ಆಶಾ ಕಾರ್ಯಕರ್ತರ ಗೌರವಧನ 500 ರೂ. ಹೆಚ್ಚಳ, ನೆರೆ ಪರಿಹಾರಕ್ಕಾಗಿ ಪೂರಕ ಬಜೆಟ್ ಮಂಡನೆಗೆ ಸಚಿವ ಸಂಪುಟ ತೀರ್ಮಾನ

ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಮಾಸಿಕ ನಿಶ್ಚಿತ ಗೌರವಧನವನ್ನು ನವಂಬರ್ ನಿಂದ ತಲಾ 500 ರೂ.ಗೆ ಹೆಚ್ಚಿಸಲು ಹಾಗೂ ನೆರೆ ಪರಿಹಾರಕ್ಕಾಗಿ ವಿಧಾನಮಂಡಲದಲ್ಲಿ ಪೂರಕ ಬಜೆಟ್ ಮಂಡಿಸುವ ಮಹತ್ವದ...

Published: 03rd October 2019 06:53 PM  |   Last Updated: 03rd October 2019 06:53 PM   |  A+A-


Law Minister JC Madhuswamy

ಕಾನೂನು ಸಚಿವ ಮಾಧುಸ್ವಾಮಿ

Posted By : Lingaraj Badiger
Source : UNI

ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಮಾಸಿಕ ನಿಶ್ಚಿತ ಗೌರವಧನವನ್ನು ನವಂಬರ್ ನಿಂದ ತಲಾ 500 ರೂ.ಗೆ ಹೆಚ್ಚಿಸಲು ಹಾಗೂ ನೆರೆ ಪರಿಹಾರಕ್ಕಾಗಿ ವಿಧಾನಮಂಡಲದಲ್ಲಿ ಪೂರಕ ಬಜೆಟ್ ಮಂಡಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಕೈಗೊಂಡಿದೆ. 

ಭಾರೀ ಪ್ರವಾಹದಿಂದ ತೊಂದರೆ ಎದುರಿಸುತ್ತಿರುವ ರಾಜ್ಯಕ್ಕೆ ಕೇಂದ್ರದಿಂದ ಸೂಕ್ತ ನೆರವು ದೊರೆತಿಲ್ಲ ಎಂಬ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಅಧಿವೇಶನದಲ್ಲಿ ನೆರೆ ಪರಿಹಾರ ಕಾರ್ಯಕ್ಕಾಗಿಯೇ ಪೂರಕ ಬಜೆಟ್ ಮಂಡಿಸುವುದಾಗಿ ಸರ್ಕಾರ ಪ್ರಕಟಿಸಿದೆ. 

ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಿಂದ ಬಂದ‌ ಮೇಲೆ ರಾಜ್ಯದ ಇಬ್ಬರು ಅಧಿಕಾರಿಗಳನ್ನು ಕರೆಸಿ ಪರಿಶೀಲನೆ ಮಾಡಿದ್ದಾರೆ. ಎರಡು ಮೂರು ದಿನದಲ್ಲಿ ಪರಿಹಾರ ಬಿಡುಗಡೆಯಾಗುವ ಆಶಾಭಾವನೆ ಇದೆ ಎಂದರು.

ಪ್ರಧಾನಿ ನಮ್ಮ‌ ಮೇಲಿನ ಅಭಿಮಾನದಿಂದ ಆರ್ಥಿಕ ಸಚಿವರು, ಗೃಹ ಸಚಿವರನ್ನು ರಾಜ್ಯಕ್ಕೆ ಕಳುಹಿಸಿದ್ದಾರೆ‌.‌ ಆದರೆ, ಬಿಹಾರಕ್ಕೆ ಬರೇ ಟ್ವೀಟ್ ‌ಮಾಡಿದ್ದಾರೆ ಎಂದು ಪ್ರಧಾನಿ ಅವರನ್ನು ಮಾಧುಸ್ವಾಮಿ ಬಲವಾಗಿ ಸಮರ್ಥಿಸಿಕೊಂಡರು.

