ಉಪ ಚುನಾವಣಾ ನೀತಿ ಸಂಹಿತೆ ಮುಂದೂಡಿಕೆ ವಿವಾದ: ವಿಚಾರಣೆ ನಾಳೆಗೆ ಮುಂದೂಡಿಕೆ

ರಾಜ್ಯದ ಅನರ್ಹ ಶಾಸಕರ 15 ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ ಉಪ ಚುನಾವಣೆ ಘೋಷಣೆಯಾಗಿದ್ದರೂ, ನೀತಿ ಸಂಹಿತೆ ಜಾರಿಗೊಳಿಸದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಗುರುವಾರಕ್ಕೆ ಮುಂದೂಡಿದೆ. 
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ರಾಜ್ಯದ ಅನರ್ಹ ಶಾಸಕರ 15 ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ ಉಪ ಚುನಾವಣೆ ಘೋಷಣೆಯಾಗಿದ್ದರೂ, ನೀತಿ ಸಂಹಿತೆ ಜಾರಿಗೊಳಿಸದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಗುರುವಾರಕ್ಕೆ ಮುಂದೂಡಿದೆ. 
  
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಸರ್ಕಾರ ಹಾಗೂ ಚುನಾವಣಾ ಆಯೋಗದ ಪರ ವಕೀಲರು ಗೈರು ಹಾಜರಾಗಿದ್ದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು. 
  
ಜೊತೆಗೆ, ನೀತಿ ಸಂಹಿತೆ ಜಾರಿ ಕುರಿತು ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರ ನೀಡುವಂತೆ ಸರ್ಕಾರ ಹಾಗೂ ಆಯೋಗಕ್ಕೆ ನ್ಯಾಯಪೀಠ ಸೂಚಿಸಿತು. 
  
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ 2019ರ ಸೆಪ್ಟೆಂಬರ್‌ 27ರಂದು ಪ್ರಕಟಿಸಿರುವ ಪರಿಷ್ಕೃತ ವೇಳಾಪಟ್ಟಿ ಮತ್ತು ನೀತಿ ಸಂಹಿತೆ ನವೆಂಬರ್‌ 11ರಿಂದ ಜಾರಿಗೆ ಬರುವಂತೆ ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
  
ಈ 15 ಕ್ಷೇತ್ರಗಳ ಪೈಕಿ 8 ಮಂದಿ ಬಿಜೆಪಿ ಮುಖಂಡರನ್ನು ವಿವಿಧ ನಿಗಮ-ಮಂಡಳಿಗಳಿಗೆ ನೇಮಕ ಮಾಡಿ ಅಕ್ಟೋಬರ್ 9ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ. ಇದು ಕಾನೂನು ಬಾಹಿರ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದ್ದು ಅದನ್ನು ಕೂಡ ರದ್ದುಗೊಳಿಸಬೇಕು ಎಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
   
ಉಪ ಚುನಾವಣೆಗೆ ಮೊದಲು ಸೆ.21ರಂದು ಅಧಿಸೂಚನೆ ಹೊರಡಿಸಿದ್ದ ಚುನಾವಣಾ ಆಯೋಗ ಅದೇ ದಿನದಿಂದ ನೀತಿ ಸಂಹಿತೆ ಸಹ ಜಾರಿಗೆ ಬಂದಿತ್ತು. ಈ ವೇಳೆ ಹಲವು ಮಂದಿ ನಾಮಪತ್ರ ಕೂಡ ಸಲ್ಲಿಸಿದ್ದರು. ಆದರೆ, ಏಕಾಏಕಿ ಈ ಅಧಿಸೂಚನೆಯನ್ನು ರದ್ದುಪಡಿಸಿ ಸೆ.27ರಂದು ಪರಿಷ್ಕೃತ ಅಧಿಸೂಚನೆ ಹೊರಡಿಸಿದ ಚುನಾವಣಾ ಆಯೋಗ ನ.11ರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ತಂದಿದೆ. ಆಡಳಿತ ಪಕ್ಷಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ನೀತಿಸಂಹಿತೆಯ ಜಾರಿಯನ್ನು ಮುಂದೂಡಲಾಗಿದೆ. ಇದು ಕಾನೂನುಬಾಹಿರ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. 
   
ಜೊತೆಗೆ, ಅನರ್ಹ ಶಾಸಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದವರ ಪೈಕಿ 8 ಮಂದಿಯನ್ನು ವಿವಿಧ ನಿಗಮ ಮಂಡಳಿಗಳಿಗೆ ರಾಜ್ಯ ಸಚಿವರ ಸ್ಥಾನಮಾನದೊಂದಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅ.9ರಂದು ಸರ್ಕಾರ ಆದೇಶ ಹೊರಡಿಸಿದೆ. ಇದು ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನ. ಆದ್ದರಿಂದ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರದ ಅಧಿಸೂಚನೆಗಳನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com