ಮಂಡ್ಯ: ಪ್ರೀತಿಸಿ ವಿವಾಹವಾದ ನವ ವರನನ್ನು ಕೊಲೆ ಮಾಡಿ ನದಿಗೆಸೆದರು!

ಹುಡುಗಿಯ ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಯುವಕನನ್ನು ಕೊಲೆ ಮಾಡಿ ನದಿಗೆಸೆದಿರುವ ಪ್ರಕರಣ ಮಂಡ್ಯ ತಾಲ್ಲೂಕಿನ ಸಿದ್ದಯ್ಯನ ಕೊಪ್ಪಲಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಹುಡುಗಿಯ ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಯುವಕನನ್ನು ಕೊಲೆ ಮಾಡಿ ನದಿಗೆಸೆದಿರುವ ಪ್ರಕರಣ ಮಂಡ್ಯ ತಾಲ್ಲೂಕಿನ ಸಿದ್ದಯ್ಯನ ಕೊಪ್ಪಲಿನಲ್ಲಿ ನಡೆದಿದೆ.

ಸಿದ್ಧಯ್ಯನಕೊಪ್ಪಲು ಗ್ರಾಮದ ನಿವಾಸಿ ಮಂಜು (29) ಎಂಬಾತನನ್ನೇ ಕೊಲೆ ಮಾಡಿ ನದಿಗೆಸೆಯಲಾಗಿದ್ದು. ಹಾಸನ ಜಿಲ್ಲೆ ಹೊಳೆನರಸೀಪುರದ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದೆ. ಮಂಜು ಮತ್ತು ಅರ್ಚನಾ ಇಬ್ಬರೂ ಸಹ ಸಿದ್ದಯ್ಯನಕೊಪ್ಪಲಿನ ನಿವಾಸಿಗಳೇ ಆಗಿದ್ದು ಕಳೆದ 7 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಪೋಷಕರ ವಿರೋಧವಿತ್ತು, ಅರ್ಚನಾ ಪೋಷಕರ ವಿರೋಧದ ನಡುವೆಯೂ ಕಳೆದ ಸೆ.18 ರಂದು ಶಿವಮೊಗ್ಗದ ಶಿಕಾರಿಪುರದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅರ್ಚನಾಳನ್ನು ಮಂಜು ಮದ್ವೆಮಾಡಿಕೊಂಡಿದ್ದರು.

ಆದರೂ ಇವರಿಬ್ಬರ ಪ್ರೇಮವಿವಾಹವನ್ನು ಮುರಿದು ಅರ್ಚನಾ ಪೋಷಕರು ಮದ್ದೂರಿನ ರುದ್ರಾಕ್ಷಿಪುರದ ಕಿರಣ್ ಎಂಬುವರ ಜೊತೆ ನಿಶ್ಚಿತಾರ್ಥವನ್ನೂ ಮಾಡಿದ್ದರು. ನಿಶ್ಚಿತಾರ್ಥದ ಬಳಿಕ ಅದ್ದೂರಿ ಮದುವೆಗೆ ಸಿದ್ದತೆ ಮಾಡಿಕೊಂಡಿದ್ದ ಅರ್ಚನಾ-ಕಿರಣ್ ಪೋಷಕರು ಅಕ್ಟೋಬರ್.23-24 ರಂದು ಮದವೆ ದಿನಾಂಕ ನಿಗಧಿ ಮಾಡಿದ್ದರು. 

ಈ ನಡುವೆ ಮನೆಯಿಂದ ಓಡಿ ಬಂದ ಅರ್ಚನಾ ಮತ್ತು ಮಂಜು ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.ಈ ವೇಳೆ ಅರ್ಚನಾಳಿಂದ ಪೋಷಕರು ಆಸ್ತಿಪತ್ರಕ್ಕೆ ಸಹಿ ಮಾಡಿಸಿಕೊಂಡು ನಿನ್ನಂತೆ ನೀ ಬದುಕು, ಮರಳಿ ಬರಬೇಡ ಅಂತ ತಿಳಿಸಿದ್ದರು. ಆದರೆ ಇದರ ನಡುವೆ ಇದೇ ನವೆಂಬರ್.9 ರ ಸಂಜೆ ಹಾಲು ತರೋದಾಗಿ ಹೇಳಿ ಹೊರಹೋದ ಮಂಜು ನಾಪತ್ತೆಯಾಗಿದ್ದರು .ಪತಿ ಕಾಣೆಯಾದ ಬಗ್ಗೆ ಅರ್ಚನಾರಾಣಿ ಪಶ್ಚಿಮಠಾಣಾ ಪೊಲೀಸರಿಗೆ ದೂರು ನೀಡಿದ್ದರು.