ಎಸ್ ಸಿಪಿ ಟಿಎಸ್ ಪಿ ಯೋಜನೆಯಡಿ ದಲಿತ ಕಾಲೋನಿಗಳ ರಸ್ತೆ, ಮನೆಗಳ ನಿರ್ಮಾಣಕ್ಕೆ 1150 ಕೋಟಿ ರೂ. ಹಣವನ್ನು ನಿಗದಿ ಮಾಡಲಾಗಿದೆ. 500 ಕೋಟಿ ರೂ. ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆ ಮಾಡಿದ್ದರೆ, 1000 ಕೋಟಿ ರೂ.‌ ಲೋಕೋಪಯೋಗಿ ರಸ್ತೆ ದುರಸ್ತಿ ಕಾಮಗಾರಿಗಳಿಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಎನ್ ಡಿ ಆರ್ ಎಫ್ ನಿಯಮಾವಳಿಯಡಿಯಲ್ಲಿ ಕೆಲವು ವಲಯಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ‌. ಹಾಗಾಗಿ ನಾವು ವಿಶೇಷ ಪ್ಯಾಕೇಜ್ ಕೇಳಿದ್ದೇವೆ. ಮನೆ ನಿರ್ಮಾಣಕ್ಕೆ ಐದು ಲಕ್ಷ ಕೊಡಲು ಎನ್ ಡಿ ಆರ್ ಎಫ್ ನಿಯಮಾವಳಿಯಲ್ಲಿ ಅವಕಾಶವಿಲ್ಲ‌.‌ ಹಾಗಾಗಿ ವಿಶೇಷ ಪ್ಯಾಕೇಜ್ ಕೇಳಿದ್ದೇವೆ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರ ಗೌರವಧನ 6000 ರೂ. ರಿಂದ 6,500 ರೂ. ಗೆ ಏರಿಕೆ ಮಾಡಲಾಗಿದೆ. ರಾಜ್ಯದಲ್ಲಿ 41,425 ಆಶಾ ಕಾರ್ಯಕರ್ತೆಯರಿದ್ದು, ವಾರ್ಷಿಕ 25 ಕೋಟಿ ರೂ. ಹೊರೆ ಬೀಳಲಿದೆ ಎಂದರು.

ಮಹಾತ್ಮ ಗಾಂಧೀಜಿಯ 150ನೇ ಜಯಂತಿ ಪ್ರಯುಕ್ತ 20 ಶಿಕ್ಷಾರ್ಹ ಖೈದಿಗಳನ್ನು ಬಿಡುಗಡೆ ಗೊಳಿಸಲು ನಿರ್ಧರಿಸಲಾಗಿದ್ದು, ಈ ಪೈಕಿ ಒಬ್ಬರು ಮುನಿ ಅಕ್ಕಯ್ಯಮ್ಮ ಎಂಬ ಮಹಿಳೆ ಸಹ ಸೇರಿದ್ದಾರೆ. ಮೈಸೂರು ಕೇಂದ್ರ‌ ಕಾರಾಗೃಹದಿಂದ ಒಬ್ಬರು, ಬೆಂಗಳೂರು 3, ಕಲಬುರ್ಗಿ 1, ಶಿವಮೊಗ್ಗ 6, ಬಳ್ಳಾರಿ 3 ಖೈದಿಗಳು ಬಿಡುಗಡೆ ಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ ಎಂದರು.

ರಾಜ್ಯದಲ್ಲಿ ಆನೆಗಳ ಹಾವಳಿ ಕಡಿಮೆ ಮಾಡುವ ಉದ್ದೇಶದಿಂದ ಅರಣ್ಯ ಪ್ರದೇಶದಲ್ಲಿ 118 ಕಿ.ಮೀ. ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಾಣಕ್ಕೆ ಒಟ್ಟು 100 ಕೋಟಿ ರೂ. ನೀಡುವ ಜತೆಗೆ ಮೂರು ವರ್ಷದಲ್ಲಿ 628 ಕೋಟಿ ವೆಚ್ಚದಲ್ಲಿ 517.5 ಕಿ.ಮೀ. ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಾಣದ ಗುರಿ ಇದ್ದು, ಈ ಪೈಕಿ 118 ಕಿ.ಮೀ. ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಈ ಪೈಕಿ ನಾಗರಹೊಳೆ ಹುಲಿ ಯೋಜನೆ ಪ್ರದೇಶ 24 ಕಿ.ಮೀ., ಬಂಡೀಪುರ 17, ಮಡಿಕೇರಿ 19, ವಿರಾಜಪೇಟೆ 3, ಮಲೈಮಹದೇಶ್ವರ ಕೊಳ್ಳೆಗಾಲ 13, ಕಾವೇರಿ ವನ್ಯಜೀವಿ ಕೊಳ್ಳಗಾಲ 15, ರಾಮನಗರ 6, ಹಾಸನ 6, ಬನ್ನೇರುಘಟ್ಟ ಉದ್ಯಾನದಲ್ಲಿ 15 ಕಿ.ಮೀ. ಬ್ಯಾರಿಕೇಡ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಕೈಗಾರಿಕಾ ನೀತಿಯಡಿ ಮೆಗಾ, ಸೂಪರ್ ಮೆಗಾ ಯೋಜನೆಗಳಿಗೆ ಮತ್ತು ಕರ್ನಾಟಕ ಏರೋಸ್ಪೇಸ್ ನೀತಿ,  ಕರ್ನಾಟಕ ಎಲೆಕ್ಟ್ರಿಕ್ ವೆಹಿಕಲ್ ಅಂಡ್‌ ಎನರ್ಜಿ ಸ್ಟೋರೇಜ್ ಪಾಲಿಸಿ ಮತ್ತು ನೂತನ ಜವಳಿ ನೀತಿಯಡಿ ಮೆಗಾ ಯೋಜನೆಗಳಿಗೆ ವಿಶೇಷ ರಿಯಾಯಿತಿ ಹಾಗೂ ಉತ್ತೇಜನ ನೀಡಲು ಸಂಪುಟ ಉಪಸಮಿತಿ ರಚನೆಗೆ ತೀರ್ಮಾನಿಸಲಾಗಿದೆ ಎಂದು ಜೆ.ಸಿ. ಮಾಧುಸ್ವಾಮಿ ತಿಳಿಸಿದರು. 

