ಮಂಡ್ಯದಲ್ಲಿ ರೈಲು ಚಾಲನೆ ವಿಚಾರದಲ್ಲಿ ನಾನು ಯಾವ ತಪ್ಪು ಮಾಡಿಲ್ಲ:ಸುಮಲತಾ ಅಂಬರೀಷ್ 

10 ಮೀಟರ್ ಹಿಂದೆ ನಿಂತಿದ್ದ ರೈಲನ್ನು ತಾನಿದ್ದ ಜಾಗಕ್ಕೆ ಕರೆಸಿಕೊಂಡು ಮಂಡ್ಯ ರೈಲು ನಿಲ್ದಾಣದಲ್ಲಿ ಮೆಮೋ ರೈಲಿನ ಮಹಿಳಾ ವಿಶೇಷ ಬೋಗಿಯನ್ನು ಉದ್ಘಾಟಿಸಿದರು ಎಂದು ಇತ್ತೀಚೆಗೆ ಆದ ವಿವಾದದ ಬಗ್ಗೆ ಸ್ವತಃ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟನೆ ನೀಡಿದ್ದಾರೆ.
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್

ಮಂಡ್ಯ: 10 ಮೀಟರ್ ಹಿಂದೆ ನಿಂತಿದ್ದ ರೈಲನ್ನು ತಾನಿದ್ದ ಜಾಗಕ್ಕೆ ಕರೆಸಿಕೊಂಡು ಮಂಡ್ಯ ರೈಲು ನಿಲ್ದಾಣದಲ್ಲಿ ಮೆಮೋ ರೈಲಿನ ಮಹಿಳಾ ವಿಶೇಷ ಬೋಗಿಯನ್ನು ಉದ್ಘಾಟಿಸಿದರು ಎಂದು ಇತ್ತೀಚೆಗೆ ಆದ ವಿವಾದದ ಬಗ್ಗೆ ಸ್ವತಃ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟನೆ ನೀಡಿದ್ದಾರೆ.


ಈ ವಿಷಯದಲ್ಲಿ ನನ್ನದೇನು ತಪ್ಪಿಲ್ಲ, ರೈಲ್ವೆ ಅಧಿಕಾರಿಗಳು ಪ್ಲಾಟ್ ಫಾರ್ಮ್ ನಲ್ಲಿ ಮಹಿಳಾ ಬೋಗಿ ಬಂದು ನಿಲ್ಲುವ ಸ್ಥಳದಲ್ಲಿ ನಮ್ಮನ್ನು ಕರೆದುಕೊಂಡು ಹೋಗಿ ನಿಲ್ಲಿಸಿ ಇಲ್ಲಿಗೆ ರೈಲು ಬಂದು ನಿಲ್ಲುತ್ತದೆ ಎಂದು ಹೇಳಿದರು. ರೈಲು ಬಂದು ನಾವು ನಿಂತಿದ್ದ ಕಡೆಯಿಂದ ಹತ್ತು ಹೆಜ್ಜೆ ಹಿಂದೆ ಹೋಗಿ ನಿಂತಿತು. ಅದು ಏಕೆಂದರೆ, ಪ್ಲಾಟ್ ಫಾರ್ಮ್ ನಲ್ಲಿ ಪ್ರಯಾಣಿಕರು ಇಳಿಯುವಾಗ ಅಲ್ಲಿ ನೂಕುನುಗ್ಗಲು ಉಂಟಾಗಿ ಪ್ರಯಾಣಿಕರಿಗೆ ಇಳಿಯಲು ಕಷ್ಟವಾಗಬಾರದು ಎಂದು. ಇದು ಲೋಕೋ ಪೈಲಟ್ ತೆಗೆದುಕೊಂಡ ನಿರ್ಧಾರವಾಗಿತ್ತು.