ಇದರ ನಡುವೆ ನೆನ್ನೆ ಹೊಳೆನರಸೀಪುರ ಬಳಿ ಹೇಮಾವತಿ ನದಿಯಲ್ಲಿ ಅಪರಿಚಿತ ಶವಪತ್ತೆಯಾದ ಬಗ್ಗೆ ಮಂಡ್ಯ ಪೋಲಿಸರಿಗೆ ಮಾಹಿತಿ ಸಿಕ್ಕಿತ್ತು, ಹೊಳೆನರಸೀಪುರ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಮಂಡ್ಯ ಮೂಲದ ವ್ಯಕ್ತಿಯ ಶವ ಇದು ಎಂಬುದು ಪೊಲೀಸರಿಗೆ ಗೊತ್ತಾಗಿತ್ತು. ಶವದ ಮೇಲಿನ ಚಹರೆಯ ಮೇರೆಗೆ ಅರ್ಚನಾರಿಗೆ ಮತ್ತು ಮಂಜು ಪೋಷಕರಿಗೆ ಮಂಡ್ಯಪೊಲೀಸರು ಮಾಹಿತಿ ನೀಡಿದ್ದರು. ಶವಪರಿಶೀಲಿಸಿದಾಗ ಎರಡು ಕೈಗಳಲ್ಲಿದ್ದ ಅಚ್ಚೆಯಿಂದ ಮಂಜುದೇ ಶವ ಎಂದು ಪತ್ನಿ ಅರ್ಚನಾ ಗುರುತಿಸಿದ್ದಾರೆ.

ಕುತ್ತಿಗೆ ಕುಯ್ದು ಕೊಲೆಮಾಡಿದ ಬಳಿಕ ದುಷ್ಕರ್ಮಿಗಳು ದೇಹಕ್ಕೆ ಹಗ್ಗ ಬಿಗಿದು ಮಂಜು ದೇಹ ತೇಲದಂತೆ ಕಲ್ಲು ಕಟ್ಟಿ ನದಿಗೆ ಎಸೆದಿದ್ದರು. ಆದರೂ ಮಂಜು ದೇಹ ನೀರಿನಿಂದ ಮೇಲೆದ್ದು ಬಂದಿರುವುದರಿಂದ ಹತ್ಯೆ ರಹಸ್ಯ ಬಯಲಾಗಿದೆ.

ಮೃತ ಮಂಜು ಪೋಷಕರು ಅರ್ಚನಾ ಕುಟುಂಬಸ್ಥರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದು ಅರ್ಚನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕಿರಣ್ ಎಂಬುವನೇ ಮಂಜು ಕೊಲೆಮಾಡಿದ್ದಾನೆಂದು ಆರೋಪಿಸಿ ದೂರು ನೀಡಿದ್ದಾರೆ.

ಪ್ರೀತಿಸಿ ಮದ್ವೆಯಾದ ಬಳಿಕ ಅವಳ ಪಾಡಿಗೆ ಅವಳನ್ನು ಬಿಟ್ಟಿದ್ವಿ, ಮಂಜು ಕೊಲೆಗೂ ನಮ್ಮ ಕುಟುಂಬಕ್ಕೂ ಸಂಬಂಧವಿಲ್ಲ ಮಗಳಿಗೆ ನಿಶ್ಚಯಿದ್ದ ವರ ಕಿರಣ್ ಕೂಡ ಕೊಲೆಮಾಡುವ ಕೆಲಸಕ್ಕೆ ಕೈಹಾಕುವಂತವನಲ್ಲ ಎಂದು ಅರ್ಚನಾ ತಂದೆ-ತಾಯಿ ದೇವರಾಜು-ಯಶೋಧ ಆರೋಪವನ್ನು ತಳ್ಳಿಹಾಕಿದ್ದಾರೆ. ಮಂಜು-ಅರ್ಚನಾರ ಊರಾದ ಸಿದ್ದಯ್ಯನಕೊಪ್ಪಲಿನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪಶ್ಚಿಮಠಾಣಾ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com