ಕೊವಿದ್‍-19: ದೆಹಲಿಯ ತಬ್ಲೀಗ್‌ ಸಭೆಯಲ್ಲಿ ಪಾಲ್ಗೊಂಡಿದ್ದ ಬೀದರ್ ನ 11 ಮಂದಿಗೆ ಸೋಂಕು ದೃಢ

ಇತ್ತೀಚೆಗೆ ನವದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ಧಾರ್ಮಿಕ ಸಭೆಗೆ ಹಾಜರಾಗಿದ್ದ ಜಿಲ್ಲೆಯ 27 ತಂಡದ ಭಾಗವಾಗಿದ್ದ ಕನಿಷ್ಠ 11 ಜನರಲ್ಲಿ ಕೊವಿದ್-19 ಸೋಂಕು ದೃಢಪಟ್ಟಿದೆ ಎಂದು ಬೀದರ್ ಜಿಲ್ಲಾಧಿಕಾರಿ ಎಚ್ ಸಿ ಮಹದೇವ್ ಗುರುವಾರ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀದರ್: ಇತ್ತೀಚೆಗೆ ನವದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ನಡೆದ ಧಾರ್ಮಿಕ ಸಭೆಗೆ ಹಾಜರಾಗಿದ್ದ ಜಿಲ್ಲೆಯ 27 ತಂಡದ ಭಾಗವಾಗಿದ್ದ ಕನಿಷ್ಠ 11 ಜನರಲ್ಲಿ ಕೊವಿದ್-19 ಸೋಂಕು ದೃಢಪಟ್ಟಿದೆ ಎಂದು ಬೀದರ್ ಜಿಲ್ಲಾಧಿಕಾರಿ ಎಚ್ ಸಿ ಮಹದೇವ್ ಗುರುವಾರ ತಿಳಿಸಿದ್ದಾರೆ.

ಜಿಲ್ಲೆಯಿಂದ ನಿಜಾಮುದ್ದೀನ್ ಸಭೆಗೆ ತೆರಳಿದ್ದ 27 ಜನರ ಪೈಕಿ 11 ಮಂದಿಯಲ್ಲಿ ಕೊರೊನಾ ಸೋಂಕು ಧೃಡಪಟ್ಟಿದೆ. ಇನ್ನುಳಿದ 16 ಜನರ ವೈದ್ಯಕೀಯ ವರದಿ ಬರುವುದನ್ನು ನಿರೀಕ್ಷಿಸಲಾಗುತ್ತಿದೆ ಎಂದರು‌.

11ಜನರ ಪೈಕಿ 9 ಜನ ಬೀದರ್‌ನ ಓಲ್ಡ್ ಸಿಟಿ ನಿವಾಸಿಗಳು, ಒಬ್ಬರು ಬಸವಕಲ್ಯಾಣದವರು ಹಾಗೂ ಇನ್ನೊಬ್ಬರು ಚಿಟಗುಪ್ಪ ತಾಲೂಕಿನ ಮನ್ನಾಖ್ಖೇಳಿ ನಿವಾಸಿ ಆಗಿದ್ದಾರೆ ಎಂದು ಡಿಸಿ ಡಾ.‌ಮಹಾದೇವ ವಾಟ್ಸ್‌ಆ್ಯಪ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಈ ಹಿನ್ನೆಲೆ ಕೊರೊನಾ ವೈರಸ್‌ ಸೋಂಕಿತರು ಇರುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಸೋಂಕಿತರು ಸಂಪರ್ಕಿಸಿದ ಜನರ ಶೋಧ ಕಾರ್ಯ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

ಕಲಬುರಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ 27 ಜನರ ಗಂಟಲು ದ್ರವದ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ. ಕೊವಿದ್‍ -19 ಸೋಂಕಿತ ಎಲ್ಲ ರೋಗಿಗಳನ್ನು ಸಂಪರ್ಕತಡೆ(ಕ್ವಾರಂಟೈನ್‍)ನಲ್ಲಿ ಇರಿಸಲಾಗಿದೆ. ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ನಲ್ಲಿರುವ ಪ್ರತ್ಯೇಕ ವಾರ್ಡ್‌ನಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ದೆಹಲಿಗೆ ಹೋಗಿ ಬಂದಿದ್ದವರ ಜೊತೆ ದ್ವಿತೀಯ ಸಂಪರ್ಕದ 98 ಜನರನ್ನು ಸಹ ಗುರುತಿಸಲಾಗಿದೆ. ಇವರೆಲ್ಲರನ್ನು ಗೃಹ ಸಂಪರ್ಕತಡೆಯಲ್ಲಿ ಇರುವಂತೆ ಕಟ್ಟು ನಿಟ್ಟಾಗಿ ಸೂಚಿಸಲಾಗಿದೆ ಎಂದು ಮಹದೇವ್‍ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com