾಂಕುಗಳನ್ನು ತೆರೆಯಲಾಗಿದೆ ಮತ್ತು 12 ಜಾನುವಾರು ಆಶ್ರಯಗಳನ್ನು ತೆರೆಯಲಾಗಿದೆ ಎಂದರು.
ಬರಗಾಲ ಪರಿಹಾರ ಕಾರ್ಯಗಳಿಗೆ ಹಣದ ಕೊರತೆಯಿಲ್ಲ ಎಂದು ಪ್ರತಿಪಾದಿಸಿದ ಸಚಿವರು, ಯುದ್ಧೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮೇ 15ರಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಬರಗಾಲ ಪರಿಹಾರ ಕೆಲಸಗಳ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ ಎಂದು ತಿಳಿಸಿದರು.
ನಾವು ಕೇಂದ್ರ ಸರ್ಕಾರದ ಬಳಿ ಅನುದಾನ ಕೇಳುತ್ತಿಲ್ಲ. ಅದು 15 ದಿನಗಳೊಳಗೆ ಪಾವತಿಸಬೇಕಾದ ಶಾಸನಬದ್ಧ ಪಾವತಿಯಾಗಿದೆ. ಆದರೆ ಹಲವು ತಿಂಗಳುಗಳು ಕಳೆದ ನಂತರವೂ ಕೇಂದ್ರ ಸರ್ಕಾರ 1,697 ಕೋಟಿ ರೂಪಾಯಿಗಳನ್ನು ಬಡ ಜನರು ಮಾಡಿದ ಕೆಲಸಕ್ಕೆ ಪಾವತಿ ಮಾಡಲು ನೀಡಬೇಕಾದ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಇದೀಗ ರಾಜ್ಯ ಸರ್ಕಾರವೇ ತನ್ನ ಖಜಾನೆಯಿಂದ ಭರಿಸಲಿದೆ ಎಂದರು.
ಖಾರಿಫ್ ಋತುವಿನ ನಷ್ಟವನ್ನು ಭರಿಸಲು ಕೇಂದ್ರ ಸರ್ಕಾರ 949 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು, ಕಳೆದ ಅಕ್ಟೋಬರ್ ನಲ್ಲಿ ರಾಜ್ಯ ಸರ್ಕಾರ ಮಾಡಿರುವ ಮನವಿಗೆ ಇದೀಗ ಹಣ ಬಿಡುಗಡೆ ಮಾಡಿದೆ. ಆದರೆ ಕೇಂದ್ರ ಸರ್ಕಾರ ಇದೇ ಸಮಯದಲ್ಲಿ ಮಹಾರಾಷ್ಟ್ರಕ್ಕೆ 4,700 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com