ಆದರೆ ರೈಲನ್ನು ನಿಲ್ಲಿಸಿದ್ದಾಗ ಕೊನೆ ಬೋಗಿಯಲ್ಲಿದ್ದ ಪ್ರಯಾಣಿಕರಿಗೆ ಇಳಿಯಲು ಪ್ಲಾಟ್ ಫಾರ್ಮ್ ಇರಲಿಲ್ಲ.  ಹಾಗಾಗಿ ರೈಲನ್ನು ಹತ್ತು ಹೆಜ್ಜೆ ಮುಂದೆ ನಾವು ನಿಂತಿದ್ದ ಜಾಗಕ್ಕೆ ತಂದು ನಿಲ್ಲಿಸಿದರು, ಇದು ಅಲ್ಲಿ ನಡೆದ ವಾಸ್ತವ ಸಂಗತಿ. ಇದು ನಡೆದಾಗ ಅಲ್ಲಿ ಅಧಿಕಾರಿಗಳು ಕೂಡ ಇದ್ದರು ಎಂದರು.


ನನ್ನ ವಿರುದ್ಧ ಮಾಧ್ಯಮಗಳಲ್ಲಿ ಬರಬಾರದು ಎಂದು ನಾನು ಹೇಳುವುದಿಲ್ಲ, ಆದರೆ ನಾನು ತಪ್ಪು ಮಾಡಿದಾಗ ಬರಲಿ, ಈ ವಿಷಯದಲ್ಲಿ ನಾನೇನು ತಪ್ಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.


ಆರ್ ಸಿಇಪಿ ಒಪ್ಪಂದದ ಬಗ್ಗೆ ಕೇಳಿದಾಗ, ಈ ವಿಷಯದಲ್ಲಿ ನಾನು ಯಾವತ್ತಿಗೂ ರೈತರ ಪರವಾಗಿಯೇ ಇದ್ದೇನೆ. ಕಳೆದ ಚುನಾವಣೆ ಟೈಮಿನಿಂದ ಎಲ್ಲಿದ್ದೀಯಪ್ಪಾ, ಎಲ್ಲಿದ್ದೀಯಮ್ಮಾ ಎಂಬ ಪದಗಳನ್ನು ಜೋರಾಗಿ ಕೇಳಿಕೊಂಡು ಬಂದಿದ್ದು ಅದು ಯಾರಿಗೆ ಅನ್ವಯವಾಗುತ್ತದೆಯೋ, ಅವರಿಗೆ ಆಗುತ್ತದೆ. ನಾನು ಪ್ರಚಲಿತ ಸಮಸ್ಯೆಗಳು, ವಿದ್ಯಾಮಾನಗಳ ಬಗ್ಗೆ ತಿಳಿದುಕೊಂಡು ಸ್ಪಂದಿಸುತ್ತಾ ಬಂದಿದ್ದೇನೆ, ಕೆಲಸ ಮಾಡದೆ ಸುಮ್ಮನೆ ಕುಳಿತಿಲ್ಲ. 


ಆರ್ ಸಿಇಪಿ ಒಪ್ಪಂದದ ವಿವರಣೆ ಯಾರಲ್ಲಾದರೂ ಇದ್ದರೆ ನನಗೆ ಕೊಡಿ. ಇದರ ಬಗ್ಗೆ ನಾನು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳ ಬಳಿ ಕೇಳಿದೆ, ಮಾಹಿತಿ ನಮ್ಮ ಬಳಿ ಇಲ್ಲ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರದಿಂದಲೇ ಮಾಹಿತಿ ಬಂದಿಲ್ಲ. ಹೀಗಾಗಿ ಯಾವುದೇ ವಿಷಯ ಬಂದಾಗ ನಮ್ಮ ಕೆಲಸ ಏನಿದೆ ಅದನ್ನು ಮಾಡಿಕೊಂಡು ಹೋಗುತ್ತಿರುತ್ತೇವೆ. ನಾವು ಏನು ಕೆಲಸ ಮಾಡುತ್ತೇವೆ ಎಂದು ಪ್ರತ್ಯೇಕವಾಗಿ ಸಾಕ್ಷಿ ಕೊಡಲು ಸಾಧ್ಯವಾಗುವುದಿಲ್ಲ ಎಂದು ಸಮಲತಾ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com