50 ವರ್ಷಗಳ ಹಿಂದೆ ಅಸುನೀಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಪ್ರತ್ಯಕ್ಷ! ಕುಟುಂಬಸ್ಥರನ್ನು ಸೇರಿದ 80 ವರ್ಷದ ಅಜ್ಜ

ಸಿನಿಮಾಗಳಲ್ಲಿ ಸಾವಿನ ನಂತರದ ಜೀವನದ ಕಥೆ ಎಂದು ಬರುತ್ತದೆಯಲ್ಲ ಇದು ಅದೇ ರೀತಿ.ವ್ಯಕ್ತಿ ಅಸುನೀಗಿದ್ದಾರೆ ಎಂದು ಮೃತದೇಹವನ್ನು ಕುಟುಂಬದವರು ಬಂಧುಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸುಟ್ಟು ಅಂತಿಮ ಕ್ರಿಯಾ ವಿಧಿ ವಿಧಾನಗಳನ್ನು ನೆರವೇರಿಸಿದ್ದರು.
ಮೊದಲ ಪತ್ನಿ ಈರಜ್ಜಿ ಜೊತೆಗೆ ಈರಣ್ಣ
ಮೊದಲ ಪತ್ನಿ ಈರಜ್ಜಿ ಜೊತೆಗೆ ಈರಣ್ಣ

ಚಿತ್ರದುರ್ಗ: ಸಿನಿಮಾಗಳಲ್ಲಿ ಸಾವಿನ ನಂತರದ ಜೀವನದ ಕಥೆ ಎಂದು ಬರುತ್ತದೆಯಲ್ಲ ಇದು ಅದೇ ರೀತಿ.ವ್ಯಕ್ತಿ ಅಸುನೀಗಿದ್ದಾರೆ ಎಂದು ಮೃತದೇಹವನ್ನು ಕುಟುಂಬದವರು ಬಂಧುಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸುಟ್ಟು ಅಂತಿಮ ಕ್ರಿಯಾ ವಿಧಿ ವಿಧಾನಗಳನ್ನು ನೆರವೇರಿಸಿದ್ದರು. ಸತ್ತ ವ್ಯಕ್ತಿಯನ್ನು ನೆನದು ಕಣ್ಣೀರು ಹಾಕಿ ನಂತರ ತಮ್ಮ ಜೀವನದಲ್ಲಿ ತೊಡಗಿಹೋಗಿದ್ದರು. ಇದು ಸುಮಾರು 50 ವರ್ಷಗಳ ಹಿಂದಿನ ಕಥೆ. ಅದೇ ವ್ಯಕ್ತಿ ಇದ್ದಕ್ಕಿದ್ದಂತೆ  ಪ್ರತ್ಯಕ್ಷನಾದರೆ ಏನಾಗಬಹುದು?


ಆಗಿದ್ದೇನು?: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಚಿತ್ರನಾಯಕನಹಳ್ಳಿಯ ಸಣ್ಣ ಈರಣ್ಣ ಎಂಬ ವ್ಯಕ್ತಿ 30 ವರ್ಷದವರಿದ್ದಾಗ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಇಷ್ಟು ವರ್ಷಗಳ ಕಾಲ ಮರೆಗುಳಿತನದಿಂದ ಅವರು ತಮ್ಮ ಕುಟುಂಬ ತೊರೆದು ಹೋಗಿರಬೇಕು ಎಂದು ಹೇಳಲಾಗುತ್ತಿದೆ. 


ಆಂಧ್ರ ಪ್ರದೇಶದ ಯಪಲಪಾರ್ತಿ ಗ್ರಾಮಕ್ಕೆ ಹೋಗಿದ್ದ ಈರಣ್ಣನ ನೆಂಟರಿಗೆ ಅವರ ಗುರುತು ಸಿಕ್ಕಿತು. ಅವರನ್ನು ಮಾತನಾಡಿಸಿದಾಗ ತಮ್ಮ ಹಿಂದಿನ ಬದುಕಿನ ಕೆಲವು ಘಟನೆಗಳನ್ನು ನೆನಪಿಸಿಕೊಂಡರಂತೆ. ಆಗ ಇದು ಈರಣ್ಣನೇ ಎಂದು ದೃಢವಾಯಿತು. ನಂತರ ವಿಷಯ ಎಲ್ಲರಿಗೂ ಗೊತ್ತಾಗಿ ಚಿತ್ರನಾಯಕನಹಳ್ಳಿಗೆ ಕರೆತಂದಿದ್ದು ಅದ್ದೂರಿಯಿಂದ ಸ್ವಾಗತಿಸಿದ್ದಾರೆ. 


30 ವರ್ಷದ ಯುವಕನಾಗಿದ್ದ ಈರಣ್ಣ ಆಂಧ್ರ ಪ್ರದೇಶಕ್ಕೆ ಹೋಗಿ ಅಲ್ಲಿ ಜೋಗಿ ಬುಡಕಟ್ಟು ಜನಾಂಗದವರ ಜೊತೆ ನೆಲೆಸಿ ಇಬ್ಬರು ಪತ್ನಿಯರನ್ನು ಹೊಂದಿದ್ದು ಮಕ್ಕಳು, ಮೊಮ್ಮಕ್ಕಳು ಕೂಡ ಇದ್ದಾರೆ. ಗ್ರಾಮಸ್ಥರು ಹೇಳುವಾಗ ತಾವು ಹೇಗೆ ಸತ್ತೆ, ಸಮಾಧಿಯಿಂದ ಹೇಗೆ ಎದ್ದು ಬಂದೆ ಎಂಬುದು ಕೂಡ ಅವರಿಗೆ ಗೊತ್ತಿಲ್ಲವಂತೆ. ತಾವು ಕರ್ನಾಟಕದವರೆಂದು ಸಹ ತಿಳಿದಿಲ್ಲವಂತೆ. 


ಇದೀಗ ಚಿತ್ರನಾಯಕನಹಳ್ಳಿಗೆ ಬಂದು ಮೊದಲ ಪತ್ನಿ ಈರಜ್ಜಿಯನ್ನು ಭೇಟಿ ಮಾಡಿದ್ದಾರೆ. ಅವರು ಯಾವಾಗ ಕಾಣೆಯಾದರು ಎಂಬುದು ಯಾರಿಗೂ ಗೊತ್ತಿಲ್ಲ. ಈರಣ್ಣ 50 ವರ್ಷಗಳ ಹಿಂದೆ ಸತ್ತು ಹೋಗಿದ್ದರು ಎಂದಷ್ಟೇ ಗ್ರಾಮಸ್ಥರು ಈಗಲೂ ಹೇಳುವುದು.
ಮೊದಲ ಪತ್ನಿ ಈರಜ್ಜಿ ಮೊದಲು ನಂಬಲೇ ಇಲ್ಲವಂತೆ. ಕೊನೆಗೆ ಈರಣ್ಣ ಅವರೇ ನಿನ್ನ ತೋಳಿನ ಮೇಲೆ ಎತ್ತು ತಿವಿದು ಮಾಡಿದ ಗಾಯದ ಗುರುತು ಇದೆಯೇ ತೋರಿಸು ಎಂದು ಕೇಳಿದಾಗ ಆಕೆ ತೋರಿಸಿದರು. ಆಗ ಅದು ಈರಣ್ಣನೇ ತನ್ನ ಪತಿಯೇ ಎಂದು ಅಜ್ಜಿಗೆ ದೃಢವಾಯಿತಂತೆ. 


ನನಗೆ ತೀರಾ ಆಶ್ಚರ್ಯವಾಯಿತು, ನಾನು ಅಂದು ನನ್ನ ಪತಿಯ ಸಮಾಧಿ ಕ್ರಿಯೆಯಲ್ಲಿ ಭಾಗಿಯಾಗಿದ್ದೆ. ಇಂದು ಅವರು ಬದುಕಿದ್ದಾರೆ ಎಂದು ಕೇಳಿ ಖುಷಿಯೂ ಆಯಿತು, ಅಚ್ಚರಿಯೂ ಆಯಿತು. ಅವರು ಎಲ್ಲೇ ಇರಲಿ, ಚೆನ್ನಾಗಿರಲಿ ಎಂಬುದೇ ನನ್ನ ಹಾರೈಕೆ ಎಂದರು ಈರಜ್ಜಿ.


ಇಂದು ಈರಣ್ಣ ಅವರಿಗೆ 80 ವರ್ಷಗಳಾಗಿವೆ. ಆರಂಭದಲ್ಲಿ ಅವರು ಆಂಧ್ರ ಪ್ರದೇಶದಿಂದ ಚಿತ್ರದುರ್ಗಕ್ಕೆ ಬರಲು ನಿರಾಕರಿಸಿದರು. ಆದರೆ ನಂತರ ಹಲವು ಮಾತುಕತೆಗಳಾದ ನಂತರ ಮೊನ್ನೆ ದೀಪಾವಳಿಗೆ ಬಂದು ತಮ್ಮ ಕುಟುಂಬದವರ ಜೊತೆ ಹಬ್ಬ ಆಚರಿಸಿದ್ದಾರೆ.


ಹಾಗಾದರೆ 50 ವರ್ಷಗಳ ಹಿಂದೆ ಸತ್ತುಹೋದ ವ್ಯಕ್ತಿ ಯಾರು, ಕುಟುಂಬಸ್ಥರು, ಬಂಧುಗಳು ಮತ್ತು ಗ್ರಾಮಸ್ಥರು ಸೇರಿ ಯಾರನ್ನು ಸುಟ್ಟಿದ್ದು, ಈರಣ್ಣನ ಬಾಳಲ್ಲಿ ಆಗಿದ್ದಾದರೂ ಏನು ಎಂಬುದಕ್ಕೆ ಮಾತ್ರ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಮರೆಗುಳಿತನದಿಂದ ಇದ್ದಕ್ಕಿದ್ದಂತೆ ಅವರು ಕಾಣೆಯಾಗಿರಬಹುದು, ಅವರನ್ನು ಹೋಲುತ್ತಿದ್ದ ವ್ಯಕ್ತಿ ನಿಧನರಾಗಿದ್ದಿರಬಹುದು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com