ಕೆಎಸ್ ಆರ್ ಪಿ ತರಬೇತಿಯಲ್ಲಿ ಆಕಸ್ಮಿಕ ಫೈರಿಂಗ್ ವೇಳೆ ಮೃತ ಪಟ್ಟ ಹೊಸಕೋಟೆ ಜಡಿಗೇಹಳ್ಳಿಯ ರೈತನ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಲು ತೀರ್ಮಾನ. ಮಾನವೀಯ ದೃಷ್ಟಿಯಿಂದ ಮಾನವ ಹಕ್ಕು ಆಯೋಗ ಮಗನಿಗೆ ಉದ್ಯೋಗ ನೀಡಲು ಶಿಫಾರಸು ಮಾಡಿತ್ತು, ಆದರೆ ಉದ್ಯೋಗ ಕೊಡಲು ಅವಕಾಶ ಇಲ್ಲದ ಕಾರಣ ಪರಿಹಾರ ನೀಡಲು ನಿರ್ಧರಿಸಲಾಗಿದೆ. ರಾಜ್ಯದ ರಕ್ತನಿಧಿ ಕೇಂದ್ರಗಳು, ಹಾಗೂ ರಕ್ತ ಶೇಖರಣಾ ಕೇಂದ್ರಗಳಿಗೆ ಹೊಸ ಉಪಕರಣ ಖರೀದಿಗೆ ಹಾಗೂ ನಾಲ್ಕು ಹೊಸ‌ ವಿಭಾಗೀಯ ರಕ್ತ ಶೇಖರಣಾ ಘಟಕ ನಿರ್ಮಾಣಕ್ಕೆ ಒಟ್ಟು 12 ಕೋಟಿ ರೂ  ಪ್ರಸ್ತಾವನೆಗೆ ಅನುಮೋದನೆ ಕೊಡಲಾಗಿದೆ. 

ಕಾರ್ಕಳದಲ್ಲಿ ಎಣ್ಣೆಹೊಳೆ ಏತ ನೀರವಾರಿಗಾಗಿ 108 ಕೋಟಿ ರೂ. ಬಿಡುಗಡೆಗೆ ಅಸ್ತು. ಹಾವೇರಿ ಹಾನಗಲ್ ತಾಲೂಕಿನಲ್ಲಿ 77 ಕೆರೆಗಳಿಗೆ ವರದಾ ನದಿಯಿಂದ ನೀರು ಎತ್ತಿ ತುಂಬಿಸಲು 107.55 ಕೋಟಿ ರೂ. ಅನುಮೋದನೆ. ಹಾನಗಲ್ ತಾಲೂಕಿನ 162 ಕೆರೆಗಳಿಗೆ ವರದಾ‌ ನದಿಯಿಂದ ನೀರು ತುಂಬಿಸಲು 386.25 ಕೋಟಿ ಯೋಜನೆ‌ ಮೊತ್ತಕ್ಕೆ ಅನೊಮೋದನೆ. ಸಮಾಜ ಕಲ್ಯಾಣ ಇಲಾಖೆಯಡಿಯ 824  ವಸತಿ ಶಾಲಾ ಕಾಲೇಜಿಗಳಿಗೆ ನೋಟ್ ಬುಕ್ಸ್ ಹಾಗೂ ಸ್ಟೇಷನರಿ ಖರೀದಿಗಾಗಿ 26.26 ಕೋಟಿ ರೂ ಮೊತ್ತದ ಪ್ರಸ್ತಾವನೆಗೆ ಅನುಮೋದ‌ನೆ ದೊರೆತಿದೆ ಎಂದರು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp