ವಿಶ್ವ ವಿಖ್ಯಾತ ಮೈಸೂರು ದಸರಾಗೆ ಯಡಿಯೂರಪ್ಪಗೆ ಅಧಿಕೃತ ಆಹ್ವಾನ

ಮೈಸೂರು ದಸರಾ ಸ್ವಾಗತ ಸಮಿತಿ ವತಿಯಿಂದ ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಅಧಿಕೃತ ಆಹ್ವಾನ ನೀಡಲಾಯಿತು.
ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ

ಬೆಂಗಳೂರು: ಮೈಸೂರು ದಸರಾ ಸ್ವಾಗತ ಸಮಿತಿ ವತಿಯಿಂದ ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಅಧಿಕೃತ ಆಹ್ವಾನ ನೀಡಲಾಯಿತು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಮೈಸೂರು ‌ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ, ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಶಾಸಕರಾದ ಹರ್ಷವರ್ಧನ್, ನಾಗೇಂದ್ರ ನೇತೃತ್ವದ ನಿಯೋಗ ಭೇಟಿ ಮಾಡಿ ಬಿಎಸ್‌ವೈಗೆ ಅಧಿಕೃತ ಆಹ್ವಾನ ನೀಡಲಾಯಿತು. ಶಾಸಕ ರಾಮ್‌ದಾಸ್ ಗೈರಾಗಿದ್ದರು
.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ,‌ ಮೈಸೂರಿನ‌ ಎಲ್ಲ ಪಕ್ಷಗಳ ಶಾಸಕರೂ ಆಹ್ವಾನಿಸಿದ್ದೇವೆ. ಸೆ. 29 ರಂದು ಬೆಳಗ್ಗೆ 9 ಗಂಟೆಗೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ದಸರಾ ಉದ್ಘಾಟನೆ ನೆರವೇರಲಿದೆ. ಅಕ್ಟೋಬರ್ 8 ರವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿ ದ್ದು. ಸಮಾರಂಭಗಳಿಗೆ ಭಾಗವಹಿಸುವಂತೆ ಈಗಾಗಲೇ ರಜ್ಯಪಾಲರು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಆಹ್ವಾನ ನೀಡಲಾಗಿದೆ ಎಂದರು.

ದಸರಾ ಉತ್ಸವವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದು, ಯುವದಸರಾ ಉದ್ಘಾಟನೆ ನೆರವೇರಿಸಲು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ ಪಿ.ವಿ ಸಿಂಧೂ ಅವರನ್ನು ಆಹ್ವಾನಿಸಲು ಒಂದು ನಿಯೋಗ ತೆರಳಿದೆ ಎಂದರು.

ವಿ.ಸೋಮಣ್ಣ ಅವರಿಗೆ ಮೈಸೂರು ಉಸ್ತುವಾರಿ ನೀಡಿರುವುದಕ್ಕೆ ಬೇಸರಗೊಂಡಿರುವ ಶಾಸಕ ಎಸ್.ಎ. ರಾಮ್‌ದಾಸ್ ನಿಯೋಗದ ಜೊತೆ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ರಾಮದಾಸ್ ಅವರಿಗೆ ದಸರಾ ಸಮಿತಿಯಲ್ಲಿ ಬೇರೆ-ಬೇರೆ ಜವಾಬ್ದಾರಿ ಗಳಿವೆ. ಹಾಗಾಗಿ ಅವರು ಇಂದು ತಮ್ಮ ಜೊತೆ ಬರಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ‌ ನೀಡಿದರು.

ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ  ಹಿರಿಯರಾಗಿದ್ದು, ಅವರಿಗೆ ದಸರಾ ಆಯೋಜನೆ ಬಗ್ಗೆ ಅನುಭವವಿದೆ‌. ಆದ್ದರಿಂದ ತಮಗೆಲ್ಲ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com